ಗುಂಡ್ಲುಪೇಟೆ: ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವ ಪಟ್ಟಣದಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮೈಸೂರು ರಸ್ತೆಯಿಂದ ಊಟಿ ರಸ್ತೆ, ಚಾಮರಾಜನಗರ ರಸ್ತೆ, ಸಾರಿಗೆ ಬಸ್ ನಿಲ್ದಾಣದ ಎದುರು, ಪಟ್ಟಣದ ಪ್ರಮುಖ ವಾಣಿಜ್ಯ ಮಾರ್ಗವಾದ ಕಿತ್ತೂರು ರಾಣಿ ಚನ್ನಮ್ಮ ರಸ್ತೆ, ಹಳೇ ಆಸ್ಪತ್ರೆ ರಸ್ತೆ, ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಕಲ್ಯಾಣ ಮಂಟಪಗಳಿರುವ ಮಡಹಳ್ಳಿ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ದಿನೇ ದಿನೆ ಬೆಳೆಯುತ್ತಿರುವ ಪಟ್ಟಣಕ್ಕೆ ಪ್ರತಿ ದಿನವೂ ಸಾವಿರಾರು ಜನರು ಆಗಮಿಸುತ್ತಿದ್ದು, ಕಚೇರಿಗಳಿಗೆ ಹೋಗುವವರು ತಮ್ಮ ವಾಹನಗಳನ್ನು ರಸ್ತೆ ಬದಿಗಳಲ್ಲಿಯೇ ನಿಲ್ಲಿಸಬೇಕಾಗಿದೆ.
ಪಾದಚಾರಿ ಮಾರ್ಗವಿಲ್ಲದೆ ಪರದಾಟ: 7 ವರ್ಷದ ಹಿಂದೆ ಪಟ್ಟಣದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಹಿಂದೆ ಇದ್ದ ರಸ್ತೆಯನ್ನು ವಿಸ್ತರಣೆ ಮಾಡಿ ರಸ್ತೆ ವಿಭಜಕ ಅಳವಡಿಸಲಾಗಿತ್ತು. ಆದರೆ ಸ್ಥಳೀಯ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ಅನುಕೂಲವಾಗುವಂತೆ ಬೈಪಾಸ್ ರಸ್ತೆ ನಿರ್ಮಾಣ ಮಾಡಿಲ್ಲ. ಅಲ್ಲದೆ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಹೆದ್ದಾರಿಯ ಎರಡೂ ಬದಿಗಳಲ್ಲಿ ವಿಶಾಲ ಸ್ಥಳಾವಕಾಶ ಮೀಸಲಿಡಲಾಗಿತ್ತು. ಹೆದ್ದಾರಿ ಕಾಮಗಾರಿ ಮುಗಿದ ನಂತರವೂ ಎರಡೂ ಬದಿಗಳ ಫುಟ್‌ಪಾತ್‌ಗಳಲ್ಲಿ ಟೈಲ್ಸ್ ಅಳವಡಿಸುವ ಕಾಮಗಾರಿ ಪೂರ್ಣಗೊಳಿಸದ ಪರಿಣಾಮ ಹೋಟೆಲ್, ಅಂಗಡಿಗಳು, ಫುಟ್‌ಪಾತ್ ವ್ಯಾಪಾರಿಗಳಿಂದ ಒತ್ತುವರಿಯಾಗಿದೆ.
ಇದರಿಂದ ಪಾದಚಾರಿಗಳು ರಸ್ತೆಯ ಬದಿಗಳಲ್ಲಿಯೇ ಸಂಚರಿಸುವಂತಾಗಿದ್ದು, ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿಗಳು ಸಾರಿಗೆ ಬಸ್ ನಿಲ್ದಾಣದೊಳಗೆ ಹೋಗುವ ಪ್ರಯಾಣಿಕರು ರಸ್ತೆ ದಾಟಲು ಪರದಾಡುವಂತಾಗಿದೆ.
ಅತಿ ವೇಗದ ವಾಹನಗಳಿಂದ ಅಪಘಾತ: ರಾತ್ರಿ 9 ಗಂಟೆಗೆ ಬಂಡೀಪುರದ ಚೆಕ್‌ಪೋಸ್ಟ್‌ಗಳು ಮುಚ್ಚುವುದರಿಂದ ಚೆಕ್‌ಪೋಸ್ಟ್ ದಾಟುವ ಧಾವಂತದಲ್ಲಿ ಅತಿವೇಗವಾಗಿ ಸಾಗುವ ಅಂತಾರಾಜ್ಯ ವಾಹನಗಳಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ. ಸಂಜೆ 7 ಗಂಟೆ ನಂತರವಂತೂ ಪ್ರತಿ ದಿನವೂ ಒಂದಲ್ಲ ಒಂದು ಕಡೆ ಅಪಘಾತ ಸಂಭವಿಸಿ ಜೀವಹಾನಿಯಾಗುತ್ತಿದೆ.
ಕಚೇರಿ ಹಾಗೂ ಬ್ಯಾಂಕ್‌ಗಳಿಗೆ ಹೋಗುವವರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಪಟ್ಟಣದ ತಾಲೂಕು ಕಚೇರಿ, ಪುರಸಭೆ, ಅಂಚೆಕಚೇರಿ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಹೋಟೆಲ್ ಮುಂತಾದ ವಾಣಿಜ್ಯ ಕೇಂದ್ರಗಳು ಹೆದ್ದಾರಿಯ ಬದಿಯಲ್ಲಿಯೇ ಇರುವುದರಿಂದ ಜನಜಂಗುಳಿ ಹೆಚ್ಚುವ ಜತೆಗೆ ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆ ತೀವ್ರವಾಗುತ್ತಿದೆ.
ಸುಗಮ ಸಂಚಾರಕ್ಕೆ ಪೊಲೀಸರ ಕ್ರಮ: ಪಟ್ಟಣದ ಎಲ್ಲ ರಸ್ತೆಗಳಲ್ಲಿಯೂ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದ್ದರಾದರೂ ನಿತ್ಯ ಹೆಚ್ಚುತ್ತಿರುವ ವಾಹನಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ.
ಪ್ರಮುಖ ವಾಣಿಜ್ಯ ಚಟುವಟಿಕೆಗಳು ನಡೆಯುವ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಈ ಹಿಂದೆಯೇ ಏಕಮುಖ ಸಂಚಾರ ಮಾಡಲಾಗಿತ್ತು. ಈ ಸಂಬಂಧ ಫಲಕಗಳನ್ನು ಅಳವಡಿಸಲಾಗಿತ್ತಾದರೂ ಪ್ರಯೋಜನವಾಗುತ್ತ್ತಿಲ್ಲ. ಪಕ್ಕದ ಹಳೇ ಆಸ್ಪತ್ರೆ ರಸ್ತೆ ಏಕಮುಖ ಸಂಚಾರವೆಂದು ಇತ್ತೀಚೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಇನ್ನೂ ಜಾರಿಗೆ ತಂದಿಲ್ಲ. ಇದರಿಂದ ಕಿರಿದಾದ ರಸ್ತೆಗಳಲ್ಲಿ ಲಾರಿ, ಕಾರು, ಗೂಡ್ಸ್ ಹಾಗೂ ಪ್ರಯಾಣಿಕರ ಆಟೋಗಳು ನಿಲ್ಲುವುದರಿಂದ ವಾಹನಗಳ ಸಂಚಾರ ದುಸ್ತರವಾಗುತ್ತಿದೆ.
ಹಳೇ ಬಸ್ ನಿಲ್ದಾಣದ ಬಳಿ ನಿಲ್ಲುತ್ತಿದ್ದ ಪ್ರಯಾಣಿಕರ ಆಟೋಗಳನ್ನು ಹಳೆಯ ಪೊಲೀಸ್ ಠಾಣೆ ಆವರಣ ಹಾಗೂ ಹಳೇ ಆಸ್ಪತ್ರೆ ರಸ್ತೆಗೆ, ಕಾರು ಹಾಗೂ ಟೆಂಪೋಗಳನ್ನು ಮಡಹಳ್ಳಿ ರಸ್ತೆಗೆ ಸ್ಥಳಾಂತರಿಸಲಾಗಿದೆ. ಆದರೂ ಆ ಸ್ಥಳಗಳಲ್ಲಿ ತಳ್ಳುಗಾಡಿಗಳು ನಿಲ್ಲುತ್ತಿವೆ. ಇದರಿಂದ ಯಾವುದೇ ರಸ್ತೆಗಳಲ್ಲಿಯೂ ಕಾರು ಮುಂತಾದ ವಾಹನಗಳಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ.
ಅನಧಿಕೃತ ಪಾರ್ಕಿಂಗ್ ತಾಣವಾದ ತಾಲೂಕು ಕಚೇರಿ ಆವರಣ: ತಾಲೂಕು ಕಚೇರಿ ಸುತ್ತಲೂ ತಂತಿ ಬೇಲಿ ಅಳವಡಿಸಿ ಕಳೆದ ವರ್ಷದವರೆಗೂ ವಾಹನಗಳ ಅನಧಿಕೃತ ಪಾರ್ಕಿಂಗ್ ತಡೆಗಟ್ಟಲಾಗಿತ್ತು. ಆದರೆ ಇತ್ತೀಚೆಗೆ ತಾಲೂಕು ಆಡಳಿತ ತಂತಿ ಬೇಲಿ ತೆರವು ಮಾಡಿದ್ದರಿಂದ ಮೈಸೂರು ಮುಂತಾದ ಕಡೆಗಳಿಗೆ ಹೋಗುವವರು ತಮ್ಮ ಕಾರು ಮತ್ತು ಬೈಕುಗಳನ್ನು ನಿಲ್ಲಿಸುವ ಮೂಲಕ ಅನಧಿಕೃತ ಪಾರ್ಕಿಂಗ್ ತಾಣವನ್ನಾಗಿಸಿಕೊಂಡಿದ್ದಾರೆ.
ತೆರೆದ ಬಯಲಿನಲ್ಲಿ ಮರಗಿಡಗಳ ಕೆಳಗೆ ಹಾಗೂ ಕಚೇರಿಯ ಸುತ್ತಲೂ ಎಲ್ಲೆಂದರಲ್ಲಿ ವಾನಹ ನಿಲ್ಲಿಸುವುದರಿಂದ ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ದಿನೇ ದಿನೇ ಬೆಳೆಯುತ್ತಿರುವ ಪಟ್ಟಣದಲ್ಲಿ ಸಂಚಾರ ನಿಯಂತ್ರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗೆ ಹೋಗುವವರು ತಮ್ಮ ವಾಹನಗಳನ್ನು ಅವುಗಳ ಎದುರೇ ನಿಲ್ಲಿಸುವುದರಿಂದ ಹೆದ್ದಾರಿಯಲ್ಲಿ ವಾಹನಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆ ದಾಟುವ ಪಾದಚಾರಿಗಳು ಅಪಘಾತಕ್ಕೊಳಗಾಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ವಾಹನಗಳ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕು.
ಚಿದಾನಂದ, ಪಟ್ಟಣದ ನಿವಾಸಿ
ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಳಿಯಲ್ಲಿರುವ ಪುರಸಭೆ ಸ್ಥಳದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ನೀಡುವಂತೆ ಪುರಸಭೆಗೆ ಮನವಿ ಮಾಡಲಾಗಿದೆ. ಬ್ಯಾಂಕ್‌ನವರು ತಮ್ಮ ಗ್ರಾಹಕರ ವಾಹನಗಳಿಗೆ ಪಾರ್ಕಿಂಗ್ ಸ್ಥಳ ನಿಗದಿಸುವಂತೆ ತಿಳಿಸಲಾಗಿದ್ದು ಬೇರೆಡೆಗಳಿಗೆ ಸ್ಥಳಾಂತರವಾಗುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಕಳೆದ ವಾರ ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು ಪ್ರತ್ಯೇಕ ಸಂಚಾರಿ ಪೊಲೀಸ್ ಠಾಣೆ ಆರಂಭಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಪರಶಿವಮೂರ್ತಿ ಸರ್ಕಲ್ ಇನ್ಸ್‌ಪೆಕ್ಟರ್, ಗುಂಡ್ಲುಪೇಟೆ ಪೊಲೀಸ್ ಠಾಣೆ