ಪ್ರಸೂತಿ ತಜ್ಞೆ ಜಲ್ಲೆ ಜಡೆ ಮಾದಮ್ಮ ನಿಧನ

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನ ನಿವಾಸಿ, ಪ್ರಸೂತಿ ತಜ್ಞೆ ಜಲ್ಲೆ ಜಡೆ ಮಾದಮ್ಮ (60) ಮಂಗಳವಾರ ಸಂಜೆ ನಿಧನರಾದರು.

ತಿಂಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಅವರು ಯಾವುದೇ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಪಡೆದಿರಲಿಲ್ಲ. ಬದಲಿಗೆ ಗಿಡಮೂಲಿಕೆಗಳಿಂದ ಸ್ವಯಂಚಿಕಿತ್ಸೆ ಮಾಡಿಕೊಂಡಿದ್ದರೆನ್ನಲಾಗಿದೆ. ಕಾಡು ಮಕ್ಕಳ ತಾಯಿ ಎಂದೇ ಕರೆಯಲಾಗುತ್ತಿದ್ದ ಇವರಿಗೆ 2015 ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವವಿಸಿದ್ದವು.

ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಿತು. ಬಿಳಿಗಿರಿರಂಗನಬೆಟ್ಟದ ವಿವಿಧ ಪೋಡುಗಳು ಸೇರಿ ವಿವಿಧ ಜಿಲ್ಲೆಗಳ ಸೋಲಿಗ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಹೆರಿಗೆ ಸೇವೆಯಿಂದಲೇ ಮನೆ ಮಾತಾಗಿದ್ದರು: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸರಾಗವಾಗಿ ಹೆರಿಗೆ ಮಾಡಿಸುತ್ತಿದ್ದ ಜಲ್ಲೆ ಜಡೆ ಮಾದಮ್ಮನ ಸೇವಾ ಕೈಂಕರ್ಯವನ್ನು ಅನನ್ಯ. 2 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಅವರ ಸೇವೆಯನ್ನು ಎಲ್ಲರೂ ನೆನೆಯುತ್ತಾರೆ.

ಜಲ್ಲೆ ಜಡೆ ಮಾದಮ್ಮ ಜನಿಸಿದ್ದು ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಪೋಡಿನಲಿ.್ಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಜಲ್ಲೆ ಸಿದ್ದಮ್ಮ ಹಾಗೂ ಜಲ್ಲೆ ಮಾದೇಗೌಡ ದಂಪತಿಗೆ ಜನಿಸಿದ 16 ಮಕ್ಕಳ ಪೈಕಿ ಎರಡನೆಯ ಪುತ್ರಿ ಜಲ್ಲೆ ಜಡೆ ಮಾದಮ್ಮ.

ಹೆರಿಗೆ ಮಾಡಿಸುವುದನ್ನು ತನ್ನ ತಾಯಿಯಿಂದ ಹಾಗೂ ಅಜ್ಜಿಯಿಂದ ಬಳುವಳಿಯಾಗಿ ಪಡೆದುಕೊಂಡಿದ್ದರು. ಬೆಟ್ಟದ ಯರಕನಗದ್ದೆ ಪೋಡು ಎಂದರೆ ಜಲ್ಲೆ ಜಡೆ ಮಾದಮ್ಮನ ಪೋಡೆಂದೇ ಪ್ರಸಿದ್ಧಿ ಪಡೆದಿರುವಷ್ಟು ಇವರು ಜನಪ್ರಿಯರಾಗಿದ್ದರು.

ವಿಶಿಷ್ಟವಾಗಿ ಹೆರಿಗೆ ಮಾಡಿಸುತ್ತಿದ್ದರು: ಹೆರಿಗೆ ನೋವು ಕಾಣಿಸಿಕೊಂಡು ಮಗು ಆಗುವ ಸಂದರ್ಭದಲ್ಲಿ ಗರ್ಭಿಣಿಯನ್ನು ಗೋಡೆಗೆ ಒರಗಿಸಿ ಕುಳ್ಳಿರಿಸಿ ಸರಾಗವಾಗಿ, ಸುಲಭವಾಗಿ ಹೆರಿಗೆ ಮಾಡಿಸುತ್ತಿದ್ದ ವಿಧಾನ ವೈಜ್ಞಾನಿಕ ವೈದ್ಯ ಪದ್ಧತಿಯ ಮತ್ತೊಂದು ಮೈಲುಗಲ್ಲಾಗಿತ್ತು. ಮಹಿಳೆಯರಿಗೆ ಋತುಚಕ್ರ ನಿಲ್ಲಲು ನಾಟಿ ಔಷಧವನ್ನು ಸಹ ಇವರು ನೀಡುತ್ತಿದ್ದರು.

ಹಣದ ಆಸೆ ಇಲ್ಲದೆ ಸೇವೆ: ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡರೆ ಆ ಕುಟುಂಬದ ಸದಸ್ಯರು ತಕ್ಷಣ ಬಂದು ಭೇಟಿಯಾದರೆ ಸಾಕು ಮಧ್ಯರಾತ್ರಿಯಾದರೂ ಸರಿಯೇ, ಕಾಡು ಪ್ರಾಣಿಗಳಿಗೂ ಅಂಜದೆೆ ಪಂಜು ಹಿಡಿದು ಹೋಗಿ ಹೆರಿಗೆ ಮಾಡಿಸುತ್ತಿದ್ದರು. ಹಣಕ್ಕೆ ಆಸೆ ಪಡುತ್ತಿರಲಿಲ್ಲ.

2 ಸಾವಿರಕ್ಕೂ ಹೆಚ್ಚು ಹೆರಿಗೆ: ಜಲ್ಲೆ ಜಡೆ ಮಾದಮ್ಮ 2 ಸಾವಿರಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿದ್ದರು. ಪ್ರಾರಂಭದ ದಿನಗಳಲ್ಲಿ ಹೆರಿಗೆ ಸಂಖ್ಯೆ ದಾಖಲಿಸಿಕೊಳ್ಳದ ಇವರು ನಂತರ ಪ್ರತಿ ಮಗುವಿನ ಹೆಸರನ್ನು ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಪತಿ ನಿಧನರಾದ ನಂತರವೂ ಹೆರಿಗೆ ಮಾಡಿಸುವ ಕಾಯಕವನ್ನು ಮುಂದುವರಿಸಿದ್ದರು. ಇಂತಹ ಪ್ರಸೂತಿ ತಜ್ಞೆಯನ್ನು ಕಳೆದುಕೊಂಡಿರುವುದು ನಮಗಾದ ನಷ್ಟವೇ ಸರಿ ಎನ್ನುತ್ತಾರೆ ಸ್ಥಳೀಯ ಮಾದೇಗೌಡ, ಜಡೇಗೌಡ, ಕೇತಮ್ಮ ಹಾಗೂ ಸಣ್ಣಮ್ಮ.

Leave a Reply

Your email address will not be published. Required fields are marked *