ಟಿಇಟಿ ಅಭ್ಯರ್ಥಿಗಳಿಗೆ ಬರೆ

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸರ್ಕಾರ ಶಿಕ್ಷಕರ ಹುದ್ದೆಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಆಯೋಜಿಸುತ್ತಿದೆ. ಆದರೆ, ಈ ಪರೀಕ್ಷೆಯ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಕೇಂದ್ರೀಕೃತ ದಾಖಲಾತಿ ಘಟಕದಿಂದ ನಡೆದ ಟಿಇಟಿಯಲ್ಲಿ ಕೆಲವು ತಪ್ಪು ಉತ್ತರ ಪ್ರಕಟಿಸಲಾಗಿದೆ. ಈ ಬಗ್ಗೆ ಘಟಕದ ಗಮನಕ್ಕೆ ತಂದಿದ್ದರೂ ಸರಿ ಉತ್ತರ ಪ್ರಕಟಿಸಿಲ್ಲ ಎಂದು ವಿಜಯವಾಣಿ ಸಹಾಯವಾಣಿಗೆ ಅಭ್ಯರ್ಥಿಯೊಬ್ಬರು ಕರೆ ಮಾಡಿದ್ದರು. ಈ ಕುರಿತು ನಮ್ಮ ವರದಿಗಾರ ಅಶೋಕ್ ನೀಮಕರ್ ವರದಿ ಮಾಡಿದ್ದಾರೆ.

ವಿಜಯವಾಣಿ ವಿಶೇಷ

ಬಳ್ಳಾರಿ: ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಕೆಲವು ತಪ್ಪು ಉತ್ತರ ಗಳನ್ನು ಪ್ರಕಟಿಸಿ ಅಭ್ಯರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಆಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೇಂದ್ರೀಕೃತ ದಾಖಲಾತಿ ಘಟಕ(ಸಿಎಸಿ) 2019ರ ಫೆ.3ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಿತ್ತು. 150 ಅಂಕಗಳಿಗೆ ಪರೀಕ್ಷೆ ನಡೆದಿದ್ದು, ಪ್ರಶ್ನೆಪತ್ರಿಕೆ ಬಹು ಆಯ್ಕೆ ಮಾದರಿ ಉತ್ತರ ಒಳಗೊಂಡಿತ್ತು. ಕೆಲ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಸರಿ ಉತ್ತರಗಳನ್ನು ನೀಡಲಾಗಿದೆ. ಇನ್ನು ಕೆಲ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡಲಾಗಿದೆ. ತಪ್ಪು ಉತ್ತರಗಳ ಕುರಿತು ಆಕ್ಷೇಪಣೆ ಸಲ್ಲಿಸಲಾಗಿತ್ತು. ಆದರೆ, ಮಾ. 10ಕ್ಕೆ ಪ್ರಕಟಿಸಲಾದ ಅಂತಿಮ ಉತ್ತರ ಪಟ್ಟಿಯಲ್ಲಿ ತಪ್ಪುಗಳು ಮರುಕಳಿಸಿವೆ ಎಂಬುದು ಅಭ್ಯರ್ಥಿಗಳ ಆರೋಪ.

ಶೈಕ್ಷಣಿಕ ಮನೋವಿಜ್ಞಾನದ 3, ಸಾಮಾಜಿಕ ವಿಜ್ಞಾನದ 1 ಪ್ರಶ್ನೆಗೆ ಸಿಎಸಿ ತಪ್ಪು ಉತ್ತರ ನೀಡಿದೆ. ವಿಕಾಸ ಎಂದರೆ ಎಂಬ 72ನೇ ಪ್ರಶ್ನೆಗೆ ಶೈಕ್ಷಣಿಕ ಮನೋವಿಜ್ಞಾನ ಪುಸ್ತಕದ ಪ್ರಕಾರ ಗುಣಾತ್ಮಕ ಬದಲಾವಣೆ ಸರಿಯಾದ ಉತ್ತರ. ಆದರೆ, ಸಿಎಸಿ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಬದಲಾವಣೆ ಎಂಬ ಉತ್ತರ ನೀಡಿದೆ. ಅಂತಮುಖ ಇದಕ್ಕೆ ಸಂಬಂಧಿಸಿದ 85ನೇ ಪ್ರಶ್ನೆಗೆ ಸೃಜನಶೀಲತೆ ಸರಿ ಉತ್ತರವಾಗಿದ್ದರೂ ಸಾಮಾಜಿಕ ಚಟುವಟಿಕೆ ಕೀ ಉತ್ತರದಲ್ಲಿ ತಿಳಿಸಲಾಗಿದೆ. ನೈದಾನಿಕ ಪರೀಕ್ಷೆಯ ಈ ಅಂಶವನ್ನು ಗುರುತಿಸಲು ರೂಪಿಸಲಾಗುತ್ತದೆ ಎಂಬ 83ನೇ ಪ್ರಶ್ನೆಗೆ ಕಲಿಕಾ ಸಮಸ್ಯೆ ಹಾಗೂ ಕಲಿಕಾ ನ್ಯೂನತೆ ಎಂಬ 2 ಸರಿ ಉತ್ತರ ನೀಡಲಾಗಿದೆ. ಉತ್ತರ ಸಂಖ್ಯೆ 1 ಹಾಗೂ 2 ಸರಿ ಎಂಬುದರ ಬದಲಿಗೆ ಕಲಿಕಾ ಸಮಸ್ಯೆ ಮಾತ್ರ ಸರಿ ಉತ್ತರ ಎಂದು ಪ್ರತಿಪಾದಿಸಲಾಗುತ್ತಿದೆ.

ಜನಸಂಖ್ಯೆ ಬೆಳವಣಿಗೆಗೆ ಮುಖ್ಯವಾದ 3 ಅಂಶಗಳೆಂದರೆ ಎಂಬ 112ನೇ ಪ್ರಶ್ನೆಗೆ ಜನನ, ಮರಣ ಮತ್ತು ಆಯಸ್ಸು ಸರಿ ಉತ್ತರ. ಆದರೆ, ಜನನ, ಮರಣ ಮತ್ತು ವಲಸೆ ಸರಿ ಉತ್ತರ ಎಂದು ಪ್ರಕಟಿಸಲಾಗಿದೆ ಎಂಬುದು ಅಭ್ಯರ್ಥಿಗಳ ಆರೋಪ. ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ಪರಿಶಿಷ್ಟ ಜಾತಿ, ಸಮುದಾಯದವರು ಕನಿಷ್ಠ 83 ಹಾಗೂ ಇತರರು 90 ಅಂಕಗಳನ್ನು ಕಡ್ಡಾಯ ಪಡೆಯಬೇಕು. ಆದರೆ, ಸಿಎಸಿ ಪ್ರಕಟಿಸಿರುವ ತಪ್ಪು ಉತ್ತರಗಳಿಂದ ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ತಪ್ಪು ಉತ್ತರಗಳ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂಬುದು ಅಭ್ಯರ್ಥಿಗಳ ಆಗ್ರಹ.

ಕನ್ನಡ-ಇಂಗ್ಲಿಷ್ ಮಾಧ್ಯಮ ಅಭ್ಯರ್ಥಿಗಳಲ್ಲಿ ತಾರತಮ್ಯ

ಹುಬ್ಬಳ್ಳಿ: ಟಿಇಟಿ-2018ರ ಫಲಿತಾಂಶ ಹೊರಬಂದಿದ್ದು, ಅಭ್ಯರ್ಥಿಗಳಲ್ಲಿ ಹಲವು ಗೊಂದಲ ಹುಟ್ಟು ಹಾಕಿದೆ. ನಿಯಮ ಪ್ರಕಾರ 150 ಅಂಕಗಳಿಗೆ ಶೇ.60 (ಅಂದರೆ 90 ಅಂಕ) ಬಂದರೆ ಸಾಮಾನ್ಯ ವರ್ಗದವರು ಅರ್ಹರು, 75 (ಶೇ. 55) ಅಂಕ ಬಂದರೆ ಎಸ್ಸಿ-ಎಸ್ಟಿ, ಕೆಟಗರಿ-1ರವರು ಅರ್ಹರಾಗುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಉತ್ತರ ಬರೆದ ಅಭ್ಯರ್ಥಿಗಳಿಗೆ ಫಲಿತಾಂಶ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಫೆ. 3ರಂದು ನಡೆದ ಪತ್ರಿಕೆ-2ರಲ್ಲಿ ಭಾಷೆ-1 ಕನ್ನಡ, ಭಾಷೆ-2 ಇಂಗ್ಲಿಷ್ ಹಾಗೂ ಗಣಿತ ವಿಜ್ಞಾನ ಪರೀಕ್ಷೆಯನ್ನು ಅಭ್ಯರ್ಥಿಯೊಬ್ಬರು ಕನ್ನಡದಲ್ಲಿ ಬರೆದಿದ್ದರು. ಅಭ್ಯರ್ಥಿಗಳಿಗೆ ಫೆ.18ರಂದು ಕ್ಯೂಆರ್ ಕೋಡ್ ದತ್ತಾಂಶ ಹೊಂದಿರುವ ಪೂರ್ವಮುದ್ರಿತ ಒಎಂಆರ್ ಉತ್ತರ ಪತ್ರಿಕೆ, ಕೀ ಉತ್ತರವನ್ನು ಇಲಾಖೆ ವೆಬ್​ಸೈಟ್​ನಲ್ಲಿ ನೀಡಲಾಯಿತು. ಅದರಂತೆ ಈ ಅಭ್ಯರ್ಥಿಯ ಅಂಕ 91 ಆಗಿತ್ತು. ಬಳಿಕ ಪರಿಷ್ಕೃತ ಕೀ ಉತ್ತರ ಮಾ. 8ರಂದು ಪ್ರಕಟಿಸಲಾಯಿತು. ಅದರ ಪ್ರಕಾರ ಗಣಿತ (ಕನ್ನಡ ಮಾಧ್ಯಮದವರಿಗೆ) 93ನೇ ಪ್ರಶ್ನೆಗೆ ಕೊಟ್ಟ ಉತ್ತರವೆಲ್ಲವೂ ತಪ್ಪಾಗಿದ್ದಕ್ಕೆ ಸ್ಟಾರ್ ಎಂದು ನಮೂದಿಸಿ, ಇದು ಪರಿಗಣನೆಗೆ ಇಲ್ಲ ಎಂದಿದ್ದರು.

ಆದರೆ ಇಂಗ್ಲಿಷ್ ಮಾಧ್ಯಮ ಗಣಿತದ ಪ್ರಶ್ನೆ ಕನ್ನಡ ಮಾಧ್ಯಮದ ಪ್ರಶ್ನೆಯಂತೆಯೇ ಇದ್ದು, ಅದಕ್ಕೆ ಉತ್ತರ 4 ಎಂದು ನಮೂದಿಸಿದ್ದಾರೆ. ಅದೇ ರೀತಿ ಮಾ.9ರಂದು ಟಿಇಟಿ ಫಲಿತಾಂಶ ನೀಡಿದ್ದು, ಅದರ ಪ್ರಕಾರ ಇಲಾಖೆ 93ನೇ ಪ್ರಶ್ನೆ ಪರಿಗಣಿಸಿಲ್ಲ. ಗ್ರೇಸ್ ಅಂಕ ಕೂಡ ನೀಡದೆ 150ರಲ್ಲಿ 149 ಪ್ರಶ್ನೆ ಗಣನೆಗೆ ತೆಗೆದುಕೊಂಡು ಈ ಅಭ್ಯರ್ಥಿಯ ಫಲಿತಾಂಶದಲ್ಲಿ 149ಕ್ಕೆ 89 ಎಂದು ನಮೂದಿಸಿದೆ. ಸುತ್ತೋಲೆ ಪ್ರಕಾರ 150ಕ್ಕೆ 90 ಅರ್ಹತೆಯಾದರೆ, 149ಕ್ಕೆ 89 ಅಂಕ (ಶೇ. 59.73) ಬರುತ್ತದೆ. ಆದರೆ, ಯಾವುದೇ ಗ್ರೇಸ್ ಅಂಕ ಕೊಡದೆ 89ನ್ನು ಅರ್ಹತೆ ಇದ್ದರೂ ರಿಮಾರ್ಕ್ಸ್​ನಲ್ಲಿ ನಾಟ್ ಕ್ವಾಲಿಫೈಡ್ ಎಂದು ನೀಡಲಾಗಿದೆ.

ಒಂದೊಂದು ಅಂಕವೂ ನಮ್ಮ ಜೀವನ ರೂಪಿಸುತ್ತದೆ. ಆದರೆ, ತಪ್ಪು ಉತ್ತರಗಳಿಂದ ಅನೇಕ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದೆ. ನಾನು 89 ಅಂಕ ಪಡೆದು ಕೇವಲ ಒಂದು ಅಂಕದಿಂದ ಶಿಕ್ಷಕರ ಹುದ್ದೆಗೆ ಅನರ್ಹನಾಗಿದ್ದೇನೆ. ತಪ್ಪು ಉತ್ತರಗಳನ್ನು ಪ್ರಕಟಿಸಿದ್ದರಿಂದ ಆಗಿರುವ ಲೋಪ ದೋಷ ಸರಿಪಡಿಸಿ ಅಂಕಗಳನ್ನು ನೀಡಿದರೆ ನಮ್ಮ ಭವಿಷ್ಯ ರೂಪುಗೊಳ್ಳಲಿದೆ.

| ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ

ಅರ್ಹತಾ ಪರೀಕ್ಷೆ ಅಪರೂಪ

ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಆದೇಶದಂತೆ ರಾಜ್ಯದಲ್ಲಿ 2014ರಿಂದ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿದೆ. ಶಿಕ್ಷಕರ ಹುದ್ದೆಗಳು ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದರೂ ಅರ್ಹತಾ ಪರೀಕ್ಷೆ ಅಪರೂಪ ಎನ್ನುವಂತಾಗಿದೆ. ಇದುವರೆಗೆ 4 ಬಾರಿ ಪರೀಕ್ಷೆ ನಡೆಸಲಾಗಿದೆ. 2016ರ ಬಳಿಕ 2019ರ ಫೆಬ್ರವರಿಯಲ್ಲಿ ಪರೀಕ್ಷೆ ನಡೆದಿದೆ. ಬಹುತೇಕ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಿಗದಿತ ಅಂಕ ಪಡೆಯಲು ಸಾಧ್ಯವಾಗದೆ ಮತ್ತೆ ಅಧಿಸೂಚನೆಗಾಗಿ ಕಾಯುವ ಪರಿಸ್ಥಿತಿ ಇದೆ. ಇದರಿಂದ ಪ್ರತಿವರ್ಷ ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಇದೆ.

ಅರ್ಹತೆ ಇದ್ದರೂ ಅನ್ಯಾಯ

ಅರ್ಹತೆ ಇದ್ದರೂ ತಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅನೇಕ ಅಭ್ಯರ್ಥಿಗಳು ದೂರಿದ್ದಾರೆ. ಈ ಹಿಂದೆ ನಡೆದ ಟಿಇಟಿಯಲ್ಲಿ 89 ಅಂಕ ಬಂದವರನ್ನು 90 ಎಂದು 1 ಅಂಕ ನೀಡಿರುತ್ತಾರೆ. ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮಾ. 10ರಿಂದ ಪದವೀಧರ ಶಿಕ್ಷಕ ಹುದ್ದೆಗೆ ಅರ್ಜಿ ಕರೆದಿದ್ದಾರೆ. ಇನ್ನೊಂದೆಡೆ ಗಣಿತದ 93ನೇ ಪ್ರಶ್ನೆಗೆ ಗ್ರೇಸ್ ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ಇದೇ ರೀತಿ 96ನೇ ಪ್ರಶ್ನೆಗೂ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಬೇರೆ ಫಲಿತಾಂಶ ನೀಡಿ ಕನ್ನಡ ಮಾಧ್ಯಮದವರಿಗೆ ಅನ್ಯಾಯ ಮಾಡಲಾಗಿದೆ ಎಂಬುದು ಆಕಾಂಕ್ಷಿಗಳ ದೂರು.