ಗುಂಡ್ಲುಪೇಟೆ: ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಗುರುವಾರ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಆಯೋಜಿಸಲಾಯಿತು.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಶ್ರೀ ಮದ್ದಾನೇಶ್ವರ ಶಾಲೆ ಮತ್ತು ದೊಡ್ಡಹುಂಡಿಭೋಗಪ್ಪ ಸರ್ಕಾರಿ ಕಿರಿಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕನ್ನಡ ಸಂಘಟನೆಗಳ ಸದಸ್ಯರ ಜತೆಗೂಡಿ ಆಯೋಜಿಸಿದ್ದ ಜಾಥಾಕ್ಕೆ ಡಿವೈಎಸ್‌ಪಿ ಲಕ್ಷ್ಮಯ್ಯ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವುದರಿಂದ ತಲೆಗೆ ಪೆಟ್ಟುಬಿದ್ದು ಸಾವಿಗೀಡಾಗುವ ಅಪಾಯವಿದೆ. ಆದ್ದರಿಂದ ಪ್ರತಿಯೊಬ್ಬರೂ ಆಯಾ ಕುಟುಂಬಕ್ಕೆ ಪ್ರಮುಖರಾಗಿದ್ದು ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದ್ದರೆ ಆಕಸ್ಮಿಕ ಅಪಘಾತಗಳಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಪೊಲೀಸರು ದಂಡ ವಿಧಿಸುತ್ತಾರೆ ಎಂಬುದಕ್ಕಿಂತ ತಮ್ಮ ಅಮೂಲ್ಯ ಜೀವಕ್ಕಾಗಿ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸುವಂತಾಗಬೇಕು ಎಂದು ಆಶಿಸಿದರು.
ಹೆಲ್ಮೆಟ್ ಧರಿಸಿದ ಸವಾರರಿಗೆ ಹೂ ನೀಡಿ ಗೌರವಿಸಲಾಯಿತು. ಗೃಹರಕ್ಷಕ ದಳದ ನೌಕರ ಸಿದ್ದರಾಜು ಆನೆಯ ಮುಖವಾಡ ಧರಿಸಿ ನಿಮ್ಮ ತಲೆಯನ್ನು ನೋಡಿಕೊಳ್ಳಿ, ನನ್ನಂತೆ ಎಲ್ಲರಿಗೂ ಬದಲಿ ಸಿಗುವುದಿಲ್ಲ ಎಂಬ ಬರಹದ ಬ್ಯಾನರ್ ಹಿಡಿದು ಜಾಥಾದಲ್ಲಿ ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು. ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಿಂದ ಚಾಮರಾಜನಗರ ಜೋಡಿ ರಸ್ತೆಯಲ್ಲಿ ಸಾಗಿದ ಜಾಥಾ ಪ್ರವಾಸಿ ಮಂದಿರದ ಬಳಿ ಸಂಪನ್ನಗೊಂಡಿತು.
ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಜಯಕುಮಾರ್, ಸಬ್‌ಇನ್‌ಸ್ಪೆಕ್ಟರ್ ಸಾಹೇಬಗೌಡ, ಸಿಬ್ಬಂದಿ ಗಂಗಾಧರ್, ಮಹೇಶ, ನಟೇಶ್, ಶಿವಕುಮಾರ್, ಕನ್ನಡ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಇದ್ದರು.