ಪ್ರಮಾಣವಚನಕ್ಕೆ ದೆಹಲಿಗೆ ತೆರಳಿದ್ದ ಈ ಸಂಸದರು ಪಂಚಾತಾರಾ ಹೋಟೆಲ್​ ಕೊಠಡಿಗಾಗಿ ಜಗಳವಾಡಿದರಾ?

ನವದೆಹಲಿ: ಪಂಚತಾರಾ ಹೋಟೆಲ್​ನಲ್ಲಿ ಕೊಠಡಿ ವಿಚಾರಕ್ಕೆ ದೆಹಲಿಯಲ್ಲಿ ಮಂಡ್ಯ ಸಂಸದ ಶಿವರಾಮೇಗೌಡ ಗಲಾಟೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಶಿವರಾಮೇಗೌಡರು ಲೋಕಸಭಾ ಸದಸ್ಯನಾಗಿ ಪ್ರಮಾಣವಚನ ಸ್ವೀಕರಿಸಲು ಕುಟುಂಬ ಸಮೇತ ದೆಹಲಿಗೆ ತೆರಳಿದ್ದರು. ತಾವೇ ಹಣ ಕೊಟ್ಟು ಎರಡು ದಿನಗಳ ಮಟ್ಟಿಗೆ ಪಂಚತಾರಾ ಹೋಟೆಲ್​ನಲ್ಲಿ ರೂಂ ಕಾಯ್ದಿರಿಸಿದ್ದರು. ಮೂರನೇ ದಿನ ಕೊಠಡಿ ಖಾಲಿ ಮಾಡುವಂತೆ ಹೋಟೆಲ್​ ವ್ಯವಸ್ಥಾಪಕರು ಸಂಸದರ ಬಳಿ ಮನವಿ ಮಾಡಿದ್ದರು. ಬೇರೆಯವರಿಗೆ ಕೊಠಡಿ ನೀಡಬೇಕು. ಹಾಗಾಗಿ ರೂಂ ಬಿಟ್ಟುಕೊಡಿ ಎಂದು ಹೋಟೆಲ್​ ಸಿಬ್ಬಂದಿ ಕೇಳಿದ್ದಕ್ಕೆ ಗರಂ ಆದ ಶಿವರಾಮೇಗೌಡರು ಗಲಾಟೆ ಮಾಡಿದ್ದಾರೆ. ನೂರಾರು ಜನರ ಎದುರೇ ವ್ಯವಸ್ಥಾಪಕರು, ಸಿಬ್ಬಂದಿ ವಿರುದ್ಧ ಕೂಗಾಡಿದ್ದಾರೆ ಎನ್ನಲಾಗಿದೆ.

ನಂತರ ಸಂಸದ ಶಿವರಾಮೇಗೌಡರನ್ನು ಕರ್ನಾಟಕ ಭವನಕ್ಕೆ ಕಳುಹಿಸಲಾಯಿತಾದರೂ ಅಲ್ಲಿಯ ಸಿಬ್ಬಂದಿ ಜತೆಗೂ ಜಗಳಕ್ಕೆ ನಿಂತಿದ್ದಾರೆ ಎಂದು ಹೇಳಲಾಗಿದ್ದು ನೂತನ ಸಂಸದರ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.(ದಿಗ್ವಿಜಯ ನ್ಯೂಸ್​)