ಕೈಬರಹದಲ್ಲಿಯೇ ವಿಲ್ ಬರೆಯಬಹುದು

| ಎಸ್. ಸುಶೀಲಾ ಚಿಂತಾಮಣಿ

  • ನಾನು ಕೆಲಸದಲ್ಲಿದ್ದು ನಿವೃತ್ತಿಯಾಗಿದ್ದೇನೆ. 21 ವರ್ಷದವಳಿದ್ದಾಗಲೇ ಮದುವೆಯಾಗಿತ್ತು. ನಂತರ ನ್ಯಾಯಾಲಯದ ಮೂಲಕ ವಿಚ್ಛೇದನವೂ ಆಗಿದೆ. ನಾನು ಪೂರ್ವ ಪತಿಯಿಂದ ಯಾವ ಪರಿಹಾರವನ್ನೂ ಪಡೆದಿಲ್ಲ. ಮತ್ತೆ ಮರು ಮದುವೆಯನ್ನೂ ಆಗಿಲ್ಲ. ನನ್ನ ಸ್ವಯಾರ್ಜಿತವಾದ ಕೆಲವು ಸ್ಥಿರ ಮತ್ತು ಚರ ಆಸ್ತಿಗಳಿವೆ. ನಾನು ತವರಿನವರ ಹತ್ತಿರ ಇದ್ದು, ಅವರ ಕಷ್ಟ-ಸುಖಗಳಲ್ಲಿ ಭಾಗಿ ಆಗಿದ್ದೇನೆ. ಈಗ ನನ್ನ ಆಸ್ತಿಗಳಿಗೆ ವಾರಸುದಾರರಿಲ್ಲ. ನಾನು ಯಾರಿಗಾದರೂ ವಿಲ್ ಮಾಡಬೇಕಾದರೆ ಅಥವಾ ದಾನ ಮಾಡಬೇಕಾದರೆ ಹೇಗೆ ಮಾಡಬೇಕು? ವಿಲ್​ಅನ್ನು ಕೈಬರಹದಿಂದಲೇ ಮಾಡಿ ನನ್ನ ಹತ್ತಿರವೇ ಇಟ್ಟುಕೊಳ್ಳಬಹುದೇ? ಹೀಗೆ ಮಾಡಬೇಕಾದರೆ ನನ್ನ ಡಿವೋರ್ಸ್ ಸರ್ಟಿಫಿಕೇಟ್ ಮತ್ತು ತಂದೆ ಮನೆಯ ವಂಶವೃಕ್ಷವನ್ನು ಲಗತ್ತಿಸಬೇಕೇ? ವಿವರವಾಗಿ ತಿಳಿಸಿ.

-ನೊಂದವಳು

ನಿಮ್ಮ ಸ್ವಯಾರ್ಜಿತವಾದ ಆಸ್ತಿಯನ್ನು ನೀವು ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಅದಕ್ಕೆ ಯಾರೂ ತಂಟೆ ತಕರಾರು ತೆಗೆಯುವಂತಿಲ್ಲ. ನಿಮ್ಮ ಪೂರ್ವ ಪತಿಗೆ ಆಸ್ತಿಗಳಲ್ಲಿ ಯಾವ ಹಕ್ಕೂ ಬರುವುದಿಲ್ಲ. ನೀವು ನಿಮ್ಮ ಡಿವೋರ್ಸ್ ಸರ್ಟಿಫಿಕೇಟ್ ಮತ್ತು ನಿಮ್ಮ ತಂದೆಯ ಮನೆಯ ವಂಶವೃಕ್ಷದ ಯಾವ ದಾಖಲೆಯನ್ನೂ ಲಗತ್ತಿಸಬೇಕಾಗಿಲ್ಲ. ನಿಮ್ಮ ಆಸ್ತಿಯನ್ನು ನೀವು ನಿಮಗೆ ಬೇಕೆನಿಸಿದವರಿಗೆ ದಾನಪತ್ರ ಮಾಡಿಕೊಡಬಹುದು. ದಾನಪತ್ರವನ್ನು ನೋಂದಾಯಿಸಲೇ ಬೇಕಾಗುತ್ತದೆ. ಏಕೆ ಇಂತಹವರಿಗೇ ದಾನ ಮಾಡುತ್ತಿದ್ದೇನೆ ಎನ್ನುವುದನ್ನು ಬರೆಯಿಸಿದರೆ ಸಾಕು. ದಾನಪತ್ರ ಮಾಡಿದರೆ ತಕ್ಷಣ ಅವರು ಆಸ್ತಿಗೆ ಮಾಲೀಕರಾಗುತ್ತಾರೆ. ದಾನ ಮಾಡಿದ ಆಸ್ತಿಯ ಮೇಲಿನ ಹಕ್ಕನ್ನು ನೀವು ಕಳೆದುಕೊಳ್ಳುತ್ತೀರಿ.

ನಿಮ್ಮ ಆಸ್ತಿಯನ್ನು ವಿಲ್ ಸಹ ಮಾಡಬಹುದು. ಹಾಗೆ ವಿಲ್ ಮಾಡಿದರೆ ನೀವು ಬದುಕಿರುವವರೆಗೆ ನಿಮ್ಮ ಹೆಸರಿನಲ್ಲಿಯೇ ಆಸ್ತಿಗಳು ಇರುತ್ತವೆ. ನಿಮ್ಮ ಮರಣಾನಂತರ ಆಸ್ತಿ ಯಾರಿಗೆ ಹೋಗಬೇಕೆಂದು ನೀವು ಬರೆದಿದ್ದೀರೋ ಅವರಿಗೆ ಹೋಗುತ್ತದೆ. ನಿಮ್ಮ ಕೈಬರಹದಲ್ಲಿಯೇ ವಿಲ್ ಬರೆಯಬಹುದು. ಆದರೆ ವಿಲ್ ಪತ್ರಕ್ಕೆ ಕಡ್ಡಾಯವಾಗಿ ಎರಡು ಸಾಕ್ಷಿಗಳು ಇರಲೇಬೇಕು. ವಿಲ್ ಬರೆಯುವಾಗ ಏಕೆ ಇಂತಹವರಿಗೇ ವಿಲ್ ಮಾಡುತ್ತಿದ್ದೇನೆ ಎನ್ನುವುದನ್ನು ಬರೆಯುವುದು ಒಳ್ಳೆಯದು. ವಿಲ್ ಪತ್ರ ನೋಂದಣಿ ಆಗಲೇಬೇಕೆಂದು ಇಲ್ಲ, ನೀವು ವಿಲ್ ಬರೆದಿಟ್ಟು ಮುಂದೆ ನಿಮ್ಮ ಮನಸ್ಸು ಬದಲಾದರೆ ಆ ವಿಲ್​ಗೆ ಬದಲಾಗಿ ಬೇರೆ ವಿಲ್ ಸಹ ಬರೆಯಬಹುದು. ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಇದೆ.

ಒಂದು ವೇಳೆ ನೀವು ವಿಲ್ ಅಥವಾ ದಾನಪತ್ರ ಏನೂ ಬರೆಯದೆ ಹಾಗೇ ತೀರಿಕೊಂಡರೆ ನಿಮ್ಮ ಸಹೋದರ ಸಹೋದರಿಯರಿಗೆ ನಿಮ್ಮ ಆಸ್ತಿ ಹೋಗುತ್ತದೆ. ನಿಮ್ಮ ಪೂರ್ವ ಪತಿಗೆ ಹೋಗುವುದಿಲ್ಲ.

  • ನಮ್ಮ ತಂದೆಯವರ ತಾತನವರಿಗೆ ನಾವು ಇರುವ ಮನೆ ದಾನವಾಗಿ ಬಂದಿರುತ್ತದೆ. 1975ರಲ್ಲಿ ನಮ್ಮ ತಂದೆ ಮತ್ತು ದೊಡ್ಡಪ್ಪನವರಿಗೆ ವಿಭಾಗ ಆಗಿದೆ. ಈಗ ನಮ್ಮ ತಂದೆ ಕಾಲವಾಗಿದ್ದಾರೆ. ನಾನು ನನ್ನ ತಂಗಿ ಮತ್ತು ನಮ್ಮ ತಾಯಿ ಮೂವರೂ ಈ ಮನೆಯಲ್ಲಿ ವಾಸ ಇದ್ದೇವೆ. ಈಗ ನಾವು ವಿಭಾಗ ಮಾಡಿಕೊಳ್ಳಬೇಕೆಂದು ಇದ್ದೇವೆ. ತಂದೆ ಯಾವುದೇ ವಿಲ್ ಮಾಡಿಲ್ಲ. ಮನೆಯ ಒಟ್ಟಳತೆಯಲ್ಲಿ ಅರ್ಧದಲ್ಲಿ ಮನೆ ಇದ್ದು ಅದರಲ್ಲಿ ನಮ್ಮ ತಾಯಿ ಇದ್ದಾರೆ. ಉಳಿದ ಭಾಗ ಖಾಲಿ ನಿವೇಶನ ಇದೆ. ನಮ್ಮ ತಾಯಿಗೆ 74 ವರ್ಷ ವಯಸ್ಸಾಗಿದ್ದು ಅಲ್ಲೇ ವಾಸ ಇದ್ದಾರೆ. ತಂಗಿ ವಿವಾಹವಾಗಿದ್ದು ಸರ್ಕಾರಿ ನೌಕರಿಯಲ್ಲಿ ಇದ್ದಾಳೆ. ಅವಳಿಗೆ ಮಕ್ಕಳಿಲ್ಲ. ನಾನು ಖಾಸಗಿ ನೌಕರಿಯಲ್ಲಿ ಇದ್ದೇನೆ. ಈಗ ನನ್ನ ಪ್ರಶ್ನೆ ಏನೆಂದರೆ, ನಮ್ಮ ತಾಯಿ ಇರುವ ಮನೆ ಅವರ ಭಾಗಕ್ಕೇ ಹೋಗುತ್ತದೆಯೇ? ನನಗೂ ನನ್ನ ತಂಗಿಗೂ ಹೇಗೆ ಆಸ್ತಿ ವಿಭಾಗ ಆಗುತ್ತದೆ ಎಂದು ತಿಳಿಸಿ.

-ಊರು ಹೆಸರು ಬೇಡ

ನಿಮ್ಮ ತಂದೆ ಬಿಟ್ಟು ಹೋದ ಆಸ್ತಿಯಲ್ಲಿ ನಿಮಗೂ ತಾಯಿಗೂ ಮತ್ತು ತಂಗಿಗೂ ತಲಾ ಮೂರನೇ ಒಂದು ಭಾಗದ ಸಮಪಾಲು ಇರುತ್ತದೆ. ತಾಯಿಗೆ ಅವರಿರುವ ಭಾಗವೇ ಕಾನೂನಿನ ಪ್ರಕಾರ ಬರುತ್ತದೆ ಎಂದು ಹೇಳಲಾಗುವುದಿಲ್ಲ. ನ್ಯಾಯಾಲಯದಲ್ಲಿ ವಿಭಾಗದ ದಾವೆ ಹಾಕಿದಾಗ, ಪ್ರತಿ ಒಬ್ಬರಿಗೂ ಮೂರನೇ ಒಂದು ಭಾಗ ಎಂದು ಮೊದಲಿಗೆ ಪ್ರಿ್ರಮಿನರೀ ಡಿಕ್ರೀ ಆಗುತ್ತದೆ. ಆ ನಂತರ ಎಫ್.ಡಿ.ಪಿಯಲ್ಲಿ ಯಾರಿಗೆ ಯಾವ ಭಾಗ ಎನ್ನುವುದರ ನಿಷ್ಕರ್ಷೆ ಆಗುತ್ತದೆ. ಕೆಲವು ಆಸ್ತಿಗಳನ್ನು ಸಮವಾಗಿ ಭಾಗ ಮಾಡಲು ಸಾಧ್ಯವಾಗದೇ ಹೋದಾಗ ಒಬ್ಬರು ಮತ್ತೊಬ್ಬರ ಭಾಗವನ್ನು ಕೊಂಡುಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇರುತ್ತದೆ, ಈ ವ್ಯವಸ್ಥೆಗೆ ಒಪ್ಪದೆ ಹೋದರೆ ಆಸ್ತಿಯನ್ನು ಕೋರ್ಟಿನ ಮೂಲಕ ಮಾರಾಟ ಮಾಡಿಸಿ ಬಂದ ಹಣವನ್ನು ಮೂವರಿಗೂ ಹಂಚಿಕೆ ಮಾಡಲಾಗುತ್ತದೆ.

ನೀವು ಕೂಡಲೇ ನಿಮ್ಮ ತಾಲೂಕಿನ ಉಚಿತ ಕಾನೂನು ಸೇವಾ ಕೇಂದ್ರಕ್ಕೆ ಹೋಗಿ ವ್ಯಾಜ್ಯಪೂರ್ವ ಸಂಧಾನ ಮಾಡುವಂತೆ ಕೇಳಿಕೊಳ್ಳಿ. ಅಲ್ಲಿ ನುರಿತ ಸಂಧಾನಕಾರರ ಸಹಾಯದಿಂದ ನೀವು ಮೂವರೂ ಆಸ್ತಿಯನ್ನು ಹೇಗೆ ಹಂಚಿಕೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಒಂದು ಒಪ್ಪಂದಕ್ಕೆ ಬರಬಹುದು. ನಿಮ್ಮ ತಾಯಿ ಅವರು ಬದುಕಿರುವವರೆಗೂ ಅದೇ ಮನೆಯಲ್ಲಿ ಇರಲು ನಿಮ್ಮ ಮತ್ತು ತಂಗಿಯ ಒಪ್ಪಂದ ಇದ್ದರೆ, ಮುಂದೆ ಆಸ್ತಿಯಲ್ಲಿ ನಿಮಗೂ ನಿಮ್ಮ ತಂಗಿಗೂ ಅರ್ಧ ಭಾಗ ಬರುತ್ತದೆ. ಬೇಕಿದ್ದರೆ ಒಬ್ಬರ ಭಾಗವನ್ನು ಇನ್ನೊಬ್ಬರು ಖರೀದಿಯಯನ್ನೂ ಮಾಡಬಹುದು. ಕೂತು ಮಾತಾಡಿದಾಗ ನಿಮ್ಮ ಸಮಸ್ಯೆಗೆ ಹಲವಾರು ಪರಿಹಾರಗಳು ಹುಟ್ಟಿಕೊಳ್ಳುತ್ತವೆ. ಪ್ರಯತ್ನ ಮಾಡಿ ನೋಡಿ.

(ಪ್ರತಿಕ್ರಿಯಿಸಿ: [email protected])

(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)

ಪ್ರತಿ ಮಂಗಳವಾರ ಪ್ರಕಟವಾಗುವ ಈ ಅಂಕಣದಲ್ಲಿ, ಮಹಿಳೆಯರು ಕುಟುಂಬ, ದಾಂಪತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಕಾನೂನಾತ್ಮಕ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು. ನಮ್ಮ ವಿಳಾಸ: ಸಂಪಾದಕರು, ವಿಜಯವಾಣಿ, ನ್ಯಾಯದೇವತೆ ವಿಭಾಗ, ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.