ದೈಹಿಕ ಸಂಬಂಧಕ್ಕೆ ಒಪ್ಪದ ಪತ್ನಿ

  • ಮದುವೆಯಾಗಿ ಎರಡು ವರ್ಷ ಆರು ತಿಂಗಳಾಗಿದೆ. ನಾನು ಮತ್ತು ಪತ್ನಿ ಚೆನ್ನಾಗಿಯೇ ಇದ್ದೆವು. ಆದರೆ ಪತ್ನಿ ಯಾವುದೇ ಕಾರಣಕ್ಕೂ ದೈಹಿಕ ಸಂಪರ್ಕಕ್ಕೆ ಒಪ್ಪುತ್ತಿಲ್ಲ. ಅವಳು ತುಂಬ ಒಳ್ಳೆಯವಳು. ನಾನು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಏನಾಗಬಹುದು? ನೀನು ಕೋರ್ಟಿನಲ್ಲಿ ಹೇಗೆ ಸಾಬೀತು ಮಾಡುತ್ತೀಯಾ? ಎನ್ನುತ್ತಾಳೆ. ನನಗೆ ಹೆದರಿಕೆಯಾಗಿದೆ. ಇತ್ತ ಸನ್ಯಾಸಿಯೂ ಅಲ್ಲ, ಸಂಸಾರಿಯೂ ಅಲ್ಲ ಎನ್ನುವಂತೆ ಆಗಿದೆ. ದಯಮಾಡಿ ಸಲಹೆ ಕೊಡಿ.

– ನೊಂದ ಪತಿ

ನೀವು ಧೈರ್ಯವಾಗಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ. ದೈಹಿಕ ಸಂಬಂಧ ಎನ್ನುವುದು ವಿವಾಹದ ಒಂದು ಭಾಗ. ದೈಹಿಕ ಸಂಬಂಧಕ್ಕೆ ಸ್ಪಂದಿಸದೆ ಇರುವುದು ಕ್ರೂರತೆ ಆಗುತ್ತದೆ. ನ್ಯಾಯಾಲಯದಲ್ಲಿ ಆಕೆ ಪ್ರಕರಣ ಮುಂದುವರಿಸಿದರೆ, ನಿಮ್ಮ ವಕೀಲರು ನಿಮ್ಮ ನಿಲುವನ್ನು ಹೇಗೆ ಸಾಬೀತು ಪಡಿಸಬಹುದು ಎನ್ನುವುದನ್ನು ತಿಳಿಸಿಕೊಡುತ್ತಾರೆ. ಅದಕ್ಕೆ ಹಲವಾರು ಮಾರ್ಗಗಳಿವೆ. ಚಿಂತಿಸಬೇಡಿ. ಆದರೆ, ಪ್ರಕರಣ ಹಾಕುವುದಕ್ಕೆ ಮುಂಚೆ ಇಬ್ಬರೂ ಒಮ್ಮೆ ಆಪ್ತಸಮಾಲೋಚಕರನ್ನು ಭೇಟಿ ಮಾಡಿ. ಲೈಂಗಿಕತೆಯ ಬಗೆಗೆ ಆಕೆಗೆ ಇರುವ ಹಿಂಜರಿಕೆಯನ್ನು ಹೋಗಿಸುವುದು ಸಮಾಲೋಚನೆಯಿಂದ ಸಾಧ್ಯವಾಗಬಹುದು. ಲೈಂಗಿಕ ತಜ್ಞರನ್ನೂ ಭೇಟಿ ಮಾಡಬಹುದು. ಅವರ ಸಲಹೆಗಳನ್ನು ನಿಮ್ಮ ಪತ್ನಿ ಸ್ವೀಕರಿಸಿದರೆ ದಾಂಪತ್ಯ ಸಮಸ್ಯೆ ಸರಿಯಾಗಲೂಬಹುದು. ಈ ವಿಷಯವನ್ನು ಪತ್ನಿಗೆ ತಿಳಿಸಿ. ಆಕೆ ಒಪ್ಪದಿದ್ದರೆ ಪ್ರಕರಣ ದಾಖಲಿಸಲು ಮುಂದಾಗಬಹುದು.

  • ನನಗೆ 16 ವರ್ಷದವಳಾಗಿನಿಂದಲೂ ವಿವಾಹೇತರ ಸಂಬಂಧ ಇತ್ತು. ಈಗ ನನ್ನ ಮದುವೆಯಾಗಿ ಎರಡು ವರ್ಷ ಆಗಿದೆ. ಪತಿ ಮತ್ತು ಆ ವ್ಯಕ್ತಿ ಇಬ್ಬರ ಜತೆಗೂ ಸಂಬಂಧ ಮುಂದುವರಿಸಿದ್ದೇನೆ. ಆ ವ್ಯಕ್ತಿ ವಿವಾಹಿತ ಮತ್ತು ಮಕ್ಕಳಿದ್ದಾರೆ. ಈಗ ನನ್ನ ಪತಿಗೆ ತಿಳಿದು ವಿಚ್ಛೇದನ ಕೇಳುತ್ತಿದ್ದಾರೆ. ಅವರ ಹತ್ತಿರ ಪುರಾವೆಗಳಿದೆ. ಅವರು ನನ್ನನ್ನು ಕ್ಷಮಿಸಲೂ ಸಿದ್ಧವಿಲ್ಲ. ನನಗೆ ಆ ವ್ಯಕ್ತಿಯನ್ನೂ ಬಿಡಲು ಇಷ್ಟವಾಗುತ್ತಿಲ್ಲ. ಇವರಿಗೆ ವಿಚ್ಛೇದನ ಕೊಡಲೂ ಇಷ್ಟವಾಗುತ್ತಿಲ್ಲ. ಏನು ಮಾಡಲಿ ಎಂದು ತಿಳಿಸಿ.

-ಹೆಸರು, ಊರು ಬೇಡ

ವಿವಾಹೇತರ ದೈಹಿಕ ಸಂಬಂಧ ಒಳ್ಳೆಯದಲ್ಲ. ಇದನ್ನು ನಿಮ್ಮ ಪತಿ ಸಾಬೀತುಪಡಿಸಿದರೆ ಇದು ಕ್ರೂರತೆ ಎಂದು ನ್ಯಾಯಾಲಯ ಪರಿಗಣಿಸಿ ಅವರಿಗೆ ಖಂಡಿತವಾಗಿ ವಿಚ್ಛೇದನ ಕೊಡುತ್ತದೆ. ನೀವು ಮತ್ತು ಪತಿ ಇಬ್ಬರೂ ಕೂತು ಮಾತಾಡಿ. ಆ ಇನ್ನೊಬ್ಬ ವ್ಯಕ್ತಿಯನ್ನು ನೀವು ಬಿಡಲು ಸಾಧ್ಯವಾದರೆ, ಪತಿ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಯತ್ನ ಮಾಡಿ. ಆಗದಿದ್ದರೆ ಇಬ್ಬರೂ ಸೇರಿ ಪರಸ್ಪರ ಒಪ್ಪಂದದ ವಿಚ್ಛೇದನಕ್ಕೆ ಅರ್ಜಿ ಹಾಕುವುದು ಒಳ್ಳೆಯದು. ಅವರೇ ಪ್ರತ್ಯೇಕವಾಗಿ ಹಾಕಿದರೆ ಎಲ್ಲ ವಿಚಾರಗಳೂ ಹೊರಗೆ ಬಂದು ನಿಮಗೂ ಇರಿಸುಮುರಿಸಾಗಬಹುದು. ಮತ್ತೊಬ್ಬ ವ್ಯಕ್ತಿಯನ್ನು, ಆತ ವಿವಾಹಿತನೇ ಆಗಿದ್ದರೂ ನಿಮ್ಮಿಂದ ಬಿಡಲು ಸಾಧ್ಯವಿಲ್ಲ ಎನ್ನುವುದು ಸರಿಕಾಣಿಸುತ್ತಿಲ್ಲ. ನೀವು ಆ ವ್ಯಕ್ತಿಯಿಂದ ಹೊರಬರುವುದು ಒಳ್ಳೆಯದು. ಇದರ ಬಗ್ಗೆ ಕೂಡಲೇ ಒಬ್ಬ ಮನಶಾಸ್ತ್ರಜ್ಞರ ಸಲಹೆ ಪಡೆದು ಕ್ರಮ ತೆಗೆದುಕೊಂಡು ನಿಮ್ಮ ಜೀವನವನ್ನು ಈಗಲೇ ಸರಿಯಾದ ದಿಕ್ಕಿಗೆ ತಿರುಗಿಸಿಕೊಳ್ಳಿ.

(ಪ್ರತಿಕ್ರಿಯಿಸಿ: [email protected])

(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)

(ಸೂಚನೆ: ದಯವಿಟ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.) ಮಹಿಳೆಯರು ಕಾನೂನಾತ್ಮಕ ವಿಷಯಗಳ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು. ನಮ್ಮ ವಿಳಾಸ: ಸಂಪಾದಕರು, ವಿಜಯವಾಣಿ, ನ್ಯಾಯದೇವತೆ ವಿಭಾಗ, ನಂ. 24, ಸಾಯಿರಾಂ ಟವರ್ಸ್, ಮೊದಲನೇ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು – 560 018.

One Reply to “ದೈಹಿಕ ಸಂಬಂಧಕ್ಕೆ ಒಪ್ಪದ ಪತ್ನಿ”

  1. ನಮ್ಮ ಸಂಸ್ಕಾರ ಯಾವ ಮಟ್ಟಕ್ಕೆ ಮುಟ್ಟುತ್ತಿದೆ ಎಂಬುದನ್ನು ಈ ಪ್ತಶ್ನೆಗಳು ಡಾಳಾಗಿ ಹೊಳೆಯುತ್ತಾ ಕಂಗೊಳಿಸುತ್ತಿವೆ. – ಗುಂಜ್ಮ೦ಜ (GUNJMANJA)

Leave a Reply

Your email address will not be published. Required fields are marked *