ಮಗಳ ಆಸ್ತಿಯಲ್ಲಿ ಪಾಲಿದೆಯೇ?

  • ನಾನು ಹಿಂದು 80 ವರ್ಷದ ವಿಧವೆ. ಒಬ್ಬಳೇ ಮಗಳು. ಮದುವೆ ಆಗಿದೆ. ಗಂಡನೂ ಹಿಂದು. ನಾನು ಬೇರೆ ಮನೆಯಲ್ಲಿ ಇದ್ದೆ. ನನ್ನ ಎಲ್ಲ ಖರ್ಚು,ವೆಚ್ಚ ಮಗಳೇ ನೋಡಿಕೊಳ್ಳುತ್ತಿದ್ದಳು. ಇತ್ತೀಚೆಗೆ ಕ್ಯಾನ್ಸರ್​ನಿಂದ ತೀರಿಕೊಂಡಳು. ನನಗೂ ಅವಳ ಗಂಡನಿಗೂ ಸರಿಹೋಗುತ್ತಿರಲಿಲ್ಲ. ಈಗ ಅಳಿಯ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಮಗಳ ಆಸ್ತಿಯಲ್ಲಿ ಭಾಗ ಕೇಳಬಹುದೇ? ವಯಸ್ಸಾಗಿರುವುದರಿಂದ ಫ್ರೀ ಆಗಿ ಕೇಸು ನಡೆಸಲು ಆಗುತ್ತದೆಯೇ? | ನೊಂದ ತಾಯಿ

ನೀವು ಹಿಂದು ಆಗಿರುವುದರಿಂದ ವಾರಸಾ ಕಾಯ್ದೆಯ ಪ್ರಕಾರ, ನಿಮ್ಮ ಮಗಳ ಆಸ್ತಿ ಆಕೆಯ ಗಂಡ ಮತ್ತು ಮಕ್ಕಳಿಗೆ ಹೋಗುತ್ತದೆ. ನಿಮ್ಮ ಮಗಳಿಗೆ ವಿವಾಹ ಆಗಿರದಿದ್ದರೆ ಅಥವಾ ಆಕೆಯ ಗಂಡ ಮತ್ತು ಮಕ್ಕಳು ಬದುಕಿರದೇ ಇದ್ದರೆ ಆಗ ಅದು ಬೇರೆಯ ವಿಷಯವಾಗಿರುತ್ತಿತ್ತು. ಹಣಕಾಸು ಇಲ್ಲದವರಿಗೆ, ವೃದ್ಧೆಯರಿಗೆ ಉಚಿತ ಕಾನೂನು ಸಹಾಯ ಖಂಡಿತ ಸಿಗುತ್ತದೆ. ಆದರೆ ನಿಮಗೆ ಆಸ್ತಿಯಲ್ಲಿ ಭಾಗ ಸಿಗುವುದಿಲ್ಲ. ನೀವು ನಿಮ್ಮ ಊರಿನ ತಾಲೂಕು ಸೇವಾಕೇಂದ್ರಕ್ಕೆ ಅರ್ಜಿ ಕೊಡಿ. ಅವರು ನಿಮ್ಮ ಅಳಿಯನನ್ನು ಕರೆಸಿ ನಿಮಗೆ ಜೀವನಾಂಶ ಕೊಡಲು ವ್ಯವಸ್ಥೆ ಮಾಡುತ್ತಾರೇನೋ ಎಂದು ನೋಡಿ. ನಿಮ್ಮ ಅಳಿಯ ಒಪ್ಪದಿದ್ದರೆ ಆಗ, ನೀವೇ ನಿಮ್ಮ ಅಳಿಯನ ವಿರುದ್ಧ ಜೀವನಾಂಶದ ಕೇಸನ್ನು ಹಾಕಿ. ನಿಮಗೆ ಅನುಕೂಲ ಆಗುವ ಸಾಧ್ಯತೆ ಇದೆ.

  • ತಾತನಿಗೆ ಸೇರಿದ ಸ್ವಯಾರ್ಜಿತ ಜಮೀನನ್ನು ಸುಮಾರು 15 ವರ್ಷಗಳ ಹಿಂದೆ ನಮ್ಮ ತಂದೆ ಮತ್ತು ಅವರ ಅಣ್ಣಂದಿರು ಸೇರಿ ಬೇರೆಯವರಿಗೆ ಮಾರಿಬಿಟ್ಟರು. ಹಾಗೆ ಮಾರಿದಾಗ ನಮ್ಮ ತಾಯಿಯ ಮತ್ತು ದೊಡ್ಡಮ್ಮಂದಿರ ಸಹಿ ಪಡೆದಿರಲಿಲ್ಲ. ಈಗ ಜಮೀನು ಕೊಂಡುಕೊಂಡವರು ಮೂರನೆಯವರಿಗೆ ಅದೇ ಜಮೀನನ್ನು ಮಾರಿ ಬಿಟ್ಟಿದ್ದಾರೆ. ಈಗ ನಾವು ಮಕ್ಕಳು, ತಾಯಿ ಮತ್ತು ದೊಡ್ಡಮ್ಮಂದಿರು ಸೇರಿ ಜಮೀನಿನಲ್ಲಿ ಭಾಗ ನಮಗೂ ಇದೆ ಎಂದು ಕೇಸು ಹಾಕಬಹುದೇ?

| ಕುಮಾರ್ ಮೈಸೂರು

ನಿಮ್ಮ ತಾತನಿಗೆ ಸೇರಿದ ಸ್ವಯಾರ್ಜಿತ ಆಸ್ತಿ ಅವರ ಮರಣಾನಂತರ ಅವರ ಮಕ್ಕಳಿಗೆ ಸೇರುತ್ತದೆ. ನಿಮ್ಮ ತಂದೆ ಮತ್ತು ನಿಮ್ಮ ದೊಡ್ಡಪ್ಪನವರು ಮಾತ್ರ ಆ ಆಸ್ತಿಯ ವಾರಸುದಾರರಾಗಿರುತ್ತಾರೆ. ತಮ್ಮ ತಂದೆಯಿಂದ ಬಂದ ಆಸ್ತಿಯನ್ನು ಅಂದರೆ ನಿಮ್ಮ ತಾತನಿಂದ ಅವರಿಗೆ ಬಂದ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕ್ರಯ ಮಾಡಬಹುದು. ಅದಕ್ಕೆ ನಿಮ್ಮ ತಾಯಿಯ ಅಥವಾ ದೊಡ್ಡಮ್ಮಂದಿರ ಸಹಿಯ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ನಿಮ್ಮ ತಂದೆ ಮತ್ತು ದೊಡ್ಡಪ್ಪಂದಿರು, ಅವರ ತಂದೆಯಿಂದ ಬಂದ ಆಸ್ತಿಯನ್ನು ಮಾರಾಟ ಮಾಡದೆ ಹಾಗೆಯೇ ಉಳಿಸಿ ತೀರಿಕೊಂಡಿದ್ದರೆ ಆಗ ನಿಮ್ಮ ತಂದೆಯ ಭಾಗದ ಹಕ್ಕು ನಿಮ್ಮ ತಾಯಿ ಮತ್ತು ನಿಮ್ಮ ತಂದೆಯ ಎಲ್ಲ ಮಕ್ಕಳಿಗೆ ಬರುತ್ತಿತ್ತು. ಹಾಗೆಯೇ ನಿಮ್ಮ ದೊಡ್ಡಪ್ಪನ ಭಾಗದ ಹಕ್ಕು ನಿಮ್ಮ ದೊಡ್ಡಮ್ಮನಿಗೆ ಮತ್ತು ನಿಮ್ಮ ದೊಡ್ಡಪ್ಪನ ಎಲ್ಲ ಮಕ್ಕಳಿಗೆ ಸೇರುತ್ತಿತ್ತು. ಈಗ ನೀವು ಕೇಸು ಹಾಕಿದರೆ ಹಣ ಮತ್ತು ಸಮಯ ವೆಚ್ಚ. ಯಾವ ಲಾಭವೂ ಆಗುವುದಿಲ್ಲ.

(ಪ್ರತಿಕ್ರಿಯಿಸಿ: [email protected])

(ಲೇಖಕರು ಹೈಕೋರ್ಟ್ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)

Leave a Reply

Your email address will not be published. Required fields are marked *