More

    ನ್ಯಾಯದೇವತೆ; ಅಂತಾರಾಜ್ಯದ ಕೇಸ್ ಸುಪ್ರೀಂನಲ್ಲೇ ಆಗಬೇಕು

    • ನಾನು ಉತ್ತರಭಾರತದ ಹುಡುಗನನ್ನು ಪ್ರೀತಿಸಿ ಮದುವೆ ಆಗಿದ್ದೆ. ಒಬ್ಬಳು ಮಗಳಿದ್ದಾಳೆ. ನನ್ನ ಸಂಪಾದನೆಯನ್ನೆಲ್ಲಾ ಗಂಡನೇ ತೆಗೆದುಕೊಂಡು ಹಿಂಸೆ ಕೊಡುತ್ತಿದ್ದ. ತಡೆದುಕೊಳ್ಳಲಾಗದೇ ಮಗಳೊಂದಿಗೆ ತವರಿಗೆ ವಾಪಸ್ ಬಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ನನ್ನ ಗಂಡ ಉತ್ತರಭಾರತದಲ್ಲಿ ವಿಚ್ಛೇದನದ ಕೇಸು ಹಾಕಿದ್ದಾನೆ. ನನಗೆ ಅಲ್ಲಿಗೆ ಓಡಾಡಲು ಆಗುವುದಿಲ್ಲ. ನನಗೆ ನನ್ನ ಗಂಡನ ಕಡೆಯವರಿಂದ ಪ್ರಾಣ ಭಯವಿದೆ. ಆ ಕೇಸನ್ನು ನಡೆಸಲು ನಾನು ಅಲ್ಲಿಗೆ ಹೋಗಲೇ ಬೇಕೇ? ನನ್ನ ಮಗಳನ್ನು ನನ್ನ ಗಂಡ ತೆಗದುಕೊಂಡು ಹೋಗುತ್ತಾನೇನೋ ಎನ್ನುವ ಭಯವೂ ಇದೆ.

    ನ್ಯಾಯದೇವತೆ; ಅಂತಾರಾಜ್ಯದ ಕೇಸ್ ಸುಪ್ರೀಂನಲ್ಲೇ ಆಗಬೇಕುನೀವು ಕೂಡಲೇ ಸುಪ್ರೀಂಕೋರ್ಟಿನಲ್ಲಿ ಟ್ರಾನ್ಸಫರ್ ಪೆಟಿಷನ್ ಹಾಕಿ. ನಿಮ್ಮ ಪತಿ ಉತ್ತರ ಭಾರತದಲ್ಲಿ ಹಾಕಿರುವ ವಿಚ್ಛೇದನದ ಪ್ರಕರಣದ ಪ್ರಕ್ರಿಯೆಯನ್ನು ಸ್ಟೇ ಮಾಡಿಸಿ. ಒಂದು ರಾಜ್ಯದ ಒಂದು ಕೋರ್ಟಿನಿಂದ ಅದೇ ರಾಜ್ಯದ ಮತ್ತೊಂದು ಕೋರ್ಟಿಗೆ ವರ್ಗಾವಣೆ ಮಾಡಬೇಕೆಂದು ಕೋರಿ ಆ ರಾಜ್ಯದ ಹೈಕೋರ್ಟ್​ನಲ್ಲಿ ವರ್ಗಾವಣೆಯ ಅರ್ಜಿ ಸಲ್ಲಿಸಬಹುದು. ಆದರೆ ಒಂದು ಬೇರೆ ರಾಜ್ಯದಲ್ಲಿ ಇರುವ ಪ್ರಕರಣವನ್ನು ಮತ್ತೊಂದು ರಾಜ್ಯದ ಕೋರ್ಟಿಗೆ ವರ್ಗಾವಣೆ ಮಾಡಲು ಆದೇಶ ಪಡೆಯಲು ಸುಪ್ರೀಂ ಕೋರ್ಟಿಗೇ ಅರ್ಜಿ ಸಲ್ಲಿಸಬೇಕು.

    ಮಗಳು ನಿಮ್ಮ ಜತೆ ಇರುವುದರಿಂದ, ನೀವು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನಿಮ್ಮ ಮಗಳ ಪರ್ಮನೆಂಟ್ ಕಸ್ಟಡಿ ನಿಮಗೇ ಕೊಡಬೇಕೆಂದು ಎಂದೂ ಮತ್ತು ಮಗುವಿನ ಗಾರ್ಡಿಯನ್ ನೀವೇ ಎಂದು ಹಕ್ಕು ಘೊಷಣೆ ಮಾಡಬೇಕೆಂದೂ ಪ್ರಕರಣ ದಾಖಲಿಸಿ. ಅದೇ ಪ್ರಕರಣದಲ್ಲಿ ಮಗುವನ್ನು ನಿಮ್ಮಿಂದ ನಿಮ್ಮ ಪತಿ ಪ್ರತ್ಯೇಕಿಸಬಾರದೆನ್ನುವ ಮಧ್ಯಂತರ ಅರ್ಜಿಯನ್ನೂ ಹಾಕಿ ಮಧ್ಯಂತರ ಆದೇಶವನ್ನು ಪಡೆದುಕೊಳ್ಳಿ.

    • ನಮ್ಮ ತಂದೆಗೆ 2 ಹೆಣ್ಣು, 3 ಗಂಡು ಮಕ್ಕಳು. ನಮ್ಮ ತಂದೆ ತಾಯಿ ಇಬ್ಬರೂ ಬದುಕಿಲ್ಲ. ನಮ್ಮ ತಂದೆಯ ಸ್ವಯಾರ್ಜಿತ ಆಸ್ತಿ ಮತ್ತು ಅವರ ತಂದೆಯಿಂದ ಬಂದ ಆಸ್ತಿ ಇದೆ. ಆಸ್ತಿಗಳ ಖಾತೆ ಪಹಣಿ ಎಲ್ಲ ನಮ್ಮ ಅಣ್ಣಂದಿರು ಅವರ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಅಕ್ಕ ಸಹಿ ಹಾಕಿದ್ದಾಳೆ. ನನ್ನ ಹೆಸರನ್ನೇ ವಂಶವೃಕ್ಷದಲ್ಲಿ ತೋರಿಸಿಲ್ಲ. ಈಗ ‘ನಾವು ಭಾಗ ಆಗಿಬಿಟ್ಟಿದ್ದೇವೆ , ಖಾತೆ ಪಹಣಿ ನಮ್ಮ ಹೆಸರಿನಲ್ಲಿ ಇದೆ. ನಿಮಗೆ ಏನೂ ಸಿಗುವುದಿಲ್ಲ ಎನ್ನುತ್ತಾರೆ. ಅವರು ರಿಜಿಸ್ಟರ್ ಭಾಗ ಆಗಿಲ್ಲ. ಈಗ ನಾನು ಭಾಗ ಪಡೆಯಬಹುದೇ?

    ನಿಮ್ಮ ಸಹೋದರರು ರಿಜಿಸ್ಟರ್ ವಿಭಾಗಪತ್ರದ ಮೂಲಕ ಭಾಗ ಹಂಚಿಕೆ ಮಾಡಿಕೊಂಡಿಲ್ಲದೇ ಇರುವುದರಿಂದ ನೀವು ಹೆದರಬೇಕಾಗಿಲ್ಲ. ಖಾತೆ ಅವರ ಹೆಸರಿಗೆ ಬಂದ ಮಾತ್ರಕ್ಕೆ ನಿಮ್ಮ ಹಕ್ಕು ಕಳೆದು ಹೋಗುವುದಿಲ್ಲ. ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ನಿಮ್ಮೆಲ್ಲರಿಗೂ ಸಮಭಾಗ ಇದ್ದೇ ಇರುತ್ತದೆ. ಅನುಕೂಲಕ್ಕಾಗಿ ಮಾತ್ರ ನಿಮ್ಮ ಸಹೋದರರು ಅನುಭವಿಸುತ್ತಿದ್ದಾರೆ, ನಾವೂ ಒಟ್ಟು ಕುಟುಂಬದ ಸದಸ್ಯರೇ ಎಂದು ಎಲ್ಲ ಆಸ್ತಿಗಳನ್ನೂ ಸೇರಿಸಿ ವಿಭಾಗಕ್ಕೆ ದಾವೆ ಸಲ್ಲಿಸಬಹುದು.

    ಪ್ರಕರಣದ ನೋಟಿಸು ನಿಮ್ಮ ಸಹೋದರರಿಗೆ ಜಾರಿ ಆದ ಮೇಲೆ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ನ್ಯಾಯಾಲಯವನ್ನು ಕೇಳಿಕೊಳ್ಳಿ. ಅಲ್ಲಿ, ಕೂತು ಮಾತಾಡಿ ಎಲ್ಲರೂ ಒಪ್ಪಿಗೆಗೆ ಬಂದರೆ ನಿಮ್ಮ ರಾಜಿಗೆ ಅನುಗುಣವಾಗಿ ಆಸ್ತಿ ಹಂಚಿಕೊಳ್ಳಿ. ನಿಮ್ಮ ಸಹೋದರರು ಒಪ್ಪದಿದ್ದರೆ ಧೈರ್ಯವಾಗಿ ಕೇಸು ನಡೆಸಿ. ವಿಭಾಗದ ಕೇಸಿಗೆ ಕೋರ್ಟು ಶುಲ್ಕ ಹೆಚ್ಚು ಇರುವುದಿಲ್ಲ. ನೀವು ನಿಮ್ಮ ತಾಲ್ಲೂಕಿನ ಉಚಿತ ಕಾನೂನು ಸೇವಾ ಕೇಂದ್ರಕ್ಕೆ ಅರ್ಜಿ ಕೊಟ್ಟರೆ ಯಾವ ಖರ್ಚೂ ಇಲ್ಲದೇ ಕಾನೂನು ಸಹಾಯವನ್ನು ಕೊಡುತ್ತಾರೆ. ವಕೀಲರನ್ನೂ ಅವರೇ ವ್ಯವಸ್ಥೆ ಮಾಡಿಸಿಕೊಡುತ್ತಾರೆ.

    • ನಮ್ಮ ತಂದೆ ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ನಾನು ಒಬ್ಬಳೇ ಹೆಣ್ಣು ಮಗಳು. ಒಬ್ಬ ಅಣ್ಣ ತೀರಿಕೊಂಡಿದ್ದು, ಅವನ ಹೆಂಡತಿ ಇದ್ದಾಳೆ. ನಮ್ಮ ತಂದೆ ಸ್ವಯಾರ್ಜಿತ ಆಸ್ತಿ ಬೆಂಗಳೂರಿನಲ್ಲಿ ಇದೆ. ಅವರು ತೀರಿಕೊಳ್ಳುವ ಮುಂಚೆ ಆ ಆಸ್ತಿಯನ್ನು ನಮ್ಮ ತಾಯಿಗೆ ವಿಲ್ ಮಾಡಿದ್ದರು. ಖಾತೆ ಅವರ ಹೆಸರಿಗೇ ಬಂದಿತ್ತು. ಈಗ ನಮ್ಮ ತಾಯಿಯೂ ತೀರಿಕೊಂಡಿದ್ದಾರೆ. ಅವರು ಯಾರಿಗೂ ವಿಲ್ ಮಾಡಿಲ್ಲ. ಈಗ ಆಸ್ತಿಯಲ್ಲಿ ನನಗಾಗಲೀ, ನಮ್ಮ ಅಕ್ಕನಿಗಾಗಲೀ ನನ್ನ ವಿಧವೆ ಅತ್ತಿಗೆಗಾಗಲೀ ಭಾಗ ಕೊಡುವುದಿಲ್ಲ ಎಂದು ನನ್ನ ಮೂರು ತಮ್ಮಂದಿರು ಹೇಳುತ್ತಿದ್ದಾರೆ. ಅವರು ಮೂವರೇ ಆಸ್ತಿ ಹಂಚಿಕೊಂಡು ವಿಭಾಗ ಪತ್ರ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಈಗ ನಮ್ಮ ಹಕ್ಕು ಇದೆಯೇ?

    ನಿಮ್ಮ ತಂದೆ ನಿಮ್ಮ ತಾಯಿಗೆ ವಿಲ್ ಮಾಡಿದ ಮೇಲೆ ಅದು ನಿಮ್ಮ ತಾಯಿಯ ಆಸ್ತಿಯೇ ಆಗುತ್ತದೆ, ನಿಮ್ಮ ತಾಯಿ ತೀರಿಕೊಂಡ ನಂತರ ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ ನಿಮ್ಮ ತಾಯಿಯ ಎಲ್ಲ ಮಕ್ಕಳಿಗೂ ಸಮಪಾಲು ಬರುತ್ತದೆ. ನಿಮ್ಮ ತೀರಿಕೊಂಡ ಅಣ್ಣನ ಐದನೇ ಒಂದು ಭಾಗ ಅವರ ವಿಧವೆ ಪತ್ನಿಗೆ ಸೇರುತ್ತದೆ.

    ನೀವು ಧೈರ್ಯವಾಗಿ ವಿಭಾಗದ ದಾವೆ ಹಾಕಬಹುದು. ನಿಮ್ಮ ಸಹೋದರರು ಮಾಡಿಕೊಂಡಿರುವ ವಿಭಾಗ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹಕ್ಕು ಘೊಷಣೆಯನ್ನೂ ಕೇಳಬಹುದು. ಲಿಮಿಟೇಷನ್ ಕಾಯ್ದೆಯ ಮತ್ತು ಔಸ್ಟರ್ ಎನ್ನುವ ಕಾನೂನಿನ ಅಂಶದ ತಡೆ ಬಾರದಂತೆ ವಕೀಲರ ಹತ್ತಿರ ಹೋಗಿ ಸರಿಯಾದ ಸಲಹೆ ಪಡೆದು ದಾವೆ ಸಲ್ಲಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts