ನ್ಯಾಮತಿಯಲ್ಲಿ ಕುಡಿವ ನೀರಿಗೆ ತತ್ವಾರ

ಹೊನ್ನಾಳಿ: ಬಿರು ಬಿಸಿಲಿನ ತಾಪದ ಜತೆಗೆ ಕುಡಿವ ನೀರಿನ ತತ್ವಾರ ನ್ಯಾಮತಿ ತಾಲೂಕಿನ ಹೆಚ್ಚಾಗಿದೆ. ಫಲ್ಲವನಹಳ್ಳಿ, ಚಟ್ನಹಳ್ಳಿ, ಚಿನ್ನಿಕಟ್ಟಿ, ಜೋಗ, ಸೂರಗೊಂಡನಕೊಪ್ಪ ಸೇರಿ ವಿವಿಧೆಡೆ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

ನ್ಯಾಮತಿಯಲ್ಲಿ ಮೊದಲು ವಾರಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ಹದಿನೈದು, ಇಪ್ಪತ್ತು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಇನ್ನು ವಿದ್ಯುತ್ ಸಮಸ್ಯೆ ಎದುರಾದರೆ ಪರಿಸ್ಥಿತಿ ಹೇಳತೀರದು ಎಂಬುದು ಜನರ ಆತಂಕ.

ನ್ಯಾಮತಿಗೆ ದಿನಕ್ಕೆ ಕನಿಷ್ಠ ನಾಲ್ಕು ಲಕ್ಷ ಲೀಟರ್ ನೀರಿನ ಅಗತ್ಯವಿದೆ. ತುಂಗಾಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಪ್ರತಿಸಲ ಮೋಟರ್ ಸುಟ್ಟು ಸಮಸ್ಯೆ ಕಾರಣವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಚುನಾವಣೆ ಬಹಿಷ್ಕಾರಕ್ಕೆ ಯತ್ನ: ಕುಡಿವ ನೀರಿಗೆ ಆಗ್ರಹಿಸಿ ತಾಲೂಕಿನ ಫಲ್ಲವನಹಳ್ಳಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಆಗ ತಹಸೀಲ್ದಾರ್ ರೇಣುಕಮ್ಮ ನೇತೃತ್ವದಲ್ಲಿ ಅಧಿಕಾರಿಗಳು ದೌಡಾಯಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಾರೆ.

ಚುನಾವಣೆ ಗುಂಗಿನಲ್ಲಿರುವ ಅಧಿಕಾರಿಗಳು: ಲೋಕಸಭೆ ಚುನಾವಣೆ ಮುಗಿದು ನಾಲ್ಕು ದಿನ ಕಳೆದರೂ ಅದರ ಗುಂಗಿನಿಂದ ಅಧಿಕಾರಿಗಳು ಹೊರ ಬಂದಿಲ್ಲ. ಕುಡಿವ ನೀರಿನ ತೀವ್ರತೆ ಹೆಚ್ಚಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಜನರ ಆರೋಪ.

Leave a Reply

Your email address will not be published. Required fields are marked *