ಪೌಷ್ಟಿಕ ಆಹಾರ ಕೇಂದ್ರಕ್ಕೇ ಅಪೌಷ್ಟಿಕತೆ!

ವರುಣ ಹೆಗಡೆ

ಬೆಂಗಳೂರು: ಪೂರಕ ಪೌಷ್ಟಿಕ ಆಹಾರ ಕೊಟ್ಟು ಅನಾರೋಗ್ಯ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ರಕ್ಷಿಸಬೇಕಾದ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳೇ (ಎನ್​ಆರ್​ಸಿ) ಅಪೌಷ್ಟಿಕತೆಯಿಂದ ಬಳಲುತ್ತಿವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ 32 ಎನ್​ಆರ್​ಸಿಗಳಲ್ಲೇ 2017-18ನೇ ಸಾಲಿನಲ್ಲಿ 19 ಮಕ್ಕಳು ಅಪೌಷ್ಟಿಕತೆ ಯಿಂದ ಸಾವನ್ನಪ್ಪಿವೆ. ಅಪೌಷ್ಟಿಕ ಸಮಸ್ಯೆ ಎದುರಿ ಸುತ್ತಿರುವ ಮಕ್ಕಳನ್ನು ದಾಖಲಿಸಿಕೊಂಡು ಅಗತ್ಯ ವೈದ್ಯಕೀಯ ಸೇವೆ ಜತೆಯಲ್ಲೇ ಪೌಷ್ಟಿಕ ಆಹಾರ ನೀಡುವುದು ಈ ಕೇಂದ್ರಗಳ ಜವಾಬ್ದಾರಿ. ಆದರೆ ವಿವಿಧ ಸಮಸ್ಯೆಗಳಿಂದಾಗಿ ಎನ್​ಆರ್​ಸಿಗಳಿಗೆ ಗ್ರಹಣ ಹಿಡಿದಿದೆ.

ಲಕ್ಷಾಂತರ ರೂ. ವ್ಯಯ

ರಾಜ್ಯದಲ್ಲಿರುವ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳಿಗೆ ಸರ್ಕಾರ 2014-15ನೇ ಸಾಲಿನಲ್ಲಿ 65.4 ಲಕ್ಷ ರೂ., 2015-16ನೇ ಸಾಲಿನಲ್ಲಿ 65.68 ಲಕ್ಷ, 2016-17ನೇ ಸಾಲಿನಲ್ಲಿ 66.21 ಲಕ್ಷ ಹಾಗೂ 2017-18ನೇ ಸಾಲಿನಲ್ಲಿ 75.74 ಲಕ್ಷ ರೂ. ವ್ಯಯ ಮಾಡಿದೆ. ಇಷ್ಟಾಗಿಯೂ ಮಕ್ಕಳಿಗೆ ಸೂಕ್ತ ವೈದ್ಯ ಸೇವೆ, ಅಗತ್ಯ ಪೌಷ್ಟಿಕ ಆಹಾರ ಒದಗಿಸಲಾಗುತ್ತಿಲ್ಲ.

ರಾಜಧಾನಿಯಲ್ಲೇ ಹೆಚ್ಚು

ರಾಜ್ಯದ 29 ಜಿಲ್ಲೆಗಳಲ್ಲಿ ಎನ್​ಆರ್​ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2014ಕ್ಕೆ ಹೋಲಿಸಿದಲ್ಲಿ ರಾಜ್ಯದ ಎನ್​ಆರ್​ಸಿ ಕೇಂದ್ರಗಳಲ್ಲಿನ ಮಕ್ಕಳ ಸಾವು ಇಳಿಮುಖವಾಗಿದೆ. 2014-15ರಲ್ಲಿ 46 ಮಕ್ಕಳು ಸಾವಿಗೀಡಾದ್ದರು. 2017-18ನೇ ಸಾಲಿನಲ್ಲಿ ಮೃತಪಟ್ಟ 19 ಮಕ್ಕಳಲ್ಲಿ 15 ಮಕ್ಕಳು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿರುವ ಎನ್​ಸಿಆರ್ ಕೇಂದ್ರದಲ್ಲೇ ಕೊನೆಯುಸಿರೆಳೆದಿದ್ದಾರೆ. ಧಾರವಾಡದ

ಕಿಮ್ಸ್​ನಲ್ಲಿ 2, ಹಾಸನದ ಹಿಮ್್ಸ ಹಾಗೂ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ತಲಾ ಒಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ವಾಣಿವಿಲಾಸ ಆಸ್ಪತ್ರೆಯಲ್ಲಿ 2014-15ನೇ ಸಾಲಿನಲ್ಲಿ 26 ಮಕ್ಕಳು ಮೃತಪಟ್ಟಿದ್ದರು.

ನವಜಾತ ಶಿಶುವಿಗೆ ವರ್ಷದವರೆಗೆ ತಾಯಿ ಹಾಲು ಸಿಗದಿದ್ದರೆ ಅಪೌಷ್ಟಿಕತೆಗೆ ಒಳಗಾಗುತ್ತವೆ. ಪಾಲಕರಲ್ಲಿನ ಆಹಾರ ಪದ್ಧತಿಯ ಜ್ಞಾನದ ಕೊರತೆ ಅಪೌಷ್ಟಿಕತೆಗೆ ಮತ್ತೊಂದು ಕಾರಣ.

| ಡಾ. ನಿಜಗುಣ ಮಕ್ಕಳ ತಜ್ಞ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ