ಶಿರ್ವ ಚರ್ಚ್‌ನಲ್ಲಿ ಹೆಝೆಲ್ ಅಂತ್ಯಕ್ರಿಯೆ

ಕಾಪು: ಸೌದಿ ಅರೇಬಿಯಾದ ಅಲ್‌ಮಿಕ್ವ ಆಸ್ಪತ್ರೆಯಲ್ಲಿ ಜುಲೈ 21ರಂದು ನಿಗೂಢವಾಗಿ ಮೃತಪಟ್ಟ ಶಿರ್ವ ಕುತ್ಯಾರು ಅಗರ್‌ದಂಡೆ ನಿವಾಸಿ ಅಶ್ವಿನ್ ಮಥಾಯಸ್ ಅವರ ಪತ್ನಿ ಹೆಝೆಲ್ ಜೋತ್ಸಾ ಮಥಾಯಸ್(28)ಅಂತ್ಯಕ್ರಿಯೆ 72 ದಿನಗಳ ಬಳಿಕ ಶುಕ್ರವಾರ ಶಿರ್ವದಲ್ಲಿ ನೆರವೇರಿತು.
ಗುರುವಾರ ಸಾಯಂಕಾಲ 5ಗಂಟೆಗೆ ಮಂಗಳೂರು ವಿಮಾನಕ್ಕೆ ಆಗಮಿಸಿದ ಮೃತದೇಹವನ್ನು ಪತಿ ಅಶ್ವಿನ್ ಮಥಾಯಸ್ ಪಡೆದುಕೊಂಡರು.

ಮನೆಗೆ ಮೃತದೇಹವನ್ನು ತಂದು ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಮೃತದೇಹವನ್ನು ತಂದು ಧಾರ್ಮಿಕ ವಿಧಿ ನೆರವೇರಿಸಲಾಯಿತು. ಬಳಿಕ ಸಾಯಂಕಾಲ 4ಕ್ಕೆ ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಚರ್ಚ್ ಹಿರಿಯ ಧರ್ಮಗುರು ಡೆನಿಸ್ ಎ.ಡೇಸಾ ನೇತೃತ್ವದಲ್ಲಿ ಸಾರ್ವಜನಿಕ ಬಲಿಪೂಜೆ, ಪ್ರಾರ್ಥನಾವಿಧಿ ನೆರವೇರಿದವು. ಸಾವಿರಾರು ಜನರ ಸಮ್ಮುಖ ಚರ್ಚ್ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿತು.

ರಾಜ್ಯ ಸರ್ಕಾರದ ಪರವಾಗಿ ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಶ್ರದ್ಧಾಂಜಲಿ ಅರ್ಪಿಸಿದರು. ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಜಿಪಂ ಸದಸ್ಯರಾದ ಶಿಲ್ಪಾ ಜಿ.ಸುವರ್ಣ, ವಿಲ್ಸನ್ ರೊಡ್ರಿಗಸ್, ಗೀತಾಂಜಲಿ ಸುವರ್ಣ, ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸಮಾಜಸೇವಕ ಕುತ್ಯಾರು ಪ್ರಸಾದ್ ಶೆಟ್ಟಿ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ, ಮೆಲ್ವಿನ್ ಡಿಸೋಜ, ಕುತ್ಯಾರು ಗ್ರಾಪಂ ಅಧ್ಯಕ್ಷ ಧೀರಜ್ ಶೆಟ್ಟಿ ಪಾಲ್ಗೊಂಡಿದ್ದರು.

ಮುಗಿಲು ಮುಟ್ಟಿದ ಆಕ್ರಂದನ: ಹೆಝಲ್ ಸಾವು ಪ್ರಕರಣದಿಂದ ಅತೀ ಹೆಚ್ಚು ಅನಿವಾಸಿ ಭಾರತೀಯರನ್ನು ಹೊಂದಿರುವ ಶಿರ್ವ ಸುತ್ತಮುತ್ತಲಿನ ಪ್ರದೇಶದ ಜನರು ದುಃಖಿತರಾಗಿದ್ದರು. ಹೆಝೆಲ್ ಮೃತದೇಹ ಇಂದು, ನಾಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಿಕರ ಆಕ್ರಂದನ 72 ದಿನಗಳ ನಂತರ ಮನೆಮಗಳ ಶವ ನೋಡುತ್ತಿದ್ದಂತೆ ಮುಗಿಲು ಮುಟ್ಟಿತ್ತು.