ಸಖಿ ಮತಗಟ್ಟೆ ಸಂಖ್ಯೆ 32ಕ್ಕೆ ಏರಿಕೆ

ಉಡುಪಿ: ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈಗಿರುವ ಸಂಪೂರ್ಣ ಮಹಿಳಾ ಅಧಿಕಾರಿ, ಸಿಬ್ಬಂದಿ ಒಳಗೊಂಡ ಸಖಿ ಮಹಿಳಾ ಮತಗಟ್ಟೆಯನ್ನು 26ರಿಂದ 32ಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ ಕೃಷ್ಣ ಕುನಾಲ್ ತಿಳಿಸಿದರು.

ಶುಕ್ರವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಮುಕ್ತ, ಪಾರದರ್ಶಕ ಚುನಾವಣೆಗಾಗಿ ಸರ್ವರೂ ಸಹಕಾರ ನೀಡಬೇಕು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ಜಿಲ್ಲಾಡಳಿತ ಕಂಟ್ರೋಲ್ ರೂಂನ್ನು ಸಂಪರ್ಕಿಸಬೇಕು ಎಂದರು.

ಆಯುಧಗಳ ಠೇವಣಿ: ಪರವಾನಗಿ ಹೊಂದಿರುವ ಆಯುಧಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಲು ಆದೇಶಿಸಿದ್ದು, ಜಿಲ್ಲೆಯಲ್ಲಿ 4630 ಪರವಾನಗಿ ಹೊಂದಿರುವ ಆಯುಧಗಳ ಪೈಕಿ 3693 ಆಯುಧಗಳನ್ನು ಠೇವಣಿ ಇಡಲಾಗಿದೆ ಎಂದು ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ನೀತಿ ಸಂಹಿತೆ ಜಾರಿಗೆ ಬಂದ ಬಳಿಕ 7 ಪ್ರಕರಣಗಳಲ್ಲಿ 16,65,810 ರೂ. ಮೊತ್ತ ವಶಪಡಿಸಿಕೊಳ್ಳಲಾಗಿದೆ. ಪರಿಶೀಲನೆ ಬಳಿಕ ಒಂದು ಪ್ರಕರಣದಲ್ಲಿ 3,25,960 ರೂ. ಬಿಡುಗಡೆಗೊಳಿಸಲಾಗಿದೆ. ಸಿ-ವಿಜಿಲ್ ಆ್ಯಪ್‌ನಲ್ಲಿ 42 ದೂರು ಸ್ವೀಕೃತವಾಗಿದ್ದು, 32 ಅರ್ಜಿ ವಿಲೇ ಮಾಡಲಾಗಿದೆ. 10 ಡಮ್ಮಿ ಪ್ರಕರಣಗಳಿವೆ. 1,06,37,384 ರೂ. ಮೌಲ್ಯದ 15 ಸಾವಿರ ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಹಾಗೂ 2.520 ಲೀ. ಮದ್ಯವನ್ನು ಪೊಲೀಸ್ ಇಲಾಖೆ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

ವೀಕ್ಷಕರ ನೇಮಕ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವೀಕ್ಷಕರನ್ನಾಗಿ, ಸಾಮಾನ್ಯ ವೀಕ್ಷಕ -ಕೃಷ್ಣ ಕುನಾಲ್ 8277013878, ಪೊಲೀಸ್ ವೀಕ್ಷಕ-ಸಂದೀಪ್ ಪ್ರಕಾಶ್ 8277013926, ವೆಚ್ಚ ವೀಕ್ಷಕ-ಮಲ್ಲಿಕಾರ್ಜುನ್ ಉತ್ತೋರೆ 827713973 ಅವರನ್ನು ಕೇಂದ್ರ ಚುನಾವಣಾ ಆಯೋಗ ನೇಮಿಸಿದೆ.