ಆ ಪುಟ್ಟ ದೇಹದಲ್ಲೊಂದು ವಿಸ್ತಾರವಾದ ಹೃದಯವಿತ್ತು. ಆ ಹೃದಯ ಎಲ್ಲರಿಗಾಗಿ ಬಡಿಯುತ್ತಿತ್ತು. ಅಂಥದ್ದೊಂದು ಹೃದಯ ಮೊನ್ನೆ ಸ್ತಬ್ಧವಾಯ್ತು. ನಿಜಕ್ಕೂ ಅವರ ಸ್ಥಾನ ತುಂಬಬಲ್ಲಂತಹ ಮತ್ತೊಬ್ಬ ಸಂತ ಸದ್ಯಕ್ಕೆ ಸಿಗುವುದು ಕಷ್ಟ. ಸರ್ವಸಂಗ ಪರಿತ್ಯಾಗಿಯಾದ ಆ ಮಹಾತ್ಮನನ್ನು ಕಳೆದುಕೊಳ್ಳುವಾಗ ಹೃದಯ ಭಾರವಾಗಿ ಕಣ್ಣಾಲಿಗಳು ತುಂಬಿಬಂದದ್ದು ಅದೇ ಕಾರಣಕ್ಕೆ. ತಾವು ಕಟ್ಟಿಕೊಂಡಿದ್ದ ರಾಮಮಂದಿರ ಸಂಕಲ್ಪವನ್ನು ಪೂರ್ಣಗೊಳಿಸಿದ ಪೇಜಾವರ ಶ್ರೀಗಳು ಈಗ ಕೃಷ್ಣನ ಸನ್ನಿಧಾನದಲ್ಲಿದ್ದಾರೆ.
ಪೇಜಾವರ ಶ್ರೀಗಳು ಕೃಷ್ಣನ ಪದತಲಕ್ಕೆ ಸೇರಿಹೋದರು. ಐಸಿಯುನಲ್ಲಿ ಮಂದಸ್ಮಿತರಾಗಿ ಅದೇ ತೇಜಸ್ಸಿನೊಂದಿಗೆ ಮಲಗಿದ್ದ ಶ್ರೀಗಳು ಮರಳಿ ಬಂದೇ ಬರುತ್ತಾರೆಂಬ ವಿಶ್ವಾಸ ಭಕ್ತರಿಗೇನು, ವೈದ್ಯರಿಗೂ ಇದ್ದಿರಲು ಸಾಕು. ರಾಷ್ಟ್ರನಿರ್ವಣದ ಕನಸು ಕಟ್ಟಿದ ಪ್ರತಿಯೊಬ್ಬರೂ ಆತ ಹಿಂದೂ, ಮುಸಲ್ಮಾನ್, ಕ್ರಿಶ್ಚಿಯನ್ ಆಗಿರಲಿ ಅಥವಾ ಯಾವ ಪಕ್ಷ-ಪಂಗಡಗಳಿಗಾದರೂ ಸೇರಿರಲಿ ಪೇಜಾವರ ಶ್ರೀಗಳನ್ನು ಒಪ್ಪಲೇಬೇಕು ಮತ್ತು ಜೀವನದಲ್ಲೊಮ್ಮೆ ಅವರನ್ನು ಕಾಣುವ ಹಂಬಲವಿಟ್ಟುಕೊಂಡಿರಲೇಬೇಕು.
ಆ ಬಗೆಯ ವ್ಯಕ್ತಿತ್ವ ಅವರದ್ದು. ತೀರಾ 89ರಲ್ಲೂ ಅವರ ಉತ್ಸಾಹ, ಕ್ರಿಯಾಶೀಲತೆ, ಬೌದ್ಧಿಕ ಕ್ಷಮತೆ, ವಿದ್ಯಾರ್ಥಿಗಳಿಗೆ ಪಾಠ ಮಾಡುವ ಪರಿ ಇವೆಲ್ಲವೂ ಅನುಪಮವಾದ್ದು. ಅವರನ್ನು ಕಳೆದುಕೊಂಡ ನಾಡು ಎಷ್ಟು ಬರಡಾಗಿದೆಯೋ ಅದಕ್ಕಿಂತಲೂ ಹತ್ತುಪಟ್ಟು ಹೆಚ್ಚು ಅವರಿಂದ ಪಾಠ ಮಾಡಿಸಿಕೊಂಡ ವಿದ್ಯಾರ್ಥಿಗಳು ಒಂಟಿತನಕ್ಕೆ ಬಿದ್ದಿದ್ದಾರೆ!
ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗಿನಿಂದಲೂ ಅವರನ್ನು ಕಾಣಬೇಕೆಂಬ ತವಕ ನನಗೆ ಇದ್ದೇ ಇತ್ತು. ಕಾಲೇಜಿನ ಕಿರಿಯ ವಿದ್ಯಾರ್ಥಿಯ ತಂದೆ ಶ್ರೀಗಳಿಗೆ ಆಪ್ತರಾಗಿದ್ದರಿಂದ ಅವಕಾಶ ದಕ್ಕಿಬಿಟ್ಟಿತು. ಉಡುಪಿಯ ಅವರ ಕೋಣೆಯಲ್ಲಿ, ಸಾಮಾನ್ಯ ವಿದ್ಯಾರ್ಥಿಯಾಗಿದ್ದ ನನ್ನನ್ನು ಅವರು ಸಹಜವಾಗಿಯೇ ಮಾತನಾಡಿಸಿದರು. ಕೈಯಲ್ಲಿದ್ದ ದಿನಪತ್ರಿಕೆಗಳನ್ನೆಲ್ಲ ಬದಿಗಿಟ್ಟು ನನ್ನ ಕುರಿತಂತೆ ಒಂದಷ್ಟು ವಿಚಾರಿಸಿಕೊಂಡು ಮುಂದೇನು ಎಂಬಂತೆ ಅವರ ಮುಖ ಪ್ರಶ್ನಾರ್ಥಕವಾಯ್ತು.
ಹಾಗೆ ನೋಡಿದರೆ ಅವರ ದೇಹ ಹಿಡಿಯಷ್ಟು ಅಷ್ಟೇ. ಒಂದು ಸಣ್ಣ ಕುರ್ಚಿಯಲ್ಲಿ ಚಕ್ಕಳ-ಮಕ್ಕಳ ಹಾಕಿಕೊಂಡು ಕುಳಿತುಬಿಡಬಹುದಾದಷ್ಟು ದೇಹ ಅವರದ್ದು. ಆದರೆ ಆ ದೇಹದೊಳಗಿದ್ದ ಸಂಕಲ್ಪ ಶಕ್ತಿ, ಕರ್ತೃತ್ವ ಶಕ್ತಿ, ಜ್ಞಾನಶಕ್ತಿ, ಧಾರಣಾ ಶಕ್ತಿ ಅತ್ಯದ್ಭುತವಾದ್ದು! ನಾನು ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತ ಅವರೊಡನೆ ಸ್ವಲ್ಪ ಸಲಿಗೆ ಉಂಟಾಯಿತೆಂದೊಡನೆ ಒಂದು ಸೈದ್ಧಾಂತಿಕವಾದ ಪ್ರಶ್ನೆಯನ್ನು ಮುಂದಿಟ್ಟೆ.
‘ಶಂಕರಾಚಾರ್ಯರು ಶ್ರೇಷ್ಠ ವ್ಯಕ್ತಿಯಾದರೂ ಮಠದ ಸಾಹಿತ್ಯಗಳಲ್ಲಿ ಅನೇಕ ಪಂಡಿತರು ಅವರನ್ನು ದೂಷಿಸಿ ಲೇಖನಗಳನ್ನು ಬರೆಯುತ್ತಾರಲ್ಲ ಏಕೆ?’ ಎಂದೆ. ಮಾಧ್ವ ಪಂಥಕ್ಕೂ ಶಾಂಕರ ಪಂಥಕ್ಕೂ ಅಷ್ಟಕ್ಕಷ್ಟೇ. ಬೇರೆ ಸಾಧುಗಳು ಈ ಪ್ರಶ್ನೆಗೆ ಹೇಗೆ ಉತ್ತರಿಸುತ್ತಿದ್ದರೋ ದೇವರೇ ಬಲ್ಲ. ಪೇಜಾವರ ಶ್ರೀಗಳು ಮಾತ್ರ ಒಂದು ಕ್ಷಣ ಗಂಭೀರವದನರಾಗಿ, ‘ನಮ್ಮ ಕಿತ್ತಾಟವಿರುವುದು ಸಿದ್ಧಾಂತದ ಕುರಿತಂತೆ ಮಾತ್ರ. ಶಂಕರಾಚಾರ್ಯರ ವ್ಯಕ್ತಿತ್ವ ಅಗಾಧವಾದ್ದು. ಅದನ್ನು ಟೀಕಿಸುವುದು ಸಲ್ಲ ಮತ್ತು ನಾವು ಅದನ್ನು ಟೀಕಿಸುವುದೂ ಇಲ್ಲ’ ಎಂದುಬಿಟ್ಟರು.
ಇಂಜಿನಿಯರಿಂಗ್ ಓದುತ್ತಿರುವ ತರುಣನೊಬ್ಬನ ಬಳಿ ಹೀಗೆ ಉತ್ತರಿಸಬೇಕಾದ ಅಗತ್ಯ ಅವರಿಗೆ ಖಂಡಿತ ಇರಲಿಲ್ಲ. ಆದರೆ, ಆ ಪುಣ್ಯಾತ್ಮ ಎಂದಿಗೂ ಯಾರಲ್ಲೂ ಚಿಕ್ಕವನು, ದೊಡ್ಡವನು ಎಂದು ಭೇದ ಮಾಡಲೇ ಇಲ್ಲ. ಎಲ್ಲರನ್ನೂ ಸಮವಾಗಿ ಕಾಣುತ್ತಿದ್ದ ಸಮದರ್ಶಿ ಅವರು. ಹೌದು, ಕೃಷ್ಣನ ಸಮದರ್ಶಿ ಎಂಬ ಪದಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗಬಲ್ಲ ವ್ಯಕ್ತಿತ್ವ ಅವರದ್ದೇ.
ಅವರ ಈ ಸಮದರ್ಶಿತ್ವ ಬರೀ ಹಿಂದೂಗಳಲ್ಲಿ ಮಾತ್ರವಲ್ಲ. ಸಜ್ಜನ ಮುಸಲ್ಮಾನರೂ ಅವರನ್ನು ಅಷ್ಟೇ ಪ್ರೀತಿಸುತ್ತಿದ್ದರು. ಹುಳುಕು ಮನಸ್ಸಿನ ಕೆಲ ಹಿಂದೂಗಳು ಅವರನ್ನು ದ್ವೇಷಿಸುತ್ತಿದ್ದುದು ಹೊಸತೇನೂ ಅಲ್ಲ. ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಸೆಣಸಾಡುತ್ತಿದ್ದಾಗ ಫೇಸ್ಬುಕ್ನಲ್ಲಿ ತುಚ್ಛವಾಗಿ ಬರೆದ ಪೋಸ್ಟ್ಗಳು ಹರಿದಾಡುತ್ತಿದ್ದವು. ಅದೂ ಸರಿಯೇ. ಎಲ್ಲರನ್ನೂ ಮೆಚ್ಚಿಸುವುದು ಸಾಧ್ಯವೇ ಇಲ್ಲದ ಸಂಗತಿ. ಆದರೆ ಶ್ರೀಗಳು ಮಾತ್ರ ಜಾತಿ-ಮತ-ಪಂಥಗಳನ್ನು ಮೀರಿ ಬೆಳೆದ ವ್ಯಕ್ತಿ!
ಶಿವಮೊಗ್ಗದಲ್ಲಿ ಸಂಸ್ಕಾರ ಭಾರತಿ ವತಿಯಿಂದ ಭಾರತಮಾತಾ ಪೂಜನ ಕಾರ್ಯಕ್ರಮಕ್ಕೆ ಶ್ರೀಗಳಿಗೆ ಆಹ್ವಾನ ಕೊಟ್ಟಿದ್ದೆವು. ಬರುತ್ತೇನೆಂದು ಅವರು ಒಪ್ಪಿಕೊಂಡಿದ್ದರು ಕೂಡ. ಈ ಕಾರ್ಯಕ್ರಮದ ಭಾಗವಾಗಿಯೇ ದಲಿತ ಕೇರಿಗಳಲ್ಲಿ ಪಾದಯಾತ್ರೆ ಜೋಡಿಸಿದ್ದೆವು. ಸುತ್ತಲೂ ಇರುವ ಕೆಲವು ಪುಣ್ಯಾತ್ಮರು ಶ್ರೀಗಳು ಬರುವುದು ಅನುಮಾನವೆಂದು ಒಂದು ದಿನ ಮುಂಚೆ ಹೇಳಿದಾಗ ಕೈ-ಕಾಲು ನಡುಗುವ ಪ್ರಸಂಗ. ದಲಿತರ ಕೇರಿಯಲ್ಲಿ ಅವರನ್ನೊಯ್ಯಬೇಕೆಂಬ ಪ್ರಯತ್ನವನ್ನು ಅನೇಕ ದಿನಗಳಿಂದ ಮಾಡಿಯಾಗಿತ್ತು. ಈಗ ಅವರು ಬರುವುದಿಲ್ಲವೆಂದರೆ ಅದು ಕೊಡಬಹುದಾದ ಸಂದೇಶ ಕೆಟ್ಟದ್ದಾಗಬಹುದಾಗಿದ್ದರಿಂದ ಅವರಿಗೆ ಇವೆಲ್ಲವನ್ನೂ ವಿವರಿಸಿ ಮತ್ತಷ್ಟು ಆಪ್ತರ ಮೂಲಕ ಅವರೆದುರು ಚಂಡಿ ಹಿಡಿದು ಕುಳಿತುಬಿಟ್ಟೆವು. ವಿಷಯ ತಿಳಿದೊಡನೆ ಒಂದಿನಿತೂ
ತಡಮಾಡದ ಶ್ರೀಗಳು, ‘ಸಂಜೆಯ ಕಾರ್ಯಕ್ರಮದಲ್ಲಿ ಬಹಳ ಹೊತ್ತು ಇರಲಾರೆ, ಆದರೆ ದಲಿತರ ಕೇರಿಗೆ ಮಾತ್ರ ಖಂಡಿತ ಬಂದು ಹೋಗುತ್ತೇನೆ’ ಎಂದು ವಿಶ್ವಾಸ ತುಂಬಿದ ನುಡಿಗಳನ್ನಾಡಿದರು. ದಲಿತರ ಕೇರಿಯಲ್ಲಿ ಅವರನ್ನು ಆ ಮನೆಗಳವರು ಸ್ವೀಕರಿಸಿದ ಪರಿ ಇಂದಿಗೂ ಕಣ್ತುಂಬಿದೆ. ಪ್ರತಿ ಮನೆಯಲ್ಲೂ ಪಾದಪೂಜೆ ಸ್ವೀಕರಿಸುತ್ತ ಸಾಗಿದ ಸ್ವಾಮಿಗಳು ಸ್ವಲ್ಪ ಹೊತ್ತು ಇದ್ದು ಹೋಗುತ್ತೇನೆಂದಷ್ಟೇ ಹೇಳಿದ್ದರು. ಆದರೆ ಅಷ್ಟೂ ಮನೆಗಳ ಎದುರಿಗೆ ಪಾದಪೂಜೆ ಸ್ವೀಕರಿಸಿ, ಅಲ್ಲಿನ ಅಂಗನವಾಡಿಯಲ್ಲಿ ಅವರೆಲ್ಲರನ್ನೂ ಸೇರಿಸಿ, ಉದ್ಬೋಧಕವಾಗಿ ಮಾತನಾಡಿ ಹೊರಟು ನಿಂತಾಗ ನಮ್ಮೆಲ್ಲರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ಈ ವಯಸ್ಸಿನಲ್ಲಿ ಈ ಪುಣ್ಯಾತ್ಮನಿಗೆ ನಾವು ಎಷ್ಟೆಲ್ಲ ಕಷ್ಟಕೊಡುತ್ತೇವಲ್ಲ ಎಂಬ ದುಃಖಕ್ಕೆ!
ನಮಗೂ ಶ್ರೀಗಳಿಗೂ ಘನಿಷ್ಠ ಸಂಬಂಧ ಬೆಸೆದುಕೊಂಡಿದ್ದು ಕನಕನಡೆಯ ಹೊತ್ತಲ್ಲಿ. ಪೇಜಾವರ ಶ್ರೀಗಳ ಅನುಗ್ರಹ ಪಡೆಯುವ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್ನ ಕಾರ್ಯಕರ್ತರೆಲ್ಲ ಉಡುಪಿಯಲ್ಲಿ ಸ್ವಚ್ಛತೆಯ ದೃಷ್ಟಿಯಲ್ಲಿ ಸೇರಬೇಕೆಂದು ಬಹಳ ಹಿಂದೆಯೇ ಅವರನ್ನು ಕೇಳಿಕೊಳ್ಳಲಾಗಿತ್ತು. ಅವರು ಡೈರಿ ನೋಡಿ ಸೂಕ್ತ ದಿನಾಂಕವನ್ನೂ ಕೊಟ್ಟಿದ್ದರು. ಆ ಹೊತ್ತಲ್ಲಿಯೇ ಒಂದಷ್ಟು ಎಡಪಂಥೀಯರು ಮುಸಲ್ಮಾನರನ್ನು ಸೇರಿಸಿಕೊಂಡು ದಲಿತರ ಹೋರಾಟದ ನೆಪದಲ್ಲಿ ರಾಜ್ಯಪ್ರವಾಸ ಮಾಡಿ ಉಡುಪಿಗೆ ಬರುವುದೆಂದು ನಿಶ್ಚಯ ಮಾಡಿದರು. ಸ್ಪಷ್ಟವಾಗಿ ಈ ಹೋರಾಟದ ಹಿಂದೆ ದಲಿತರನ್ನು ವೋಟ್ಬ್ಯಾಂಕ್ ಮಾಡಿಕೊಳ್ಳುವ ಹುನ್ನಾರವಿತ್ತೇ ಹೊರತು ಅವರ ಉದ್ಧಾರದ ಯಾವ ಯೋಜನೆಯೂ ಇರಲಿಲ್ಲ.
ಈ ಹಂತದಲ್ಲಿಯೇ ನಮ್ಮ ಸ್ವಚ್ಛತೆಯೂ ಇದ್ದದ್ದನ್ನು ಎಷ್ಟು ದೊಡ್ಡದ್ದಾಗಿ ಪ್ರತಿಬಿಂಬಿಸಿದರೆಂದರೆ ದಲಿತರು ಬಂದದ್ದಕ್ಕೆ ಶ್ರೀಗಳು ಉಡುಪಿ ಸ್ವಚ್ಛತೆಯನ್ನು ಮಾಡಿಸುತ್ತಿದ್ದಾರೆ ಎಂದು ಎಡಪಂಥೀಯ ಬುದ್ಧಿಜೀವಿಗಳು ವಿಚಾರ ಹಬ್ಬಿಸಲಾರಂಭಿಸಿದರು. ಸಮಾರೋಪದಲ್ಲಿ ಜಿಗ್ನೇಶ್ ಮೇವಾನಿಯಂತೂ ‘ಸ್ವಲ್ಪ ದಿನಗಳಲ್ಲೇ ಮಠಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂಬ ಘೊಷಣೆಯನ್ನೂ ಕೊಟ್ಟುಬಿಟ್ಟ. ತಥಾಕಥಿತ ಮೇಲ್ವರ್ಗ ಮತ್ತು ದಲಿತರ ನಡುವೆ ಸಮರ್ಥ ಸೇತುವೆಯಾಗಿ ನಿಂತಿರುವ ಪೇಜಾವರರು ಹಿಂದುತ್ವದ ಚಿಂತನೆಯಿಂದ ಒಂದಡಿ ಹಿಂದೆ ಇಟ್ಟರೆ ಕರ್ನಾಟಕವನ್ನೇ ಸೂರೆಗೊಂಡುಬಿಡಬಹುದು ಎಂಬ ಕಲ್ಪನೆ ಅವರದ್ದು.
ಹೀಗಾಗಿ ನಮ್ಮ ಸ್ವಚ್ಛತೆಯ ವಿಚಾರವನ್ನು ರಾಷ್ಟ್ರಮಟ್ಟದ ಸುದ್ದಿಯಾಗಿ ಸುಳ್ಳು-ಸುಳ್ಳೇ ಹಬ್ಬಿಸಿಬಿಟ್ಟರು. ಎಡಪಂಥೀಯರಿಗೆ ಯಾವ ಶಕ್ತಿ ಇದೆಯೋ ಗೊತ್ತಿಲ್ಲ, ಆದರೆ ನೂರು ಬಾರಿ ಸುಳ್ಳನ್ನು ಹೇಳಿ ಅದನ್ನೇ ಸತ್ಯ ಎಂದು ನಂಬಿಸಿಬಿಡುವ ತಾಕತ್ತಂತೂ ಇದ್ದೇ ಇದೆ! ಸಿಎಎ ವಿಚಾರದಲ್ಲಿ ಆದದ್ದೂ ಇದೆ. ಈಗ ನಮ್ಮ ಮೇಲೆ ಬಲುದೊಡ್ಡ ಒತ್ತಡವಿತ್ತು. ಇಡೀ ಸ್ವಚ್ಛತಾ ಕಾರ್ಯಕ್ರಮವನ್ನು ಹಿಂತೆಗೆದುಕೊಂಡುಬಿಡಬೇಕು ಅಥವಾ ಸವಾಲು ಸ್ವೀಕರಿಸಿ ಮುನ್ನುಗ್ಗಲೇಬೇಕು. ನಮಗೂ ಆತಂಕವಿದ್ದದ್ದು ಶ್ರೀಗಳದ್ದು ಮಾತ್ರ. ಅವರೇ ಬೇಡವೆಂದು ಹೇಳಿಬಿಟ್ಟಿರೆ ಮುಂದೇನು ಮಾಡುವುದು. ಕೆಲವು ದಿನಗಳ ಮುಂಚೆ ಶ್ರೀಗಳನ್ನು ಭೇಟಿ ಮಾಡಿ ಕೇಳಿಕೊಂಡಾಗ, ಅವರು ಹಸಿರು ನಿಶಾನೆ ತೋರಿದರಲ್ಲದೆ ‘ಈ ಕಾರ್ಯಕ್ರಮ ಎಡಪಂಥೀಯರ ಕಾರ್ಯಕ್ರಮಕ್ಕಿಂತಲೂ ಮುಂಚೆಯೇ ಯೋಜನೆಯಾಗಿದ್ದು ನನಗೆ ಗೊತ್ತಿದೆ. ತಲೆಕೆಡಿಸಿಕೊಳ್ಳಬೇಡಿ’ ಎಂದರು.
ವಿವಾದ ತೀವ್ರ ಸ್ವರೂಪ ಪಡೆದುಕೊಂಡಾಗ ಅದಕ್ಕೆ ಸಮಜಾಯಿಷಿ ಕೊಡಲು ಬಯಸಿದ ಸ್ವಾಮೀಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಪತ್ರ ಬರೆದುಬಿಟ್ಟರು. ನಾನಂತೂ ಅಂದು ರಾತ್ರಿ ಹಾಗೇಕೆ ಮಾಡಿದಿರೆಂದು ಅಕ್ಷರಶಃ ಗುರುಗಳ ಬಳಿ ಕಿತ್ತಾಡಿದೆ. ಅವರು ‘ಮಾಧ್ಯಮ ಸಲಹೆಗಾರ ಮುಖ್ಯಮಂತ್ರಿಗಳ ಜತೆಯಲ್ಲೇ ಇರುವುದರಿಂದ ಅವರಿಗೆ ವಿಚಾರ ಸರಿಯಾಗಿ ಮುಟ್ಟಲಿ ಎಂಬುದು ನನ್ನ ಆಶಯವಷ್ಟೇ’ ಎಂದರು. ಯಾರು ಟೀಕೆ ಮಾಡಿದಾಗಲು ಅದಕ್ಕೆ ಅಷ್ಟೇ ಪ್ರೀತಿಯಿಂದ ಸಮಜಾಯಿಷಿ ಕೊಡುವ ದೊಡ್ಡ ವ್ಯಕ್ತಿತ್ವ ಅವರದ್ದು!
ಮುಂದೇನು ಗೊತ್ತೇ? ಸಾವಿರ ಸಾವಿರ ಸಂಖ್ಯೆಯ ಪೊಲೀಸರ ನಡುವೆ ನಾವು ಸ್ವಚ್ಛತೆಗೆಂದು ನಿಂತೆವು. ಪೊಲೀಸರು ದೂರದೂರಿಂದ ತಂದಿದ್ದ ಪೊರಕೆಗಳನ್ನೂ ಕಿತ್ತುಕೊಂಡು ಕಳಿಸುತ್ತಿದ್ದರು. ನಾವು ಅಷ್ಟೇ ತಯಾರಿ ನಡೆಸಿಕೊಂಡು ಕೊನೆಗೂ ಕನಕನಡೆ ಸಂಪನ್ನಗೊಳಿಸಿ ಗುರುಗಳ ಬಳಿ ಬಂದು ಕುಳಿತಾಗ ಸಾವಿರಕ್ಕೂ ಮಿಕ್ಕಿದ್ದ ತರುಣ-ತರುಣಿಯರಿಗೆ ಸ್ವತಃ ಗುರುಗಳೇ ಆಶೀರ್ವದಿಸಿ, ಶಾಲುಹಾಕಿ ಪ್ರಸಾದ ಕೈಗಿಟ್ಟರು. ಕೃಷ್ಣನ ಪ್ರೇಮ ಹೀಗೇ ಇದ್ದಿರಬೇಕು ಎಂದು ಅನೇಕರಿಗೆ ಅಂದು ಭಾವನೆ ಬಂದಿತ್ತು! ಜಿಗ್ನೇಶ್ ಮೇವಾನಿ ಮತ್ತವರ ಮಿತ್ರರು ದಲಿತರ ಉದ್ಧಾರಕ್ಕೆ ಏನು ಮಾಡಿದರೋ ಗೊತ್ತಿಲ್ಲ, ಆದರೆ ಅಂದು ನಿರ್ಣಯ ಕೈಗೊಂಡಂತೆ ದಲಿತ ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡಿಸಲೆಂದು ಆನಂತರ ಸ್ವಾಮೀಜಿ ಹೊಲಿಗೆ ಯಂತ್ರಗಳನ್ನು ಕೊಡಿಸಿದ್ದು ನನ್ನ ಜತೆ ಇದ್ದ ಅನೇಕರಿಗೆ ಗೊತ್ತು!
ಯಾವ ಸಮಾಜಮುಖಿ ಚಿಂತನೆಯಾದರೂ ಶ್ರೀಗಳ ಭೇಟಿ ಕಷ್ಟವಾಗುತ್ತಿರಲಿಲ್ಲ. ವೃಷಭಾವತಿಗಾಗಿ ವಿಡಿಯೋ ಬೇಕು ಎಂದು ಕೇಳಿದಾಗ ಆ ಕ್ಷಣದಲ್ಲಿ ಕ್ಯಾಮರಾಕ್ಕೆ ಮುಖ ಮಾಡಿ ಸಮರ್ಥವಾಗಿ ನದಿ ಏಕೆ ಸ್ವಚ್ಛ ಮಾಡಬೇಕೆಂದು ನಮ್ಮೆದುರು ಬಿಚ್ಚಿಟ್ಟರು. ಅವರೊಂದು ಅಪರೂಪದ ಜೀವ. ಅವರ ಶಿಷ್ಯರು ಸಿಕ್ಕಾಗ ಸ್ವಾಮೀಜಿಯವರ ಹಾಸ್ಯ ಪ್ರಸಂಗಗಳ ಕುರಿತಂತೆ ನಾನು ಕೇಳುವುದಿತ್ತು. ಅವರೆಲ್ಲ ಸ್ವಾಮೀಜಿಯೊಂದಿಗೆ ಟೆಂಪೊಟ್ರಾವೆಲರ್ನಲ್ಲಿ ಹೋಗುವಾಗ ನಡೆದ ಅನೇಕ ಪ್ರಸಂಗಗಳನ್ನು ಉಲ್ಲೇಖಿಸುತ್ತಿದ್ದರು.
ತಮ್ಮ ಪ್ರಿಯ ಅಡುಗೆಭಟ್ಟನನ್ನು ಎಲ್ಲರೂ ಗೋಳು ಹೋಯ್ದುಕೊಂಡು, ಆತ ಮಾರ್ಗ ಮಧ್ಯದಲ್ಲೇ ಕೋಪಿಸಿಕೊಂಡು ಇಳಿದು ಹೋದರೆ, ಮನಃಪೂರ್ತಿಯಾಗುವಷ್ಟು ನಗುತ್ತಿದ್ದ ಸ್ವಾಮೀಜಿ ಮತ್ತೆ ಅವರನ್ನು ಕರೆದು ಗಾಡಿ ಹತ್ತಿಸಿಕೊಂಡು ಉಳಿದವರನ್ನೆಲ್ಲ ಗದರಿಸಿ ಸುಮ್ಮನಾಗುತ್ತಿದ್ದರಂತೆ. ಆ ಪುಟ್ಟ ದೇಹದಲ್ಲೊಂದು ವಿಸ್ತಾರವಾದ ಹೃದಯವಿತ್ತು. ಆ ಹೃದಯ ಎಲ್ಲರಿಗಾಗಿ ಬಡಿಯುತ್ತಿತ್ತು. ಅಂಥದ್ದೊಂದು ಹೃದಯ ಮೊನ್ನೆ ಸ್ತಬ್ಧವಾಯ್ತು. ನಿಜಕ್ಕೂ ಅವರ ಸ್ಥಾನ ತುಂಬಬಲ್ಲಂತಹ ಮತ್ತೊಬ್ಬ ಸಂತ ಸದ್ಯಕ್ಕೆ ಸಿಗುವುದು ಕಷ್ಟ. ಸರ್ವಸಂಗ ಪರಿತ್ಯಾಗಿಯಾದ ಆ ಮಹಾತ್ಮನನ್ನು ಕಳೆದುಕೊಳ್ಳುವಾಗ ಹೃದಯ ಭಾರವಾಗಿ ಕಣ್ಣಾಲಿಗಳು ತುಂಬಿಬಂದದ್ದು ಅದೇ ಕಾರಣಕ್ಕೆ. ತಾವು ಕಟ್ಟಿಕೊಂಡಿದ್ದ ರಾಮಮಂದಿರದ ಸಂಕಲ್ಪವನ್ನು ಪೂರ್ಣಗೊಳಿಸಿದ ಪೇಜಾವರ ಶ್ರೀಗಳು ಈಗ ಕೃಷ್ಣನ ಸನ್ನಿಧಾನದಲ್ಲಿದ್ದಾರೆ. ಅವರ ಭಕ್ತರು ಮತ್ತು ರಾಷ್ಟ್ರಕ್ಕಾಗಿ ಅವರೊಂದಿಗೆ ನಡಿಗೆ ಹಾಕುತ್ತಿದ್ದವರೆಲ್ಲರೂ ಖಂಡಿತ ಅನಾಥರಾಗಿದ್ದಾರೆ!
| ಚಕ್ರವರ್ತಿ ಸೂಲಿಬೆಲೆ (ಲೇಖಕರು ಖ್ಯಾತ ವಾಗ್ಮಿ, ಚಿಂತಕರು)