ಪ್ಯಾರಿಸ್: ಭಾರತ ಮತ್ತು ಫ್ರಾನ್ಸ್ ಪರಮಾಣು ಶಕ್ತಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಗೆ ಸೂಚಿಸಿದ್ದು, ಇದರನ್ವಯ ಭಾರತದಲ್ಲಿ ಸುಧಾರಿತ ಮಾಡ್ಯುಲರ್ ರಿಯಾಕ್ಟರ್ಗಳ ಸ್ಥಾಪನೆ ಒಪ್ಪಂದಕ್ಕೆ ಸಹಿ ಹಾಕಿವೆ. ಎಐ ಶೃಂಗ ಸಭೆಯ ಬಳಿಕ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಜತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಿದರು. ಭಾರತ ಮತ್ತು ಫ್ರಾನ್ಸ್ ನಡುವೆ ವ್ಯಾಪಾರ ವಹಿವಾಟು ಹಾಗೂ ಹೂಡಿಕೆ ಒಪ್ಪಂದಗಳ ಹೆಚ್ಚಳ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ, ಇಂಡೋ ಫೆಸಿಫಿಕ್ ಸೇರಿ ಹಲವು ಜಾಗತಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಎಐ ಕ್ಷೇತ್ರದಲ್ಲಿ ಸಾಮಾಜ, ಆರ್ಥಿಕ ಮತ್ತು ಪರಿಸರಕ್ಕೆ ಅನುಕೂಲವಾಗುವಂತೆ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಚರ್ಚೆ ನಡೆಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ತುರ್ತಾಗಿ ಪುನರ್ ರಚಿಸಬೇಕಾದ ಅಗತ್ಯವಿದೆ ಎಂದು ಉಭಯ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ದೊರಕಿಸಿಕೊಡುವ ಕುರಿತು ಬೆಂಬಲ ನೀಡುವುದಾಗಿ ಫ್ರಾನ್ಸ್ ಅಧ್ಯಕ್ಷರು ತಿಳಿಸಿದ್ದಾರೆ. ಉಭಯ ನಾಯಕರ ಮಾತುಕತೆ ವೇಳೆ ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೂಪದ ಭಯೋತ್ಪಾದನೆಯನ್ನು ಖಂಡಿಸಿದರು. ಇದೇ ವೇಳೆ ಭಯೋತ್ಪಾದಕರಿಗೆ ಹಣಕಾಸು ನೆರವು ಒದಗಿಸುವ ಜಾಲಗಳು ಮತ್ತು ಅವರಿಗೆ ಸುರಕ್ಷಿತ ಅಡಗುತಾಣಗಳನ್ನು ಯಾವುದೇ ದೇಶ ಒದಗಿಸಬಾರದು ಕರೆ ನೀಡಿದರು.
ಏನೇನು ಒಪ್ಪಂದ?: ಫ್ರಾನ್ಸ್ ನ ಸ್ಟಾರ್ಟ್ ಅಪ್ ಇಂಕ್ಯುಬೇಟರ್ ಸ್ಟೇಷನ್ ನಲ್ಲಿ ಭಾರತದ 10 ಸ್ಟಾರ್ಟ್ ಅಪ್ಗಳಿಗೆ ಅವಕಾಶ ನೀಡುವ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಪರಮಾಣು ಶಕ್ತಿ ಇಲಾಖೆ (ಡಿಎಇ), ಕಮಿಷರಿಯೇಟ್ ಎ ಎಲ್ ಎನರ್ಜಿ ಆಟೋಮಿಕ್ ಎಟ್ ಆಕ್ಸ್ ಎನರ್ಜಿಸ್ ಆಲ್ಟರ್ನೆಟಿವ್ಸ್ ಆಫ್ ಫ್ರಾನ್ಸ್ (ಸಿಎಇ) ಹಾಗೂ ಗ್ಲೋಬಲ್ ಸೆಂಟರ್ ಫಾರ್ ನ್ಯೂಕ್ಲಿಯರ್ ಎನರ್ಜಿ ಪಾರ್ಟ್ನರ್ಶಿಪ್ (ಜಿಸಿಎನ್ಇಪಿ) ನಡುವಿನ ಒಪ್ಪಂದಗಳನ್ನು ನವೀಕರಿಸಲಾಯಿತು. ಸುಧಾರಿತ ಮಾಡ್ಯುಲರ್ ರಿಯಾಕ್ಟರ್ಗಳು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳ ಸ್ಥಾಪನೆ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ. ಈ ರಿಯಾಕ್ಟರ್ಗಳು 300 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ದೊಡ್ಡ ಅಣು ಸ್ಥಾವರ ಸ್ಥಾಪಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಇವುಗಳನ್ನು ನಿರ್ವಿುಸಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. 2033ರ ವೇಳಗೆ 5 ಸಣ್ಣ ಮಾಡ್ಯುಲರ್ ರಿಯಾಕ್ಟರ್ ಸ್ಥಾಪಿಸುವ ಗುರಿಯನ್ನು ಭಾರತ ಹೊಂದಿದೆ.
ಮಾರ್ಸಿಲ್ಲೆ ಜನರಿಗೆ ಧನ್ಯವಾದ: ಸ್ವತಂತ್ರ ಹೋರಾಟಗಾರ ವೀರ್ ಸಾವರ್ಕರ್ ಅವರ ಪಲಾಯನದಲ್ಲಿ ನೆರವಾದ ಫ್ರಾನ್ಸ್ನ ಮಾರ್ಸಿಲ್ಲೆ ನಗರದ ಜನರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ‘ಭಾರತದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಈ ನಗರ ವಿಶೇಷ ನಂಟನ್ನು ಹೊಂದಿದೆ. ವೀರ್ ಸಾವರ್ಕರ್ ಅವರು ಪಲಾಯನ ಮಾಡಲು ಯತ್ನಿಸಿದ್ದು ಇಲ್ಲಿಯೇ. ಮಾರ್ಸಿಲ್ಲೆಯ ಜನರ ಮತ್ತು ಆ ಕಾಲದ ಫ್ರಾನ್ಸ್ ಹೋರಾಟಗಾರರು ಸಾವರ್ಕರ್ ಅವರನ್ನು ಬ್ರಿಟಿಷರಿಗೆ ಹಸ್ತಾಂತರಿಸದಂತೆ ಒತ್ತಾಯಿಸಿದ್ದರು. ಸಾವರ್ಕರ್ ಅವರ ಶೌರ್ಯ ಅಂದಿನಿಂದ ಜನರಿಗೆ ಸ್ಪೂರ್ತಿ ನೀಡುತ್ತಲೇ ಇದೆ.’ ಎಂದು ತಿಳಿಸಿದ್ದಾರೆ.
ಮೂರು ಜಲಾಂತರ್ಗಾಮಿ ನೌಕೆ ನಿರ್ಮಾಣ: ಫ್ರಾನ್ಸ್ ವಿನ್ಯಾಸಗೊಳಿಸಿರುವ ಸ್ಕಾರ್ಪೆನ್ ಕ್ಲಾಸ್ ಹಂಟರ್ ಕಿಲ್ಲರ್ ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕುರಿತು ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಚರ್ಚೆ ನಡೆಸಿದ್ದಾರೆ. ಪ್ರಸ್ತುತ ಫ್ರಾನ್ಸ್ ಸಹಭಾಗಿತ್ವದಲ್ಲಿ 6 ಸ್ಕಾರ್ಪೆನ್ ಕ್ಲಾಸ್ ಜಲಾಂತರ್ಗಾಮಿಗಳನ್ನು ನಿರ್ವಿುಸಲಾಗಿದ್ದು, ನೌಕಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಜತೆಯಲ್ಲೇ 36 ಸಾವಿರ ಕೋಟಿ ವೆಚ್ಚದಲ್ಲಿ 3 ಜಲಾಂತರ್ಗಾಮಿಗಳ ನಿರ್ವಣವಾಗಲಿದೆ. ಈ ನೌಕೆಗಳು ಶೇ. 60ರಷ್ಟು ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದ್ದರೆ, ಉಳಿದ ತಾಂತ್ರಿಕತೆನ್ನು ಫ್ರಾನ್ಸ್ನಿಂದ ಪಡೆಯಲಾಗುವುದು ಎಂದು ತಿಳಿದು ಬಂದಿದೆ.
ಇಂದು ಮೋದಿ ಅಮೆರಿಕ ಭೇಟಿ: ಫ್ರಾನ್ಸ್ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ತೆರಳುತ್ತಿರುವ ಪ್ರಧಾನಿ ವಾಷಿಂಗ್ಟನ್ನಲ್ಲಿ ಟ್ರಂಪ್ ಜತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅದರಲ್ಲೂ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ರಕ್ಷಣಾ ಸಹಕಾರ, ಭಯೋತ್ಪಾದನೆ ನಿಗ್ರಹ, ಇಂಡೋ ಫೆಸಿಫಿಕ್ ಭದ್ರತೆ ಸೇರಿ ಹಲವು ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಉಭಯ ನಾಯಕರ ಚರ್ಚೆ ವೇಳೆ ಅಕ್ರಮ ಭಾರತೀಯ ವಲಸಿಗರ ಗಡಿಪಾರು ವಿಷಯವೂ ಚರ್ಚೆಯಾಗುವ ನಿರೀಕ್ಷೆ ಇದೆ.