ಭಾರತದ ಅಭಿವೃದ್ಧಿಯ ಸೌಮ್ಯಶಕ್ತಿ ಎನ್​ಆರ್​ಐ

blank

ಭಾರತದಿಂದ ವಿದೇಶಕ್ಕೆ ಉದ್ಯೋಗ, ಶಿಕ್ಷಣ ಅರಸಿ ಹೋಗುತ್ತಿದ್ದವರನ್ನು ಬೌದ್ಧಿಕ ಪಲಾಯನ (ಬ್ರೖೆನ್ ಡ್ರೖೆನ್) ಎನ್ನುವ ಕಾಲವೊಂದಿತ್ತು. ಇದು ಪಲಾಯನವಲ್ಲ, ಭಾರತದ ಸಂಸ್ಕೃತಿಯ ರಾಯಭಾರಿಗಳಿವರು, ದೇಶಕ್ಕೂ ಕೊಡುಗೆ ನೀಡಬಲ್ಲರು. ಅವರು ವಿದೇಶಗಳಲ್ಲಿರುವ ಭಾರತದ ಸೌಮ್ಯಶಕ್ತಿ (ಸಾಫ್ಟ್ ಪವರ್) ಎಂಬುದನ್ನು ಮೊದಲು ಗುರುತಿಸಿದ್ದು 2000ದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಭೇಟಿಯ ವೇಳೆ ಅನಿವಾಸಿ ಭಾರತೀಯರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದು, ಭಾರತದೊಂದಿಗಿನ ಅವರ ನಂಟನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಇಂದು ಪ್ರವಾಸಿ ಭಾರತೀಯ ದಿವಸ್ ಹಿನ್ನೆಲೆಯಲ್ಲಿ ಇಬ್ಬರು ಎನ್​ಆರ್​ಐ ಸಾಧಕರು ‘ವಿಜಯವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

 

ನಮ್ಮ ಹೃದಯ ಭಾರತಕ್ಕಾಗಿ ಮಿಡಿಯುತ್ತದೆ

dr Neerajಡಾ. ನೀರಜ್ ಪಾಟೀಲ್ ಲಂಡನ್
ಹಿಂದುಸ್ ಫಾರ್ ಲೇಬರ್ ಸಂಘಟನೆಯ ಮುಖ್ಯಸ್ಥ

ಭಾರತ ಮತ್ತು ಭಾರತೀಯರು ಅನಿವಾಸಿ ಭಾರತೀಯರ ಹೃದಯದಲ್ಲಿ ನೆಲೆಸಿದ್ದಾರೆ. ಎನ್​ಆರ್​ಐಗಳು ಯಾವುದೇ ರಾಷ್ಟ್ರದಲ್ಲಿ ನೆಲೆಸಿರಲಿ, ಅವರ ಹೃದಯ ಸದಾ ಭಾರತಕ್ಕಾಗಿ ಮಿಡಿಯುತ್ತದೆ, ತುಡಿಯುತ್ತದೆ. ಇಲ್ಲಿ ಬಂದು ನೆಲೆಸಿದ ಮೇಲೆ ಭಾರತದ ಮಹತ್ವ ಏನೆಂಬುದು ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ವಿದೇಶದಲ್ಲಿ ಕೆಲಸ ಗಿಟ್ಟಿಸುವುದು ಆರಂಭದಲ್ಲಿ ಆಕರ್ಷಣೆಯಂತೆ ಕಂಡರೂ, ಭಾರತ ಬಿಟ್ಟು ಬಂದ ಮೇಲೆ ವಾಸ್ತವದ ಅರಿವಾಗುತ್ತದೆ. ದಿನವಿಡೀ ಕೆಲಸ ಮಾಡಿ, ಕರ್ತವ್ಯ ನಿರ್ವಹಿಸಿ ಸಂಜೆ ಮನೆಗೆ ಮರಳಿದ ಬಳಿಕ ಹೇಗೆ ನೆಮ್ಮದಿಯ ಭಾವ ಅನುಭವಿಸುತ್ತೇವೋ ಹಾಗೇ, ವಿದೇಶದಿಂದ ನಮ್ಮ ಮನೆಗೆ (ಭಾರತಕ್ಕೆ) ಮರಳಲು ಮನಸ್ಸು ಹಾತೊರೆಯುತ್ತಿರುತ್ತದೆ.

ಅಭಿವೃದ್ಧಿಯ ವಿಷಯದಲ್ಲಿ ಖಂಡಿತವಾಗಿಯೂ ಅನಿವಾಸಿ ಭಾರತೀಯರ ಪಾತ್ರ ಮಹತ್ವದ್ದು. ಯಾವುದೇ ದೇಶದಲ್ಲಿ ನೆಲೆಸಿದರೂ, ಇವರು ಭಾರತದ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಾರೆ. ಭಾರತದ ಪರಂಪರೆಯನ್ನು, ಸಂಸ್ಕೃತಿಯ ಮೌಲ್ಯವನ್ನು ವಿದೇಶಗಳಲ್ಲಿ ಪಸರಿಸಿದಾಗ ಸಿಗುವ ಅನುಭವವೇ ಅನನ್ಯ. ಆರ್ಥಿಕತೆ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಿಗೆ ಎನ್​ಐಆರ್​ಗಳು ಕೊಡುಗೆ ನೀಡುತ್ತ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಂತೂ, ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಹೆಚ್ಚಿದ್ದು, ಅಮೆರಿಕ ಮತ್ತು ಬ್ರಿಟನ್​ನಲ್ಲಿ ಪುಟ್ಟ ಭಾರತವೇ ನೆಲೆಸಿದೆ. ಬ್ರಿಟನ್​ನ ಆರೋಗ್ಯ ಕ್ಷೇತ್ರದ ಮುಂಚೂಣಿಯಲ್ಲಿ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಆಸ್ಪತ್ರೆಗಳ ವಿವಿಧ ವಿಭಾಗಗಳಲ್ಲಿ ಶೇ. 25ರಷ್ಟು ಸಿಬ್ಬಂದಿ ಭಾರತೀಯ ಮೂಲದವರೇ.

ಕರ್ನಾಟಕಕ್ಕೆ ಕೊಡುಗೆ: ನಿಸ್ಸಂದೇಹವಾಗಿ ಕರ್ನಾಟಕ, ಕನ್ನಡ ಎಂದಾಕ್ಷಣ ನಮ್ಮ ಭಾವನೆಗಳು ಜಾಗೃತಗೊಳ್ಳುತ್ತವೆ. ಕರ್ನಾಟಕದಲ್ಲಿನ ಅಥವಾ ತಮ್ಮ ಪ್ರಾಂತ್ಯದಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎನ್​ಆರ್​ಐಗಳು ಸದಾ ಕಾರ್ಯನಿರತರು. ಸರ್ಕಾರಿ ಶಾಲೆಗಳ ಜೀಣೋದ್ಧಾರ, ತಾವು ಕಲಿತ ಶಾಲೆಗಳಿಗೆ ಆಧುನಿಕ ಕಲಿಕಾ ಪರಿಕರ ಒದಗಿಸುವುದು, ಗ್ರಾಮಗಳಲ್ಲಿನ ಮೂಲಸೌಕರ್ಯ ನಿವಾರಿಸುವುದರಿಂದ ಹಿಡಿದು ವಿವಿಧ ರಂಗಗಳಲ್ಲಿ ಹೂಡಿಕೆ ಮಾಡುವವರೆಗೂ ಎನ್​ಆರ್​ಐಗಳ ಕೊಡುಗೆ ಮಹತ್ವದ್ದು. ಅಮೆರಿಕ ಮತ್ತು ಬ್ರಿಟನ್​ನಲ್ಲಿ ಕನ್ನಡಿಗರ ಸಂಖ್ಯೆ ದೊಡ್ಡಪ್ರಮಾಣದಲ್ಲಿದ್ದು, ಇವರೆಲ್ಲ ತಾಯ್ನಾಡಿನ ಅಭಿವೃದ್ಧಿಗೆ ಶಕ್ತಿಯನುಸಾರ ಪ್ರಯತ್ನ ಮಾಡುತ್ತಿದ್ದಾರೆ. ಲಂಡನ್​ನಲ್ಲಿ ಸ್ಥಾಪಿಸಿರುವ ಬಸವಣ್ಣ ಮೂರ್ತಿ ಕನ್ನಡ ನಾಡಿನ ಸಾಂಸ್ಕೃತಿಕ ಶಕ್ತಿಗೆ ಸಾಕ್ಷಿಯಾಗಿದೆ. ಈ ಮೂಲಕ ಕರ್ನಾಟಕದ ಸಂಸ್ಕೃತಿ ಬ್ರಿಟನ್​ನಲ್ಲಿ ಹರಡುತ್ತಿದೆ.

ಸಮಸ್ಯೆಗಳನ್ನೂ ಪರಿಹರಿಸಲಿ: ಎನ್​ಆರ್​ಐಗಳನ್ನು ಸರ್ಕಾರ ಕೇವಲ ಆರ್ಥಿಕ ಅಭಿವೃದ್ಧಿಯ ವಾಹಕಶಕ್ತಿ ಮತ್ತು ಹೂಡಿಕೆ ಮಾಡುವ ಸಂಪನ್ಮೂಲ ಎಂದು ಪರಿಗಣಿಸಬಾರದು. ಅನಿವಾಸಿ ಭಾರತೀಯರು ಕಷ್ಟದಲ್ಲಿ ಸಿಲುಕಿಕೊಂಡಾಗ ಅವರಿಗೆ ನೆರವು ನೀಡಬೇಕು. ಅಲ್ಲದೆ, ಕೆಲಸದ ಸ್ಥಳದಲ್ಲಿ, ಇತರೆಡೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರಕ್ಕೆ ಎನ್​ಆರ್​ಐಗಳ ಹಣ, ಕೌಶಲ, ಹೂಡಿಕೆ ಬೇಕು. ಅದೇ ರೀತಿ, ಕಷ್ಟದಲ್ಲಿದ್ದಾಗ ಸ್ಪಂದಿಸಬೇಕು. ಭಾರತೀಯ ಸಮುದಾಯ ಬೇರೆ-ಬೇರೆ ದೇಶಗಳಲ್ಲಿ ಹರಡಿಕೊಂಡಿದೆ. ರಾಯಭಾರ ಕಚೇರಿಯಿಂದ ಸ್ಪಂದನೆ ಸಿಗುವುದು ತಾಂತ್ರಿಕ ಕಾರಣದಿಂದ ವಿಳಂಬವಾಗಬಹುದು. ಈ ನಿಟ್ಟಿನಲ್ಲಿ ಪ್ರತಿ ದೇಶದಲ್ಲಿ ಭಾರತ ಸರ್ಕಾರ ಎನ್​ಆರ್​ಐಗಳಿಗಾಗಿ ನೆರವು ಕೇಂದ್ರ (ಡಿಸ್ಟ್ರೆಸ್ ಸೆಂಟರ್) ಆರಂಭಿಸಬೇಕು. ನೆರವು ಕೇಂದ್ರ ಸ್ಥಾಪನೆಯಾದರೆ ಸಮಸ್ಯೆಯನ್ನು ಹೇಳಿಕೊಳ್ಳಲು, ಅಹವಾಲು ಸಲ್ಲಿಸಲು ಸುಲಭವಾಗುತ್ತದೆ. ಎನ್​ಆರ್​ಐ ಎಂಬುದು ಬೀಜ ಇದ್ದ ಹಾಗೆ. ಸರ್ಕಾರ ಇದಕ್ಕೆ ನೀರು ಎರೆದು, ಗೊಬ್ಬರ ಹಾಕಿ ಪೋಷಿಸಿದರೆ ಆ ಸಸಿ ಮರವಾಗಿ ಸಂತೋಷ ಮತ್ತು ಸಮೃದ್ಧಿಯನ್ನು ನೀಡಬಲ್ಲದು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು.

ಇದು ಸರ್ಕಾರದ ಕರ್ತವ್ಯ

  1. ಅನಿವಾಸಿ ಭಾರತೀಯರೆಂದರೆ ಸಿರಿವಂತರು ಎಂಬ ಕಲ್ಪನೆ ಇದೆ. ಆದರೆ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೂಲಿಕಾರ್ವಿುಕರಾಗಿ, ಮನೆಗೆಲಸದವರಾಗಿ ಭಾರತೀಯ ಮೂಲದವರು ಕಾರ್ಯನಿರ್ವಹಿ ಸುತ್ತಿದ್ದಾರೆ. ಎಷ್ಟೋ ಬಾರಿ ಇವರು ಶೋಷಣೆಗೂ ಒಳಪಡುತ್ತಾರೆ. ಇವರ ಅಭಿವೃದ್ಧಿ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.
  2. ಎನ್​ಆರ್​ಐಗಳಲ್ಲಿ ಶೇಕಡ 50ರಷ್ಟು ಸಂಖ್ಯೆ ಮಹಿಳೆಯರದ್ದು. ಆದರೆ, ಕೌಟುಂಬಿಕ ದೌರ್ಜನ್ಯ ನಡೆದಾಗ ಅಥವಾ ಕೆಲಸದ ಸ್ಥಳದಲ್ಲಿ ಸಮಸ್ಯೆ ಅನುಭವಿಸಿದಾಗ ಇವರು ಪರಿಹಾರಕ್ಕಾಗಿ ಎಲ್ಲಿ ಹೋಗಬೇಕು ಎಂಬುದೇ ಗೊತ್ತಿಲ್ಲ. ಈ ಕೊರತೆಯನ್ನು ಸರ್ಕಾರ ನಿವಾರಿಸಿ, ಮಹಿಳೆಯರ ರಕ್ಷಣೆಗೆ ಮುತುವರ್ಜಿ ವಹಿಸಬೇಕು.
  3. ವಿದೇಶದಲ್ಲಿ ನೆಲೆಸಲು ಅಥವಾ ಕೆಲಸ ಪಡೆದುಕೊಳ್ಳಬೇಕೆಂದರೆ ಗುಣಮಟ್ಟದ ಶಿಕ್ಷಣ ಬೇಕು. ಸಂವಹನಕ್ಕಾಗಿ ಇಂಗ್ಲಿಷ್ ಗೊತ್ತಿರಬೇಕು. ಗುಣಮಟ್ಟದ ಶಿಕ್ಷಣ ಭಾರತದಲ್ಲಿ ದೊರೆಯುವಂತಾಗಬೇಕು. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಾರತೀಯ ಮೂಲದ ಎಷ್ಟೋ ಕಾರ್ವಿುಕರನ್ನು ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಿದ ನಿದರ್ಶನಗಳಿವೆ.

ಹೆಚ್ಚಿದ ಭಾರತದ ವರ್ಚಸ್ಸು

ಬೆಂಕಿ ಬಸಣ್ಣಬೆಂಕಿ ಬಸಣ್ಣ, ನ್ಯೂಯಾರ್ಕ್ ಅಮೆರಿಕ
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಕಳೆದ ಹತ್ತು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ ಎಂಬುದು ನಿಸ್ಸಂಶಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಬಗ್ಗೆ ಹೆಮ್ಮೆ ಮತ್ತು ಗೌರವದ ಭಾವನೆ ಮೂಡಿದೆ. ಭಾರತದಲ್ಲಿ ಆಗಿರುವ ಮೂಲಸೌಕರ್ಯ ಅಭಿವೃದ್ಧಿ ಎನ್​ಆರ್​ಐಗಳಿಗೆ ಹೆಮ್ಮೆ ತಂದಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಆದಾಯ ಅಮೆರಿಕನ್ನರಿಗಿಂತ ದ್ವಿಗುಣಗೊಂಡಿರುವುದು, ಭಾರತೀಯರ ಬುದ್ಧಿಶಕ್ತಿ ಹಾಗೂ ಕಾರ್ಯಕ್ಷಮತೆಗೆ ಸಾಕ್ಷಿ.

ಅಮೆರಿಕದಲ್ಲಿ ಅಂದಾಜು 50 ಲಕ್ಷ ಭಾರತೀಯರು ನೆಲೆಸಿದ್ದಾರೆ (ಅಮೆರಿಕ ಜನಸಂಖ್ಯೆಯ ಶೇಕಡ 1.5). 2024ರ ಸೆಪ್ಟೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿದಾಗ ಹೊಸ ಮಂತ್ರವನ್ನು ನೀಡಿದರು, ಅದೇನೆಂದರೆ, ‘ಅಮೆರಿಕದ ಭವಿಷ್ಯ ಎಐಯನ್ನು (ಅಮೆರಿಕನ್ ಇಂಡಿಯನ್ಸ್) ಅವಲಂಬಿಸಿದೆ’ ಎಂದು. ನಿಜಕ್ಕೂ ಅರ್ಥಪೂರ್ಣ ಮಾತು. ಅಮೆರಿಕ ಮತ್ತು ಜಗತ್ತಿನ ಆರ್ಥಿಕತೆಯಲ್ಲಿ ಭಾರತೀಯರ ಪಾತ್ರ ಮಹತ್ವದ್ದು. ಹಾಗಾಗಿಯೇ, ಭಾರತೀಯರನ್ನು ಜಗತ್ತು ಇಂದು ಗೌರವದಿಂದ ಕಾಣುತ್ತಿದೆ. ಅಮೆರಿಕ ಮಾತ್ರವಲ್ಲ ಇತರ ದೇಶಗಳಲ್ಲೂ ಭಾರತೀಯರ ಸಂಖ್ಯೆ ಮತ್ತು ಕೊಡುಗೆ ಹೆಚ್ಚುತ್ತಿದೆ.

ಸಾಹಿತ್ಯಪ್ರೀತಿಯ ಸೊಬಗು…: ದೂರದ ದೇಶದಲ್ಲಿ ನೆಲೆಸಿದ್ದರೂ ಕನ್ನಡದ ಮಹತ್ವವನ್ನು ಮರೆತಿಲ್ಲ. ಬದಲಾಗಿ, ಕನ್ನಡದ ಬಗೆಗಿನ ಪ್ರೀತಿ ಮತ್ತಷ್ಟು ಹೆಚ್ಚಿದೆ. 2024ರ ಡಿಸೆಂಬರ್​ನಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ 250 ಅನಿವಾಸಿ ಭಾರತೀಯರು ಭಾಗವಹಿಸಿದ್ದರು. ಈ ಪೈಕಿ 40-50 ಎನ್​ಆರ್​ಐಗಳಿಗೆ ಅವರ ಕೊಡುಗೆಯನ್ನು ಪರಿಗಣಿಸಿ, ಗೌರವಿಸಿದ್ದು ಒಳ್ಳೆಯ ಬೆಳವಣಿಗೆ. ರಾಜ್ಯ ಸರ್ಕಾರ ಕೂಡ ಇದೇ ಮಾದರಿ ಯನ್ನು ಅನುಸರಿಸಿ ಪ್ರವಾಸಿ ಭಾರತೀಯ ದಿವಸ್​ಕ್ಕೆ ಅನಿವಾಸಿ ಭಾರತೀಯ (ಕನ್ನಡಿಗ) ಸಾಧಕರನ್ನು ಕರೆಸಿ, ಗೌರವಿಸಬೇಕು. ಅಲ್ಲದೆ, ಬೆಂಗಳೂರಿನಲ್ಲಿ ಅಮೆರಿಕದ ನೂತನ ದೂತಾವಾಸ ಆರಂಭಗೊಳ್ಳುತ್ತಿರುವುದು ಸ್ವಾಗತಾರ್ಹ.

ಸಮಸ್ಯೆ ನಿವಾರಿಸಿ

  • ಎನ್​ಆರ್​ಐಗಳು ಕೆಲ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ನಿವಾರಿಸಲು ಸರ್ಕಾರ ಮುಂದಾಗಬೇಕು.
  • ಒಸಿಐ ಕಾರ್ಡ್ ವಿತರಣೆಯ ಪ್ರಕ್ರಿಯೆ ಯಲ್ಲಿನ ವಿಳಂಬವನ್ನು ತಪ್ಪಿಸಬೇಕು.
  • ಹಲವು ದೇಶಗಳು ದ್ವಿಪೌರತ್ವ ಕೊಡುತ್ತಿವೆ. ಭಾರತ ಕೂಡ ಈ ನಿಟ್ಟಿನಲ್ಲಿ ಚಿಂತನೆ ನಡೆಸಿ, ದ್ವಿಪೌರತ್ವ ನೀಡಲು ಕ್ರಮ ಕೈಗೊಳ್ಳಬೇಕು. ಇದರಿಂದ ಅನಿವಾಸಿ ಭಾರತೀಯರಿಗೆ ತುಂಬ ಅನುಕೂಲವಾಗುತ್ತದೆ.
  • ಮತ ಚಲಾಯಿಸಲು ಭಾರತಕ್ಕೇ ಬರುವ ಅನಿವಾರ್ಯತೆ ಇದೆ. ಹಾಗಾಗಿ, ಆನ್​ಲೈನ್ ಮತದಾನಕ್ಕೆ ಅವಕಾಶ ಕೊಡಬೇಕು. ಎನ್​ಆರ್​ಐಗಳ ಆದಾಯ ತೆರಿಗೆ ನಿಯಮಗಳನ್ನು ಸರಳಗೊಳಿಸಲಿ.
  • ಎನ್​ಆರ್​ಐಗಳ ಸಮಸ್ಯೆ ಪರಿಹಾರಕ್ಕೆ ವಿಶೇಷ ಘಟಕ ಸ್ಥಾಪಿಸಬೇಕು, ಎನ್​ಆರ್ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು.

ಮೋದಿ ಅವರಿಂದ ಇಂದು ಉದ್ಘಾಟನೆ: ಹದಿನೆಂಟನೇ ಪ್ರವಾಸಿ ಭಾರತೀಯ ದಿವಸ್​ನ್ನು ಒಡಿಶಾದ ಭುವನೇಶ್ವರದಲ್ಲಿ ಜನವರಿ 8ರಿಂದ 10ರವರೆಗೆ ಆಚರಿಸಲಾಗುತ್ತಿದೆ. ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಸಮಾರಂಭಕ್ಕೆ ಚಾಲನೆ ನೀಡಿ, ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆವರೆಗೆ ವಿವಿಧ ಗೋಷ್ಠಿಗಳು, ಸ್ಪರ್ಧೆಗಳು ನಡೆಯಲಿದ್ದು, ಬಹುಮಾನ ಪ್ರದಾನ ಕಾರ್ಯಕ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.

ಹಿನ್ನೆಲೆ: ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915ರ ಜನವರಿ 9ರಂದು ವಾಪಸಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು. ಈ ದಿನದ ನೆನಪಿಗಾಗಿ ಜ. 9ನ್ನು ಪ್ರವಾಸಿ ಭಾರತೀಯ ದಿನವಾಗಿ ಘೋಷಣೆ ಮಾಡಲಾಯಿತು. 2003ರಿಂದ ಈ ದಿನ ಆಚರಿಸಲಾಗುತ್ತಿದೆ. ಪ್ರತಿ ವರ್ಷ ನಡೆಯುತ್ತಿದ್ದ ಆಚರಣೆ ಈಗ ಕೆಲ ವರ್ಷದಿಂದ ದ್ವೈವಾರ್ಷಿಕ ಸಮ್ಮೇಳನವಾಗಿ ರೂಪುಗೊಂಡಿದೆ.

ವರ್ಷದ ಥೀಮ್

  • ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಅನಿವಾಸಿ ಭಾರತೀಯರ ಕೊಡುಗೆ.
  • ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ 1.8 ಕೋಟಿ (18 ಮಿಲಿಯನ್) 2022ರ ವರದಿ ಪ್ರಕಾರ.
  • ಈವರೆಗೆ ಭಾರತದ ವಿವಿಧ ನಗರಗಳಲ್ಲಿ ಅನಿವಾಸಿ ಭಾರತೀಯರ 17 ಸಮ್ಮೇಳನಗಳು ನಡೆದಿವೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತಕ್ಕೆ ಹೇರಳ ಅವಕಾಶಗಳಿವೆ. ಯುವ ಅನಿವಾಸಿ ಭಾರತೀಯರು ತಮ್ಮ ಮಿತ್ರರನ್ನು ಭಾರತದ ವಿಶಿಷ್ಟ ಸಂಸ್ಕೃತಿ, ಭವ್ಯ ಪರಂಪರೆ ಪರಿಚಯ ಮಾಡಿಸಲು ಇಲ್ಲಿ ಕರೆತರಬೇಕು. ಕಳೆದ 10 ವರ್ಷಗಳಲ್ಲಿ ಭಾರತ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಿದೆ. ಮೂಲ ಸೌಕರ್ಯದಿಂದ ಹಿಡಿದು ಕೋವಿಡ್ ಲಸಿಕೆವರೆಗಿನ ಭಾರತದ ಸಾಧನೆಗೆ ಜಗತ್ತು ಅಚ್ಚರಿಗೊಂಡಿದೆ.

| ಎಸ್.ಜೈಶಂಕರ್ ವಿದೇಶಾಂಗ ಸಚಿವ (ಬುಧವಾರ ಭುವನೇಶ್ವರದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಸಮಾರಂಭದಲ್ಲಿ)

ಹೈಬ್ರಿಡ್​ ಹೆಸರಿನಲ್ಲಿ ಭಾರತ ಹೆಚ್ಚು ಲಾಭ ಪಡೆಯುತ್ತಿದೆ; Champions Trophy ಶುರುವಾಗುವ ಹೊಸ್ತಿಲಲ್ಲೇ ಟೀಮ್​ ಇಂಡಿಯಾ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ಕ್ರಿಕೆಟಿಗ

Google Map ​ಅವಾಂತರ; ಪೊಲೀಸರನ್ನೇ ಬಂಡುಕೋರರೆಂದು ತಿಳಿದು ಒತ್ತೆಯಾಳಾಗಿ ಇರಿಸಿಕೊಂಡ ಸ್ಥಳೀಯರು

 

Share This Article

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…