
ರಟ್ಟಿಹಳ್ಳಿ: ಕೇಂದ್ರ ಸರ್ಕಾರ ನರೇಗಾ ಕಾರ್ವಿುಕರಿಗೆ ಸಿಹಿ ಸುದ್ದಿ ನೀಡಿದ್ದು, ನರೇಗಾ ಕೆಲಸದ ದಿನದ ಕೂಲಿ ಹಣವನ್ನು 349 ರೂ.ಗಳಿಂದ 370 ರೂಪಾಯಿ ಹೆಚ್ಚಿಸಿ ಆದೇಶ ನೀಡಿದೆ ಎಂದು ರಟ್ಟಿಹಳ್ಳಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ಬೊಬ್ಬಣ್ಣನವರ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಏ. 1ರಿಂದ ದೈನಂದಿನ 349 ರೂ.ಗಳಿಂದ 370 ರೂ.ಗಳಿಗೆ ಅಂದರೆ 21 ರೂಪಾಯಿ ಹೆಚ್ಚಿಸಿದೆ. ತಾಲೂಕಿನ 19 ಗ್ರಾಮ ಪಂಚಾಯಿತಿಗಳಲ್ಲಿ ನಿರಂತರವಾಗಿ 100 ದಿನದ ಕೆಲಸ ನೀಡಲು ಕ್ರಮವಹಿಸಲಾಗಿದೆ. ಕೆರೆ, ನೀರುಗಾಲುವೆ, ಹಳ್ಳ ಅಭಿವೃದ್ಧಿ ಸೇರಿ ಹಲವು ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಗುರುತಿಸಿಕೊಂಡು ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ. ಅಲ್ಲದೆ ವೈಯಕ್ತಿಕ ಕಾಮಗಾರಿಗಳಾದ ಕೃಷಿಹೊಂಡ, ಬದುವು ನಿರ್ವಣ, ದನದ ಕೊಟ್ಟಿಗೆ, ಎರೆಹುಳು ತೊಟ್ಟಿ ಸೇರಿ ವಿವಿಧ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಲಸೆ ಹೋಗದೆ, ಗ್ರಾಮದಲ್ಲಿದ್ದುಕೊಂಡೆ ಕೆಲಸ ಮಾಡಬೇಕು. ನರೇಗಾ ಕೆಲಸದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕಾರ್ವಿುಕರು ಕೆಲಸದ ಜತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ನರೇಗಾ ಕಾಮಗಾರಿ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ನೆರಳು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲು ಗ್ರಾಪಂಗಳು ಕ್ರಮವಹಿಸಿವೆ ಎಂದು ಮಾಹಿತಿ ನೀಡಿದ್ದಾರೆ.