ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳ ಕೂಲಿ ಹಣ ೆಬ್ರವರಿಯಿಂದ 1.79 ಕೋಟಿ ರೂ. ಬಾಕಿ ಉಳಿದುಕೊಂಡಿದ್ದು, ಕೂಲಿಕಾರರು ಪರದಾಡುವಂತಾಗಿದೆ.
ತಾಲೂಕಿನ 21 ಗ್ರಾಮ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 24497 ಕುಟುಂಬಗಳು ನೋಂದಾಯಿಸಿಕೊಂಡಿವೆ. ಸುಮಾರು 60287 ಕೂಲಿಕಾರರು ಕೆಲಸದಲ್ಲಿ ತೊಡಗಿದ್ದಾರೆ. ಇವರಲ್ಲಿ 100 ದಿನ ಪೂರ್ಣಗೊಳಿಸಿ ಕೆಲಸ ಸಿಗುತ್ತಿಲ್ಲವೆಂದು ಪರದಾಡುತ್ತಿದ್ದರೆ, ಕೆಲವೊಂದಿಷ್ಟು ಕಾರ್ಮಿಕರು ಕೂಲಿ ಹಣ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ.
ಯಾವ ಗ್ರಾಪಂನಲ್ಲಿ ಎಷ್ಟೆಷ್ಟು ಬಾಕಿ?: ಬನ್ನಿಹಟ್ಟಿ ಗ್ರಾಪಂ 6.48 ಲಕ್ಷ ರೂ., ಬಿಸಲಹಳ್ಳಿ 8.36 ಲಕ್ಷ ರೂ., ಬುಡಪನಹಳ್ಳಿ 87 ಸಾವಿರ ರೂ., ಚಿಕ್ಕಬಾಸೂರು 10.64 ಲಕ್ಷ ರೂ., ಘಾಳಪೂಜಿ 6.27 ಲಕ್ಷ ರೂ., ಗುಂಡೇನಹಳ್ಳಿ 6.84 ಲಕ್ಷ ರೂ., ಹೆಡಿಗ್ಗೊಂಡ 63 ಸಾವಿರ ರೂ., ಹಿರೇಹಳ್ಳಿ 22.53 ಲಕ್ಷ ರೂ., ಹಿರೇಅಣಜಿ 9.27 ಲಕ್ಷ ರೂ., ಕದರಮಂಡಲಗಿ 2.30 ಲಕ್ಷ ರೂ., ಕಾಗಿನೆಲೆ 13.15 ಲಕ್ಷ ರೂ., ಕಲ್ಲೇದೇವರು 7.39 ಲಕ್ಷ ರೂ., ಕೆರವಡಿ 24.96 ಲಕ್ಷ ರೂ., ಕುಮ್ಮೂರು 10.92 ಲಕ್ಷ ರೂ., ಮಲ್ಲೂರ 11.28 ಲಕ್ಷ ರೂ., ಮಾಸಣಗಿ 12.41 ಲಕ್ಷ ರೂ., ಮುತ್ತೂರು 6 ಲಕ್ಷ ರೂ., ಮೋಟೆಬೆನ್ನೂರು 6 ಲಕ್ಷ ರೂ., ಶಿಡೇನೂರು 4.82 ಲಕ್ಷ ರೂ., ಸೂಡಂಬಿ 1 ಲಕ್ಷ ರೂ., ತಡಸ 10.96 ಲಕ್ಷ ರೂ. ಬಾಕಿ ಉಳಿದುಕೊಂಡಿದೆ.
ತಾಲೂಕಿನ ಹಿರೇಹಳ್ಳಿಯಲ್ಲಿ ಅತಿಹೆಚ್ಚು ಕೂಲಿ ಹಣ ಬಾಕಿ ಉಳಿದಿದೆ. ಘಾಳಪೂಜಿ, ಚಿಕ್ಕಬಾಸೂರು, ಹಿರೇಅಣಜಿ, ಬಿಸಲಹಳ್ಳಿ, ಕದರಮಂಡಲಗಿ ಸೇರಿದಂತೆ ವಿವಿಧ ಪಂಚಾಯಿತಿಗಳಲ್ಲಿ 4 ರಿಂದ 8 ಲಕ್ಷ ರೂ.ವರೆಗೆ ಬಾಕಿ ಉಳಿದುಕೊಂಡಿದೆ. ಜಿಪಿಎಸ್ ೆಟೋ, ಎನ್‌ಎಂಆರ್ ಅಪ್‌ಲೋಡ್ ಮಾಡಿದ್ದೇವೆ. ಇದನ್ನು ಬಿಟ್ಟು ನಮಗೇನು ಮಾಡಲು ಸಾಧ್ಯವಿಲ್ಲ ಎಂದು ಗ್ರಾಪಂ ಅಧಿಕಾರಿಗಳು ಹೇಳುತ್ತಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ಬಂದರೂ ಪ್ರಯೋಜನವಾಗಿಲ್ಲ.
ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಲಿಕಾರರು ಕೂಲಿ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಬಹುತೇಕರು ಪಕ್ಕದ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಿಗೆ ಗುಳೆ ಹೋಗಲು ಸಿದ್ಧರಾಗಿದ್ದಾರೆ.
ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರ 1.79 ಕೋಟಿ ರೂ. ಹಣ ಬಾಕಿ ಉಳಿದಿದೆ. ತಾಂತ್ರಿಕ ಪ್ರಕ್ರಿಯೆ ಮುಗಿದಿದೆ. ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ವಾರದಲ್ಲಿ ಕೂಲಿಕಾರರ ಖಾತೆಗೆ ಹಣ ಜಮೆಯಾಗುವ ಸಾಧ್ಯತೆಯಿದೆ.
ಕೆ.ಎಂ. ಮಲ್ಲಿಕಾರ್ಜುನ, ತಾಪಂ ಇಒ ಬ್ಯಾಡಗಿ
ನರೇಗಾ ಕೂಲಿ ಹಣ ಬಾರದೆ ತೀವ್ರ ಸಮಸ್ಯೆಯಾಗಿ ಜನ ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದು, ಕೂಲಿ ಹಣಕ್ಕೆ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಬ್ಯಾಡಗಿ ತಾಪಂ ಇಒ ಹಾಗೂ ಹಾವೇರಿ ಸಿಇಒ ಕಚೇರಿಗೆ ಮನವಿ ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ.
ರಾಜು ಆಲದಹಳ್ಳಿ, ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಮುಖ್ಯಸ್ಥ