ಹುಣಸೂರು: ಗ್ರಾಮೀಣ ಭಾಗದ ಅಭಿವೃದ್ಧಿಗೆ ನರೇಗಾ ಅತ್ಯುತ್ತಮ ಯೋಜನೆಯಾಗಿದ್ದು, ಗ್ರಾಮೀಣ ಜನರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಐಸಿಇ ಸಂಯೋಜಕಿ ಪುಷ್ಪಾವತಿ ತಿಳಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಗ್ರಾಮಸಭೆ, ಆಟೋಟ ಸ್ಪರ್ಧೆ ಮತ್ತು ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಸಲುವಾಗಿಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ನರೇಗಾ ಯೋಜನೆಯಡಿ ಸಮುದಾಯದ ಅಭಿವೃದ್ಧಿಯೊಂದಿಗೆ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಕುಟುಂಬದ ದಿನನಿತ್ಯದ ನಿರ್ವಹಣೆ ಜವಾಬ್ದಾರಿಯನ್ನು ಮಹಿಳೆಯರು ವಹಿಸಿಕೊಂಡಿರುತ್ತಾರೆ. ತಮ್ಮ ಕುಟುಂಬಕ್ಕೆ ಅನುಕೂಲ ಆಗುವಂತಹ ವೈಯಕ್ತಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನರೇಗಾ ಯೋಜನೆ ಅವಕಾಶ ಕಲ್ಪಿಸುತ್ತದೆ. ನಿಮ್ಮ ದುಡಿಮೆಗೆ ತಕ್ಕ ಕೂಲಿಯನ್ನು ನೀಡುವುದಲ್ಲದೇ ಕಾಮಗಾರಿಯ ವೆಚ್ಚವನ್ನು ಭರಿಸುವತ್ತ ಸಹಾಯಹಸ್ತ ಚಾಚುತ್ತದೆ ಎಂದರು.
ಅಲ್ಲದೆ ಪಂಚತಂತ್ರ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಉಚಿತ ಸಹಾಯವಾಣಿ 8277506000 ಸಂಖ್ಯೆಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಕಿರಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನರಸಿಂಹ ಮೂರ್ತಿ ಮಾತನಾಡಿ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮತ್ತು ಸವಾಲುಗಳು ಹೆಚ್ಚಾಗಿದ್ದು, ಪ್ರತಿಯೊಂದನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಮನೆಯ ನಾಲ್ಕು ಗೋಡೆಗಳಿಗಷ್ಟೇ ಸೀಮಿತವಾಗಿರದೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ತನ್ನ ಪ್ರಾಬಲ್ಯತೆ ಪಡೆದುಕೊಂಡಿದ್ದಾಳೆ. ಗ್ರಾಮೀಣ ಭಾಗಗಳಲ್ಲಿಯೇ ಒಂದು ಸುತ್ತು ಹಾಕಿದರೆ ಶಿಕ್ಷಣ, ರಾಜಕೀಯ, ಸಂಘ ಸಂಸ್ಥೆ, ಮಕ್ಕಳ ಆರೈಕೆ, ಆರೋಗ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಹಿಂಜರಿಕೆಯನ್ನು ಮೆಟ್ಟಿ ನಿಲ್ಲುವ ಮೂಲಕ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಭವ್ಯಾ ಅವರ ನೇತೃತ್ವದಲ್ಲಿ ಲೆಮನ್ ಸ್ಪೂನ್, ಮ್ಯೂಸಿಕಲ್ ಛೇರ್, ರಂಗೋಲಿ ಸ್ಪರ್ಧೆ ಹಾಗೂ ಮಹಿಳೆಯರ ಫ್ಯಾಷನ್ ಷೋ ಸ್ಪರ್ಧೆ ನಡೆಸಲಾಯಿತು. ಕಾರ್ಯದರ್ಶಿ ಸ್ವಾಮಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.