ರಕ್ತ ಕೊಟ್ಟೇವು, ಪಿಂಚಣಿ ಬಿಡೆವು

ಚಿಕ್ಕಮಗಳೂರು: ನಿಶ್ಚಿತ ಪಿಂಚಣಿ ಯೋಜನೆ ರದ್ದುಗೊಳಿಸಿ ಎನ್​ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಜಾರಿಗೆ ತಂದಿರುವುದರಿಂದ ಸರ್ಕಾರಿ ನೌಕರರಿಗೆ ನಷ್ಟವಾಗಿದೆ. ರಕ್ತದಾನದಂಥ ಹೋರಾಟದಿಂದ ಸರ್ಕಾರದ ಕಣ್ಣು ತೆರೆಸಬಹುದು ಎಂದು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ದೊಡ್ಡಮಲ್ಲಪ್ಪ ಅಭಿಪ್ರಾಯಪಟ್ಟರು.

ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕಮಗಳೂರು, ಕಡೂರು ತಾಲೂಕು ಘಟಕದಿಂದ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ‘ರಕ್ತ ಕೊಟ್ಟೇವು, ಪಿಂಚಣಿ ಬಿಡೆವು’ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನಿವೃತ್ತಿಯಾದ ನಂತರ ಪಿಂಚಣಿ ದೊರೆಯುತ್ತಿದ್ದ ಕೆಲಸವೆಂದರೆ ಸರ್ಕಾರಿ ವೃತ್ತಿ. ನಿವೃತ್ತಿ ನಂತರದ ಬದುಕಿಗೆ ಭದ್ರತೆ ಇರುತ್ತದೆ. ಆಕಸ್ಮಿಕವಾಗಿ ಮರಣ ಹೊಂದಿದರೆ ಕುಟುಂಬದವರಿಗೆ ಕೆಲಸ ಸಿಗುತ್ತದೆ. ಈ ಕಾರಣಕ್ಕೆ ಹಲವರು ಸರ್ಕಾರಿ ನೌಕರಿಗೆ ಸೇರಲು ಇಷ್ಟಪಡುತ್ತಾರೆ. ಪಿಂಚಣಿಯೇ ಇಲ್ಲವಾದರೆ ನಿವೃತ್ತರ ಬದುಕು ಕಷ್ಟವಾಗುತ್ತದೆ ಎಂದರು.

ತಾಲೂಕು ಅಧ್ಯಕ್ಷ ಮಂಜುನಾಥ ಮಾತನಾಡಿ, ಜನವರಿಯಲ್ಲಿ ಫ್ರೀಡಂ ಪಾರ್ಕ್​ನಲ್ಲಿ ನಡೆಸಿದ ಬೃಹತ್ ಹೋರಾಟದ ಫಲವಾಗಿ ಸರ್ಕಾರ 6ನೇ ವೇತನ ಆಯೋಗದಲ್ಲಿ ಡಿಸಿಆರ್​ಜಿ ಯೋಜನೆ ಜಾರಿಗೆ ತಂದಿದೆ. ಹಾಗೆಯೇ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನೇ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯಕರಿಣಿ ಸದಸ್ಯ ವೇಣುಗೋಪಾಲ್ ಮಾತನಾಡಿ, ಜಿಲ್ಲೆಯ ಎಲ್ಲ ಎನ್​ಪಿಎಸ್ ನೌಕರರು ಸ್ವಇಚ್ಛೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ನೋವನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಎನ್​ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಚೇತನ್ ಎಂ.ಆರ್., ರಕ್ತದಾನ ಕೇಂದ್ರದ ಮುಖ್ಯಸ್ಥ ಡಾ. ಮುರಳೀಧರ್, ಪರಮೇಶ್, ಚಿರಂಜೀವಿ, ರೂಪಾ ಇದ್ದರು.

ಪಿಂಚಣಿ ಯೋಜನೆ ಸುದೀರ್ಘ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ನಿವೃತ್ತ ಜೀವನದಲ್ಲಿ ನೆರವಾಗುತ್ತದೆ. ಹೊಸ ಪಿಂಚಣಿ ಯೋಜನೆಯಿಂದ ಯುವಕರು ಸರ್ಕಾರಿ ಕೆಲಸಕ್ಕೆ ಏಕೆ ಹೋಗಬೇಕು ಎಂದು ಹಿಂದೇಟು ಹಾಕುವ ಕಾಲ ಬಂದಿದೆ.

| ಮಂಜುನಾಥ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ