ಎನ್​ಪಿಎಸ್​ ರದ್ದತಿಗಾಗಿ ಸುವರ್ಣಸೌಧದ ಹೊರಗೆ ಪ್ರತಿಭಟನೆ: ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ಧತೆ

ಬೆಳಗಾವಿ: ಚಳಿಗಾಲ ಅಧಿವೇಶನದ ಒಳಗೂ ರಾಷ್ಟ್ರೀಯ ಪಿಂಚಣಿ ಯೋಜನೆಯ ಸದ್ದು ಜೋರಾಗಿ ಕೇಳಿಬರುತ್ತಿದ್ದು, ಎನ್​ಪಿಎಸ್​ ಅನ್ನು ರದ್ದುಪಡಿಸುವಂತೆ ಸುವರ್ಣಸೌಧದ ಹೊರಗೆ ಸರ್ಕಾರಿ ನೌಕರರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಚಿವ ಡಿ.ಕೆ.ಶಿವಕುಮಾರ್​ ಅವರು ಎನ್​ಪಿಎಸ್​ ಹಿಂಪಡೆಯಲು ನಮಗೆ ಯಾವುದೇ ಅಧಿಕಾರವಿಲ್ಲ. ನೀವು ಕಷ್ಟಪಟ್ಟು ಇಲ್ಲಿಗೆ ಬಂದಿದ್ದೀರಿ ಅಂತ ನಾನು ಬಂದಿದ್ದೇನೆ. ನಿಮ್ಮ ಪ್ರತಿಭಟನೆಯನ್ನು ಕೈಬಿಡಿ ಎಂದು ಮನವಿ ಮಾಡಿದರು. ಇದಕ್ಕೆ ಸೊಪ್ಪುಹಾಕದೆ ಧರಣಿನಿರತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಕಾಂಗ್ರೆಸ್​ ಸದಸ್ಯ ಘೋಟ್ನೇಕರ್ ಅವರು ಸದನದ ಒಳೆಗೆ ಎನ್​ಪಿಎಸ್​ ಹೋರಾಟ ವಿಚಾರವನ್ನು ಪ್ರಸ್ತಾಪಿಸಿ, ಎನ್​ಪಿಎಸ್​ ನೌಕರರಿಗೆ ನ್ಯಾಯ ಒದಗಿಸಿಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ಹಾಗೂ ಜೆಡಿಎಸ್ ಸದಸ್ಯ ಪುಟ್ಟಣ್ಣ ಅವರು ಕೂಡು ಧ್ವನಿಗೂಡಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ತೆರಳಿ ಮನವಿ ಆಲಿಸಿ
ಎನ್​ಪಿಎಸ್ ರದ್ದುಗೊಳಿಸುವಂತೆ ಸರ್ಕಾರಿ ನೌಕರರು ಪ್ರತಿಭಟನೆ ಮಾಡುತ್ತಿದ್ದು, ಕೂಡಲೇ ಪ್ರತಿಭಟನಾ ಸ್ಥಳಕ್ಕೆ ತೆರಳಿ ಅವರ ಮನವಿ ಆಲಿಸಬೇಕೆಂದು ಸಿಎಂ ಕುಮಾರಸ್ವಾಮಿ ಅವರಿಗೆ ಬಿ.ಎಸ್​.ಯಡಿಯೂರಪ್ಪ ಮನವಿ ಮಾಡಿದರು. ದೇವೇಗೌಡರು ಸಹ ನಮ್ಮ ಸರ್ಕಾರ ಬಂದರೆ ಎನ್​ಪಿಎಸ್ ರದ್ದುಗೊಳಿಸಿ ಹಿಂದಿನ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು ಎಂದು ಬಿಎಸ್​ವೈ ತಿಳಿಸಿದರು.

ಸಮಿತಿ ವರದಿ ನೀಡಿದ ಬಳಿಕ ಸೂಕ್ತ ನಿರ್ಧಾರ
ಎನ್​ಪಿಎಸ್ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸಿದ್ದು, ಈ ಬಗ್ಗೆ ಸಮಿತಿ ವರದಿ ನೀಡಿದ ಬಳಿಕ ಸೂಕ್ತ ನಿರ್ಧಾರ ಮಾಡುತ್ತೇವೆ. 2004 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಯೋಜನೆ ಇದು. ಒಂದೆರಡು ರಾಜ್ಯ ಬಿಟ್ಟು ಎಲ್ಲ ರಾಜ್ಯಗಳಲ್ಲೂ ಜಾರಿಗೆ ತಂದಿದ್ದಾರೆ. ಇದರ ಸಾಧಕ ಬಾಧಕ ತಿಳಿಸುವಂತೆ ಸಮಿತಿಗೆ ಸೂಚಿಸಿದ್ದೇನೆ. ವರದಿ ನೀಡಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ಧತೆ
ಎನ್​ಪಿಎಸ್​ ಜಾರಿ ವಿರೋಧಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಚರ್ಚೆ ಮಾಡಿದ್ದರು. ಈ ವೇಳೆ ಸಿಎಂ ಕುಮಾರಸ್ವಾಮಿ ಅವರೇ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರು. ಆದರೆ, ಸಚಿವ ಕೃಷ್ಣಬೈರೇಗೌಡ ಹಳೇ ಪಿಂಚಣಿ ಯೋಜನೆ ಜಾರಿ ಕಷ್ಟ ಎಂದಿದ್ದರು. ಆದರೆ, ಸದನದ ಹೊರಗೆ ಎನ್​ಪಿಎಸ್​ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿದ್ದಾಗಿ ಸಿಎಂ ಪ್ರಕಟಣೆ ಹೊರಡಿಸಿದ್ದರು. ಸದನ ನಡೆಯುವಾಗ ಹೊರಗಡೆ ಯಾವುದೇ ಆದೇಶ ಮಾಡುವಂತಿಲ್ಲ. ಇದು ಸದನದ ಹಕ್ಕುಚ್ಯುತಿ ಆಗಲಿದೆ ಎಂದು ಬಿಜೆಪಿ ವಾದಿಸುತ್ತಿದ್ದು, ಈ ಕಾರಣಕ್ಕಾಗಿ ಸಿಎಂ ಕುಮಾರಸ್ವಾಮಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಮುಂದಾಗಿದೆ. ನಾಳೆ ಪರಿಷತ್ ನಲ್ಲಿ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)