ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ಬೃಹತ್ ಧರಣಿ

ಬೆಳಗಾವಿ: ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಗೊಳಿಸಿ, ನಿಶ್ಚಿತ ಪಿಂಚಣಿ ಯೋಜನೆ (ಒಪಿಎಸ್) ಮರುಸ್ಥಾಪಿಸುವಂತೆ ಒತ್ತಾಯಿಸಿ ಕೊಂಡಸಕೊಪ್ಪದ ಪ್ರತಿಭಟನಾ ವೇದಿಕೆಯಲ್ಲಿ ಬುಧವಾರ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳು ಬೃಹತ್ ಧರಣಿ ನಡೆಸಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ದೆಹಲಿ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಲು ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿದೆ. ಹಾಗಾಗಿ, ಕರ್ನಾಟಕದಲ್ಲಿ 2006ರ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಎನ್‌ಪಿಎಸ್ ರದ್ದುಗೊಳಿಸಬೇಕು. ಈ ಅವಧಿಯಲ್ಲಿ ಮರಣ ಹೊಂದಿರುವ ನೌಕರರ ಅವಲಂಬಿತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಹಿರೇಬಾಗೇವಾಡಿಯಿಂದ ಕೊಂಡಸಕೊಪ್ಪದ ವರೆಗೆ ಕಾಲ್ನಡಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಬುಧವಾರ ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನಾ ಸ್ಥಳಕ್ಕೆ ಬಂದು ಜಮಾಯಿಸಿದರು. ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ, ಪ್ರಧಾನಕಾರ್ಯದರ್ಶಿ ನಾಗನಗೌಡ ಎಂ.ಎ., ಉಪಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಣನವರ, ಚಂದ್ರಕಾಂತ ತಳವಾರ, ಶಾರದಾ ನಾಗೇಶ ಮತ್ತಿತರರು ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವು ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಬಿ.ಎಸ್. ಯಡಿಯೂರಪ್ಪ ಭೇಟಿ: ಎನ್‌ಪಿಎಸ್ ನೌಕರರ ಪ್ರತಿಭಟನಾ ಸ್ಥಳಕ್ಕೆ ಬಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, 2006ರ ನಂತರದ ಸರ್ಕಾರಿ ನೌಕರರಿಗೆ ಯಾವುದೆ ಪಿಂಚಣಿ ನೀಡುವುದಿಲ್ಲ ಎಂದು ಕೈಗೊಂಡಿರುವ ತೀರ್ಮಾನವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಈ ಹಿಂದೆ ನಿವೃತ್ತಿ ಹೊಂದಿದಾಗ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಎಲ್ಲ ಸೌಲಭ್ಯಗಳು ಈಗಿನವರಿಗೂ ಸಿಗಬೇಕು. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ. ಸರ್ಕಾರಿ ನೌಕರರ ಸಮಸ್ಯೆ ಆಲಿಸಿ, ತಕ್ಷಣ ಪರಿಹರಿಸುವಂತೆ ಸಿಎಂ ಮೇಲೆ ಒತ್ತಡ ಹೇರುತ್ತೇನೆ. ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಲು ಸೂಚಿಸುತ್ತೇನೆ. ನಿಮ್ಮ ಪರವಾಗಿ ಬಿಜೆಪಿಯ 104 ಶಾಸಕರು ಇದ್ದೇವೆ ಎಂದರು. ಮುಧೋಳ ಶಾಸಕ ಗೋವಿಂದ ಕಾರಜೋಳ, ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದ್ದರು.

ಡಿಕೆಶಿ ಸಂಧಾನ ವಿಫಲ: ಎನ್‌ಪಿಎಸ್ ನೌಕರರ ಸಮಸ್ಯೆ ಆಲಿಸುವ ಜತೆಗೆ, ಪ್ರತಿಭಟನೆಗೆ ಅಂತ್ಯ ಹಾಡುವ ಸಲುವಾಗಿ ಬಂದಿದ್ದ ಸಚಿವ ಡಿ.ಕೆ.ಶಿವಕುಮಾರ ಮಾತಿಗೆ ಪ್ರತಿಭಟನಾಕಾರರು ಸೊಪ್ಪು ಹಾಕಲಿಲ್ಲ. ಎಷ್ಟೆ ಮನವೊಲಿಕೆ ಮಾಡಿದರೂ ನೌಕರರು ಒಪ್ಪಲಿಲ್ಲ.
ಎನ್‌ಪಿಎಸ್ ಹಿಂಪಡೆಯುವ ಅಧಿಕಾರ ನಮಗಿಲ್ಲ. ಏನೋ ಕಷ್ಟಪಟ್ಟು ಬಂದಿದ್ದೀರಿ ಎಂದು ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದೆ ಎಂದು ಡಿಕೆಶಿ ಪ್ರತಿಭಟನಾಕಾರರಿಗೆ ತಿಳಿಸಿದರು. ಆಗ ಪ್ರತಿಭಟನಾಕಾರರು, ಸಿಎಂ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಿಎಂ ಸದನದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿಗೆ ಬಂದು ಸಮಸ್ಯೆ ಆಲಿಸುವುದು ಕಷ್ಟ. ಹಾಗಾಗಿ, ಸಂಘದ 10 ಮುಖಂಡರನ್ನು ಸುವರ್ಣ ವಿಧಾನಸೌಧಕ್ಕೆ ಕರೆದೊಯ್ಯುತ್ತೇನೆ. ಅಲ್ಲಿ ಸಿಎಂ ಮತ್ತು ಹಣಕಾಸು ಇಲಾಖೆ ಜತೆ ಚರ್ಚಿಸಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಸ್ವಲ್ಪ ಸಮಯ ಬೇಕು

ಎನ್‌ಪಿಎಸ್ ರದ್ದುಗೊಳಿಸಲು ಸರ್ಕಾರ ಒಪ್ಪಿಕೊಂಡಿದೆ. ಆದರೆ, ಅದು ಜಾರಿಗೆ ಬರಲು ಒಂದಿಷ್ಟು ಸಮಯ ಬೇಕು. ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು. ಹಾಗಾಗಿ, ತಾತ್ಕಾಲಿಕವಾಗಿ ಧರಣಿ ಹಿಂಪಡೆಯುವಂತೆ ಜೆಡಿಎಸ್ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕೋರಿದರು.

ಹೋರಾಟ ತಾತ್ಕಾಲಿಕ ಹಿಂದಕ್ಕೆ

ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದೊಂದಿಗೆ ಮಾತುಕತೆ ನಡೆಸಿದ್ದು, ತಮ್ಮ ಸಮಸ್ಯೆಯನ್ನು 2 ತಿಂಗಳೊಳಗಾಗಿ ಈಡೇರಿಸುವ ಆಶ್ವಾಸನೆ ನೀಡಿರುವ ಕಾರಣ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ. ಸಿಎಂ ನಮ್ಮ ಸಮಸ್ಯೆ ಇತ್ಯರ್ಥಕ್ಕೆ 3 ತಿಂಗಳ ಕಾಲಾವಕಾಶ ಕೇಳಿದ್ದರು. ನಾವು 2 ತಿಂಗಳ ಅವಧಿಗೆ ಒತ್ತಾಯಿಸಿದ್ದು, ಅವರು ಒಪ್ಪಿಕೊಂಡಿದ್ದಾರೆ. ಎನ್‌ಪಿಎಸ್ ಸಮಿತಿ ರಚನೆ ವಿಚಾರವಾಗಿ ಚಿಂತಿಸದಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯುತ್ತಿರುವುದಾಗಿ ಮುಖಂಡರು ತಿಳಿಸಿದರು.

ಸಂಕಷ್ಟಗಳ ಸರಮಾಲೆ: ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೌಕರರು, ಹಿರೇಬಾಗೇವಾಡಿ ಬಳಿ ಸಮಾವೇಶಗೊಂಡರು. ಅಲ್ಲಿಂದ ಪಾದಯಾತ್ರೆಯೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಬರಲು ಮುಂದಾದಾಗ, ಪೊಲೀಸ್ ಇಲಾಖೆ ಅಡ್ಡಗಾಲು ಹಾಕಿತು. ಪೊಲೀಸ್ ವಾಹನದಲ್ಲೆ ಬರುವಂತೆ ಪಟ್ಟು ಹಿಡಿದಾಗ, ಪರಸ್ಪರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಕೆಲವರು ವಾಹನದಲ್ಲೆ ಪ್ರತಿಭಟನಾ ಸ್ಥಳಕ್ಕೆ ಬಂದರೆ, ಇನ್ನೂ ಕೆಲವರು ಕಾಲ್ನಡಿಗೆಯಲ್ಲೆ 8 ಕಿಮೀ ದೂರ ಕ್ರಮಿಸಿ ಸ್ಥಳಕ್ಕೆ ಬಂದರು. ಆದರೆ, ಪ್ರತಿಭಟನಾ ಸ್ಥಳದಲ್ಲಿ ಅನ್ನ-ಕುಡಿವ ನೀರು ಸಿಗದೆ ಹೈರಾಣಾದರು.