More

    ಎನ್​ಪಿಆರ್​ಗೆ ದಾಖಲೆ ಬೇಡ

    ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್​ಪಿಆರ್) ಯಾವುದೇ ದಾಖಲೆ ಅಥವಾ ಬೆರಳಚ್ಚು ನೀಡುವ ಅಗತ್ಯ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ (ಡಿಎಲ್), ಇಲ್ಲವೆ ಪಾಸ್​ಪೋರ್ಟ್ ಹೊಂದಿರುವವರು ಅದರ ಮಾಹಿತಿ ನೀಡುವುದು ಕಡ್ಡಾಯ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

    ಆಧಾರ್, ಮತದಾರರ ಗುರುತಿನ ಚೀಟಿ, ಡಿಎಲ್, ಪಾಸ್​ಪೋರ್ಟ್ ಈ ರೀತಿಯ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹೊಂದಿದ್ದರೂ ಈ ಬಗ್ಗೆ ಮಾಹಿತಿ ನೀಡಬೇಕು. ಆದರೆ, ಅವುಗಳನ್ನು ಗಣತಿದಾರರಿಗೆ ತೋರಿಸುವುದು ಕಡ್ಡಾಯವಲ್ಲ. ಈ ರೀತಿಯ ಗುರುತಿನ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ಎನ್​ಪಿಆರ್ ಅರ್ಜಿಯಲ್ಲಿ ‘ಇಂಥ ದಾಖಲೆ ಹೊಂದುವುದಾಗಿ’ ನಮೂದಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

    ಕಳೆದ ವರ್ಷ ನಡೆದ ಜನಗಣತಿ ತಾಲೀಮಿನಲ್ಲಿ ಶೇ. 80 ಜನರು ಆಧಾರ್ ಕಾರ್ಡ್ ಇದೆಯೇ ಎಂಬ ಕಾಲಂನಲ್ಲಿ ಹೌದು/ಇಲ್ಲ ಎಂದು ಭರ್ತಿ ಮಾಡುವ ಬದಲು ಸಂಖ್ಯೆಯನ್ನೆ ನಮೂದಿಸಿದ್ದರು. ಪ್ಯಾನ್ ಕುರಿತ ಮಾಹಿತಿ ಕಾಲಂಗೆ ವ್ಯತಿರಿಕ್ತ ಪ್ರತಿಕ್ರಿಯೆ ಬಂದ ಕಾರಣ ಎನ್​ಪಿಆರ್ ಅರ್ಜಿಯಲ್ಲಿ ಇದನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. 2015ರಲ್ಲಿ ನಡೆದ ಎನ್​ಪಿಆರ್ ಮಾಹಿತಿ ಪರಿಷ್ಕರಣೆ ವೇಳೆ 50 ಕೋಟಿ ಜನರು ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಿದ್ದರು.

    ಗೊಂದಲ ಏಕೆ?: 2021ರ ಸಾರ್ವತ್ರಿಕ ಜನಗಣತಿ ಮತ್ತು ಎನ್​ಪಿಆರ್​ಗೆ ಅನುದಾನ ಮಂಜೂರು ಮಾಡುವ ಸಂದರ್ಭದಲ್ಲಿ ಎನ್​ಪಿಆರ್​ಗೆ ನಾಗರಿಕರು ವೈಯಕ್ತಿಕ ಗುರುತಿನ ಮಾಹಿತಿಯನ್ನು ನೀಡುವುದು ಐಚ್ಛಿಕ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು. ನಾಗರಿಕರು ಸ್ವಯಂ ಪ್ರಮಾಣಪತ್ರ ಅಥವಾ ಸ್ವಯಂ ಘೋಷಣೆ ನೀಡುವುದನ್ನು ಎನ್​ಪಿಆರ್ ಒಳಗೊಂಡಿರುತ್ತದೆ ಎಂದು ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಸ್ವಯಂಪ್ರೇರಣೆಯಿಂದ ಮಾಹಿತಿ ನೀಡಲು ಅಡ್ಡಿಯಿಲ್ಲ ಎಂದಿದ್ದರು.

    ಮಾಹಿತಿ ಕೊಡದಿದ್ದರೆ ದಂಡ?

    ಆಧಾರ್, ಮತದಾರರ ಗುರುತಿನ ಚೀಟಿ, ಡಿಎಲ್, ಪಾಸ್​ಪೋರ್ಟ್​ಗಳನ್ನು ಹೊಂದಿದ್ದರೂ ಈ ಕುರಿತ ಪ್ರಶ್ನೆಗೆ ಮಾಹಿತಿ ನೀಡದಿದ್ದರೆ  1 ಸಾವಿರ ರೂ. ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಕುಟುಂಬ ಸದಸ್ಯರ ಕುರಿತು ಸರಿಯಾದ ಮಾಹಿತಿ ಹಂಚಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಕುಟುಂಬದ ಮುಖ್ಯಸ್ಥರಿಗೆ ದಂಡವನ್ನು ವಿಧಿಸಬಹುದಾಗಿದೆ. 2003ರ ಪೌರತ್ವ ನಿಯಮ 17ರ ಪ್ರಕಾರ ಈ ದಂಡವನ್ನು ವಿಧಿಸಲು ಅವಕಾಶ ಇದೆ. ಇದರ ಉದ್ದೇಶ ದಂಡ ಹಾಕುವುದೇ ಅಲ್ಲ. ದಂಡಕ್ಕೆ ಹೆದರಿ ಜನರು ಸರಿಯಾದ ಮಾಹಿತಿ ನೀಡಲಿ ಎಂಬುದಾಗಿದೆ. ಏಕೆಂದರೆ ಎನ್​ಪಿಆರ್​ನ ಡೇಟಾವನ್ನು ಆಧಾರವಾಗಿ ಇರಿಸಿಕೊಂಡು ಅಭಿವೃದ್ಧಿ ಕಾರ್ಯ ಕ್ರಮಗಳನ್ನು ರೂಪಿಸಲಾಗುತ್ತದೆ ಮತ್ತು ಫಲಾನುಭವಿಗಳನ್ನು ಗುರುತಿಸಲು ಇದು ಸಹಾಯವಾಗುತ್ತದೆ. ಆದ್ದರಿಂದ ನಿಖರ ಮಾಹಿತಿ ಸಂಗ್ರಹಿಸುವುದು ಎನ್​ಪಿಆರ್ ಉದ್ದೇಶ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಜನ್ಮ ದಿನದ ಮಾಹಿತಿ ನೀಡಬೇಕು

    ಗಣತಿಯಲ್ಲಿ 34 ಪ್ರಶ್ನಾವಳಿಗಳು ಇರಲಿದ್ದು, ಇವು 31 ವಿಷಯಗಳಿಗೆ ಸಂಬಂಧಿಸಿದ್ದಾಗಿವೆ. ಗುರುತಿನ ದಾಖಲೆಯ ಮಾಹಿತಿ ಹೊರತಾಗಿ ಜನ್ಮ ದಿನ ಮತ್ತು ಸ್ಥಳ, ಈ ಹಿಂದೆ ವಾಸ ವಾಗಿದ್ದ ಸ್ಥಳದ ಮಾಹಿತಿ, ಮಾತೃಭಾಷೆ ಮತ್ತು ಮೊಬೈಲ್ ಸಂಖ್ಯೆಯನ್ನು ಪಡೆಯಲಾಗುತ್ತದೆ. ಕುಟುಂಬ ಸದಸ್ಯರ ಸಂಖ್ಯೆ, ಪಾಲಕರ ಕುರಿತು ಮಾಹಿತಿ, ವಾಹನಗಳು ಹೊಂದಿರುವ ಕುರಿತ ವಿವರ, ಮನೆಯಲ್ಲಿ ಶೌಚಗೃಹ ಇರುವ ಕುರಿತು ಮಾಹಿತಿ ಪಡೆಯಲಾಗುತ್ತದೆ.

    ಪಶ್ಚಿಮ ಬಂಗಾಳ, ಕೇರಳದಲ್ಲಿ ತಡೆ

    ಎನ್​ಪಿಆರ್​ಗೆ ಕೆಲ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾದ ಕಾರಣ ಈ ಪ್ರಕ್ರಿಯೆಗೆ ಮರುಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಈ ಪ್ರಕ್ರಿಯೆಯನ್ನು ರಿಜಿಸ್ಟ್ರಾರ್ ಜನರಲ್ ತಡೆ ಹಿಡಿದಿದ್ದಾರೆ. ಈ ಎರಡೂ ರಾಜ್ಯಗಳು ಎನ್​ಪಿಆರ್​ಗೆ ಅವಕಾಶ ಇಲ್ಲವೆಂದು ಹೇಳಿವೆ. ಎನ್​ಪಿಆರ್ ಜಾರಿ ಮಾಡದ ರಾಜ್ಯಗಳನ್ನು ಅಭಿವೃದ್ಧಿ ಯೋಜನೆಯಿಂದ ಹೊರಗಿಡುವ ಸಾಧ್ಯತೆ ಇದೆ.

    ಎರಡು ಹಂತದಲ್ಲಿ ಜನಗಣತಿ

    ಎನ್​ಪಿಆರ್ ಗಣತಿದಾರರ ತರಬೇತಿ ಕಾರ್ಯಕ್ರಮ ಆರಂಭವಾಗಿದ್ದು, ಮನೆಗಳ ಪಟ್ಟಿ ಸಿದ್ಧಪಡಿಸುವ ಗಣತಿ ಏಪ್ರಿಲ್​ನಿಂದ ಸೆಪ್ಟೆಂಬರ್​ನೊಳಗೆ ನಡೆಸುವಂತೆ ರಿಜಿಸ್ಟ್ರಾರ್ ಜನರಲ್ ಆದೇಶಿಸಿದ್ದಾರೆ. ಇದು ಸಾರ್ವತ್ರಿಕ ಜನಗಣತಿಯ ಮೊದಲ ಹಂತವಾಗಿರುತ್ತದೆ. 30 ಲಕ್ಷ ಗಣತಿದಾರರು ಭಾಗಿಯಾಗಲಿದ್ದಾರೆ. 2021ರ ಫೆಬ್ರವರಿಯಿಂದ ಎರಡನೇ ಹಂತದ ಗಣತಿ ಕಾರ್ಯ ನಡೆಯಲಿದೆ.

    ಮೊಬೈಲ್ ಆಪ್ ಬಳಕೆ

    ಇದೇ ಮೊದಲ ಬಾರಿಗೆ ಡಿಜಿಟಲ್ ಮೂಲಕವೂ ಗಣತಿ ನಡೆಯಲಿದೆ. ಮೊಬೈಲ್ ಆಪ್ ಮೂಲಕ ಮಾಹಿತಿ ಸಂಗ್ರಹಿಸುವ ಗಣತಿದಾರರಿಗೆ -ಠಿ; 25 ಸಾವಿರ ಸಂಭಾವನೆ ನೀಡಲಾಗುತ್ತದೆ. ಅರ್ಜಿ ನಮೂನೆ ಮೂಲಕ ನಡೆಸುವವರಿಗೆ -ಠಿ; 5,500 ಸಂಭಾವನೆ ದೊರೆಯಲಿದೆ. ಮೊಬೈಲ್ ಮೂಲಕ ಗಣತಿ ನಡೆಸುವವರಿಗೆ ನಾಲ್ಕು ಹಂತದಲ್ಲಿ ತರಬೇತಿ ನೀಡಲಾಗುತ್ತದೆ. ದುರ್ಗಮವಾದ ಬೆಟ್ಟಗುಡದ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಬಳಸಿ ಗಣತಿ ಕಾರ್ಯ ನಡೆಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts