More

    ಕೆಂಗೇರಿ ಪ್ಲೇಗ್ರೌಂಡ್ ಇನ್ನು ಸಿ.ಎ. ಜಾಗ ಅಲ್ಲ

    ಬೆಂಗಳೂರು: ಕೆಂಗೇರಿ ಉಪನಗರ ಬಡಾವಣೆಯ ಆಟದ ಮೈದಾನವನ್ನು ಸಿ.ಎ. ನಿವೇಶನವಾಗಿ ಗುರುತಿಸದೆ ಪ್ಲೇಗ್ರೌಂಡ್ ಆಗಿ ಮುಂದುವರಿಸುವಂತೆ ವಿಧಾನಸಭೆ ಅರ್ಜಿ ಸಮಿತಿಯು ಬಿಡಿಎಗೆ ನಿರ್ದೇಶನ ನೀಡಿದೆ.

    ಕೋಟ್ಯಂತರ ರೂಪಾಯಿ ಮೌಲ್ಯದ 2 ಎಕರೆ 23 ಗುಂಟೆ ವಿಸ್ತೀರ್ಣದ ಆಟದ ಮೈದಾನದ ದಾಖಲಾತಿಯಲ್ಲಿ ಸಿ.ಎ ಸೈಟ್ ಎಂದು ನಮೂದಾಗಿದ್ದರಿಂದ ಅದನ್ನು ಪರಭಾರೆ ಮಾಡುವ ತೆರೆಮರೆಯಲ್ಲಿ ನಡೆದಿದ್ದ ಚಿತಾವಣೆಗೆ ಅರ್ಜಿ ಸಮಿತಿ ತಡೆ ಒಡ್ಡಿದೆ. ಇದರಿಂದಾಗಿ ದಶಕದಿಂದ ನಡೆದಿದ್ದ ಹೋರಾಟಕ್ಕೆ ಕೊನೆಗೂ ಜಯ ದೊರೆತಿದ್ದು, ಸ್ಥಳೀಯ ಸಾರ್ವಜನಿಕರು ಪ್ಲೇಗ್ರೌಂಡ್ ಆಗಿ ಬಳಸಿಕೊಳ್ಳಲು ಮುಕ್ತ ಅವಕಾಶ ದೊರೆತಿದೆ.

    ಕೆಂಗೇರಿ ಆಟದ ಮೈದಾನಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರು ಹಿನ್ನೆಲೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಅರ್ಜಿ ಸಮಿತಿ ಅಧ್ಯಕ್ಷರೂ ಆದ ರುದ್ರಪ್ಪ ಎಂ. ಲಮಾಣಿ ನೇತೃತ್ವದಲ್ಲಿ ಸಮಿತಿಯ ತಂಡವು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸ್ವತ್ತಿನ ದಾಖಲಾತಿಯನ್ನು ಪರಿಶೀಲಿಸಿತು. ಪ್ಲೇಗ್ರೌಂಡ್‌ಗೆ ಸಂಬಂಧಿಸಿದ ದಾಖಲೆಗಳು ಹಾಗೂ ಅದಕ್ಕೆ ಪೂರಕ ಟಿಪ್ಪಣಿಗಳ ಕಡತವನ್ನು ಪರಾಮರ್ಶಿಸಿದ ಅಧ್ಯಕ್ಷರು, ಕೆಂಗೇರಿ ಬಡಾವಣೆಯಲ್ಲಿ ಬೇರೆ ಆಟದ ಮೈದಾನ ಇಲ್ಲದ ಕಾರಣ ಈ ಪ್ಲೇಗ್ರೌಂಡ್‌ಅನ್ನು ಸಿ.ಎ. ಸೈಟ್ ಎಂದು ಗುರುತಿಸದೆ ಆಟದ ಮೈದಾನವಾಗಿ ಮುಂದುವರಿಸಬೇಕು ಎಂದು ಘೋಷಿಸಿದರು.

    ಸಮಿತಿ ನಿಲುವಿಗೆ ಸಹಮತ:

    ಅರ್ಜಿ ಸಮಿತಿಯ ತೀರ್ಮಾನವನ್ನು ಸ್ಥಳದಲ್ಲೇ ಒಪ್ಪಿಕೊಂಡ ಬಿಡಿಎ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕೆಂಗೇರಿಯಲ್ಲಿರುವ ಆಟದ ಮೈದಾನವನ್ನು ದಾಖಲೆಗಳಲ್ಲಿ ನಮೂದಿಸುವುದಾಗಿ ಪ್ರಾಧಿಕಾರದ ನಿಲುವು ಪ್ರಕಟಿಸಿದರು.

    ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಕೆಂಗೇರಿ ಉಪನಗರದಲ್ಲಿರುವ ಏಕೈಕ ಆಟದ ಮೈದಾನವನ್ನು ಬಿಡಿಎ ದಾಖಲೆಗಳಲ್ಲಿ ಸಿ.ಎ. ನಿವೇಶನವಾಗಿ ನಮೂದಾಗಿದ್ದ ಕಾರಣ ಕೋಟ್ಯಂತರ ರೂ. ಮೌಲ್ಯದ ಈ ಜಾಗವನ್ನು ಅನ್ಯರು ಕಬಳಿಸುವ ಅವಕಾಶ ಇತ್ತು. ಸ್ಥಳೀಯ ಮುಖಂಡರ ಹೋರಾಟದ ಲವಾಗಿ ಪ್ಲೇಗ್ರೌಂಡ್ ಜನಬಳಕೆಗೆ ಉಳಿದುಕೊಳ್ಳುವಂತಾಗಿದೆ. ಇದಕ್ಕೆ ಸಹಕರಿಸಿದ ಅರ್ಜಿ ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.

    ಸ್ಥಳಪರಿಶೀಲನೆ ವೇಳೆ ಅರ್ಜಿ ಸಮಿತಿ ಸದಸ್ಯರಾದ ಎಸ್.ಸುರೇಶ್‌ಕುಮಾರ್, ಶಿವರಾಂ ಹೆಬ್ಬಾರ್, ಎ.ಸಿ.ಶ್ರೀನಿವಾಸ್, ಬಿಡಿಎ ಆಯುಕ್ತ ಎನ್.ಜಯರಾಂ, ಕಾರ್ಯದರ್ಶಿ ಶಾಂತಾರಾಜು, ಪ್ಲೇಗ್ರೌಂಡ್ ಬಗ್ಗೆ ದೂರು ನೀಡಿದ್ದ ಬಿ.ಎಂ.ಶಿವಕುಮಾರ್ ಹಾಗೂ ಇತರರಿದ್ದರು.

    ಸರ್ಕಾರದ ಗಮನ ಸೆಳೆದಿದ್ದ ವಿಜಯವಾಣಿ:

    ಕೆಂಗೇರಿ ಉಪನಗರ ಬಡಾವಣೆಯ ಆಟದ ಮೈದಾನವನ್ನು ಅದೇ ಸ್ವರೂಪದಲ್ಲಿ ಮುಂದುವರಿಸಲು ಬಿಡಿಎ ಮೀನಮೇಷ ಎಣಿಸುತ್ತಿದ್ದ ಜತೆಗೆ ಪಾಲಿಕೆಗೆ ಹಸ್ತಾಂತರಿಸಲು ಸಿ.ಎ. ಮೌಲ್ಯದ ಮೊತ್ತವನ್ನು ಪಾವತಿಸಲು ಪಟ್ಟು ಹಿಡಿದಿತ್ತು. ಈ ವಿಚಾರವಾಗಿ ಕಳೆದ ಅ.3ರ ಸಂಚಿಕೆಯಲ್ಲಿ ‘ಆಟದ ಮೈದಾನ ಹಸ್ತಾಂತರಕ್ಕೆ ತಗಾದೆ’ ಹಾಗೂ ನ.23ರ ಸಂಚಿಕೆಯಲ್ಲಿ ‘250 ಕೋಟಿ ರೂ. ಸ್ವತ್ತು ಪರಭಾರೆಗೆ ಹುನ್ನಾರ?’ ಶೀರ್ಷಿಕೆ ಅಡಿಯಲ್ಲಿ ಪತ್ರಿಕೆಯು ವಿಶೇಷ ವರದಿಯನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts