30 ವರ್ಷಗಳ ಬಳಿಕ ಗುಜರಾತ್​ನಲ್ಲಿ ಹುಲಿ ಪ್ರತ್ಯಕ್ಷ: ಮಾಹಿತಿ ಖಚಿತ ಪಡಿಸಿದ ಅರಣ್ಯ ಇಲಾಖೆ

ಅಹಮದಾಬಾದ್​: ಗುಜರಾತ್​ನ ಮಹಿಸಾಗರ ಜಿಲ್ಲೆಯ ರಸ್ತೆಯೊಂದರಲ್ಲಿ ಹುಲಿ ಕಾಣಿಸಿಕೊಂಡಿದ್ದನ್ನು ನೋಡಿದ್ದಾಗಿ ವ್ಯಕ್ತಿಯೊಬ್ಬ ಹೇಳಿದ್ದನ್ನು ಖಚಿತ ಪಡಿಸಿರುವ ಗುಜರಾತ್​ ಸರ್ಕಾರ ಹುಲಿ ಪ್ರತ್ಯಕ್ಷವಾಗಿರುವುದು ನಿಜ ಎಂದು ಹೇಳಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್​ ಸರ್ಕಾರದ ಅರಣ್ಯ ಸಚಿವ ಗಣಪತ್​ಸಿನ್ಹಾ ವಸವಾ ಅವರು ವ್ಯಕ್ತಿ ಹೇಳಿದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಹುಲಿ ಓಡಾಡುವ ದೃಶ್ಯ ಸೆರೆಯಾಗಿದೆ ಎಂದು ಹೇಳಿದ್ದಾರೆ.

ಪ್ರತ್ಯಕ್ಷವಾಗಿರುವ ಹುಲಿಯ ವಯಸ್ಸು 7 ರಿಂದ 8 ವರ್ಷಗಳಾಗಿದ್ದು, ಮಹಿಸಾಗರ ಜಿಲ್ಲೆಯಲ್ಲಿ ಕಂಡುಬಂದಿದೆ. 1989ರಲ್ಲಿ ಕೊನೆಯದಾಗಿ ಗುಜರಾತ್​ನಲ್ಲಿ ಹುಲಿ ಕಾಣಿಸಿಕೊಂಡಿತ್ತು. ನಾಲ್ಕು ವರ್ಷಗಳಿಗೆ ಒಮ್ಮೆ ಕೇಂದ್ರ ಸರ್ಕಾರ ಕೈಗೊಳ್ಳುವ ಸರ್ವೇಯಲ್ಲಿ ರಾಜ್ಯದಲ್ಲಿ ಹುಲಿ ಇರುವ ಬಗ್ಗೆ ಪ್ರಸ್ತಾಪವಾಗುತ್ತಿರಲಿಲ್ಲ ಎಂದು ಸಚಿವ ವಸವಾ ಅವರು ಗಾಂಧಿನಗರದಲ್ಲಿ ತಿಳಿಸಿದ್ದಾರೆ.

ಪ್ರತ್ಯಕ್ಷವಾಗಿರುವ ಹುಲಿ ನೆರೆಯ ರಾಜ್ಯಗಳಾದ ರಾಜಸ್ಥಾನ, ಮಧ್ಯ ಪ್ರದೇಶ ಅಥವಾ ಮಹರಾಷ್ಟ್ರದಿಂದ ಬಂದಿರಬಹುದದು. ಮಧ್ಯಪ್ರದೇಶದ ಉಜ್ಜಯಿನಿಯಿಂದ ಹುಲಿಯೊಂದು ಕಾಣೆಯಾಗಿರುವ ಬಗ್ಗೆ ಅಲ್ಲಿನ ಸರ್ಕಾರ ಹೇಳಿದ್ದು, ಅದೇ ವ್ಯಾಘ್ರ ಇದಾಗಿರಬಹುದೆಂದು ವಸವಾ ಹೇಳಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ(NTCA)ವನ್ನು ಸರ್ಕಾರ ಸಂಪರ್ಕಿಸಲ್ಲಿದ್ದು, ಹುಲಿಗಳಿರುವ ಪ್ರದೇಶದ ಬಗ್ಗೆ ಮಾಹಿತಿ ಕಲೆಹಾಕುವ ಮೂಲಕ ಹುಲಿ ಎಲ್ಲಿಂದ ಬಂದಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಸದ್ಯ ಗುಜರಾತ್​ನಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಒಪ್ಪಿಕೊಂಡಿದ್ದು, ಆ ಪ್ರದೇಶವನ್ನು ಅಧ್ಯಯನ ಮಾಡಿ ಹುಲಿಗಳ ಸಂರಕ್ಷಣೆಗೆ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರದ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸ್ಥಳೀಯ ಶಿಕ್ಷಕರೊಬ್ಬರು ಫೆ.6ರಂದು ಮಹಿಸಾಗರ ಜಿಲ್ಲೆಯ ಬೊರಿಯಾ ಗ್ರಾಮದ ಬಳಿಯ ರಸ್ತೆಯನ್ನು ಹುಲಿ ದಾಟುತ್ತಿರುವುದನ್ನು ನೋಡಿದ್ದಾಗಿ ಹೇಳಿದ್ದರು. ಅಲ್ಲದೆ, ಮೊಬೈಲ್​ ಮೂಲಕ ಅದರ ಫೋಟೋವನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದರು. ಬಳಿಕ ಅದು ಸಾಕಷ್ಟು ವೈರಲ್​ ಆಗಿತ್ತು.

ಶಿಕ್ಷಕನ ಹೇಳಿಕೆಯ ಆಧಾರದ ಮೇಲೆ ಅರಣ್ಯ ಇಲಾಖೆ ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ಹುಲಿಯ ಜಾಡನ್ನು ಪತ್ತೆಹಚ್ಚಲು ಕ್ಯಾಮೆರಾಗಳನ್ನು ಅಳವಡಿಸಿದ್ದರು. (ಏಜೆನ್ಸೀಸ್​)