ಬೆಂಗಳೂರು 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿಕೊಳ್ಳಲು ನ.20ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.
ಅಂಕಪಟ್ಟಿಗಳನ್ನು ಮುದ್ರಿಸಿ ಈಗಾಗಲೇ ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ, ತಂದೆ-ತಾಯಿ ಹೆಸರು ಸೇರಿ ತಪ್ಪಾಗಿ ಮುದ್ರಣವಾಗಿದ್ದಲ್ಲಿ ಮುಖ್ಯ ಶಿಕ್ಷಕರೇ ನೇರ ಹೊಣೆಗಾರರಾಗಿರುತ್ತಾರೆ.
ಅಂತಹ ಅಂಕಪಟ್ಟಿಯನ್ನು ಮಂಡಳಿಯಲ್ಲಿ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಮತ್ತೊಂದು ಅಂಕಪಟ್ಟಿಯನ್ನು ಪಡೆಯಬೇಕು ಹಾಗೂ ಅಂಕಪಟ್ಟಿ ಹರಿದಿದ್ದಲ್ಲಿ ಮುದ್ರಣದಲ್ಲಿ ದೋಷವಿದ್ದಲ್ಲಿ ಭಾವಚಿತ್ರ ಸರಿಯಾಗಿ ಮುದ್ರಣವಾಗದಿರುವುದು ಕಂಡುಬಂದಲ್ಲಿ ತಡಮಾಡದೆ ಅಂಕಪಟ್ಟಿ ಸ್ವೀಕರಿಸಿದ 5 ದಿನದೊಳಗೆ ಹೊಸ ಅಂಕಪಟ್ಟಿಯನ್ನು ಪಡೆಯಲು ಪ್ರಸ್ತಾವನೆಯೊಂದಿಗೆ ಮೂಲ ಅಂಕಪಟ್ಟಿಯನ್ನು ಲಗತ್ತಿಸಿ ಕಳುಹಿಸುವಂತೆ ಮಂಡಳಿಯು ಸೂಚಿಸಿದೆ.