ಪ್ರಿ ಕ್ವಾರ್ಟರ್​ಫೈನಲ್​ಗೆ ಜೋಕೊವಿಕ್, ನಿಶಿಕೋರಿ

ಲಂಡನ್: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಚ್ಚರಿಯ ಫಲಿತಾಂಶದೊಂದಿಗೆ ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಕ್ಲಬ್​ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿ 2ನೇ ವಾರಕ್ಕೆ ಕಾಲಿಟ್ಟಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ 3 ಬಾರಿಯ ಚಾಂಪಿಯನ್ ಹಾಗೂ ಪ್ರಶಸ್ತಿ ಫೇವರಿಟ್ ನೊವಾಕ್ ಜೋಕೊವಿಕ್, ಚೊಚ್ಚಲ ಕ್ವಾರ್ಟರ್​ಫೈನಲ್ ಮೇಲೆ ಕಣ್ಣಿಟ್ಟಿರುವ ಜಪಾನ್​ನ ಕೀ ನಿಶಿಕೊರಿ ಪ್ರಿ ಕ್ವಾರ್ಟರ್​ಫೈನಲ್​ಗೇರಿದ್ದಾರೆ.

ಕಳೆದ 2 ವರ್ಷಗಳಿಂದ ಗ್ರಾಂಡ್ ಸ್ಲಾಂ ಪ್ರಶಸ್ತಿ ಬರ ಎದುರಿಸುತ್ತಿರುವ ಸೆರ್ಬಿಯಾದ ಮಾಜಿ ವಿಶ್ವ ನಂ.1 ಜೋಕೊವಿಕ್ 3ನೇ ಸುತ್ತಿನ ಪಂದ್ಯದಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾದರು. ಸೆಂಟರ್ ಕೋರ್ಟ್​ನಲ್ಲಿ ನಡೆದ ಪಂದ್ಯದಲ್ಲಿ ಜೋಕೊವಿಕ್ 4-6, 6-3, 6-2, 6-4 ರಿಂದ ಬ್ರಿಟನ್​ನ ಕೈಲ್ ಎಡ್ಮಂಡ್ ವಿರುದ್ಧ ಜಯ ದಾಖಲಿಸಿದರು. 2 ಗಂಟೆ 54 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ತವರು ಅಭಿಮಾನಿಗಳ ಬೆಂಬಲ ಗಿಟ್ಟಿಸಿದ ಎಡ್ಮಂಡ್​ರನ್ನು ಮಣಿಸಲು ಜೋಕೋ ಸಾಕಷ್ಟು ಬೆವರು ಹರಿಸಿದರು. ಪಂದ್ಯದ ಬಳಿಕ ಜೋಕೊವಿಕ್ ಪ್ರೇಕ್ಷಕರ ವಿರುದ್ಧ ಕಿಡಿಕಾರಿದ್ದಾರೆ. ಸರ್ವ್ ಮಾಡುವ ವೇಳೆ ಅನಗತ್ಯವಾಗಿ ಶಿಳ್ಳೆ ಹಾಕುವುದು, ಕೆಮ್ಮುವುದು ಅತಿಯಾಗಿತ್ತು. ಅಂಥವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಜಪಾನ್​ನ ಸ್ಟಾರ್ ಆಟಗಾರ, 24ನೇ ಶ್ರೇಯಾಂಕಿತ ಕೀ ನಿಶಿಕೋರಿ 6-1, 7-6, 6-4 ನೇರ ಸೆಟ್​ಗಳಿಂದ 15ನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ನಿಕ್ ರ್ಕಿಗಿಯೋಸ್ ವಿರುದ್ಧ ಸುಲಭ ಜಯ ದಾಖಲಿಸಿದರು. ಜರ್ಮನಿಯ, 4ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ 6-7, 6-4, 7-5, 3-6, 0-6 ರಿಂದ ಲಾಟ್ವಿಯಾದ ಎರ್ನೆಸ್ಟ್ ಗುಲ್ಬಿಸ್​ಗೆ 3 ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೋತರು. 5ನೇ ಶ್ರೇಯಾಂಕಿತ ಅರ್ಜೆಂಟೀನಾದ 29 ವರ್ಷದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ 6-4, 6-1, 6-2 ನೇರ ಗೇಮ್ಳಿಂದ ಸ್ಪೇನ್​ನ 36 ವರ್ಷದ ಹಿರಿಯ ಆಟಗಾರ ಫೆಲಿಸಿಯಾನೋ ಲೊಪೆಜ್ ವಿರುದ್ಧ ಗೆದ್ದರು. ಫ್ರಾನ್ಸ್​ನ 33 ವರ್ಷದ ಜೈಲ್ಸ್ ಸಿಮೊನ್ ಮುಂದಿನ ಸುತ್ತಿಗೇರಿದರು.

ಮಿಶ್ರ ಡಬಲ್ಸ್​ನಲ್ಲಿ ದಿವಿಜ್​ಗೆ ನಿರಾಸೆ

ಪುರುಷರ ಡಬಲ್ಸ್ ವಿಭಾಗದಲ್ಲಿ ಮುನ್ನಡೆ ಸಾಧಿಸಿರುವ ಭಾರತದ ದಿವಿಜ್ ಶರಣ್, ಮಿಶ್ರ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ದಿವಿಜ್ ಹಾಗೂ ಪೋಲೆಂಡ್​ನ ಅಲಿಸ್ಜಾ ರೊಸೊಲ್ಸಕಾ ಜೋಡಿ 3-6, 5-7 ನೇರ ಸೆಟ್​ಗಳಿಂದ ಪೋಲೆಂಡ್​ನ ಮಾರ್ಸಿನ್ ಮಟ್ಕೊವಸ್ಕಿ ಹಾಗೂ ರೊಮಾನಿಯಾದ ಮೆಹೆಲಾ ಬುಜಾನೆಸ್ಕು ಜೋಡಿ ಶರಣಾದರು.

ಬೆನ್ಸಿಕ್ ಮುನ್ನಡೆ

ಸ್ವಿಸ್ ಆಟಗಾರ್ತಿ ಬೆಲಿಂಡಾ ಬೆನ್ಸಿಕ್ ಮುನ್ನಡೆ ಕಂಡಿದ್ದರೆ, 26ನೇ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಡರಿಯಾ ಗ್ಯಾವ್ರಿಲೋವಾ ಆಘಾತ ಎದುರಿಸಿದ್ದಾರೆ. ಬೆನ್ಸಿಕ್ ಸ್ಪೇನ್​ನ ಅನುಭವಿ ಆಟಗಾರ್ತಿ ಸ್ಯೂರೆಜ್ ನವಾರೊಗೆ 6-1, 7-6ರಿಂದ ಶಾಕ್ ನೀಡಿದರು. ಗ್ಯಾವ್ರಿಲೋವಾ 3-6, 1-6ರಿಂದ ಬೆಲಾರಸ್​ನ ಸಸ್ನೋವಿಕ್​ಗೆ ಶರಣಾದರು.

ಇಂದಿನಿಂದ ಅಂತಿಮ 16ರ ಘಟ್ಟದ ಸೆಣಸಾಟ

ವಿಂಬಲ್ಡನ್​ನಲ್ಲಿ ಭಾನುವಾರ ವಿಶ್ರಾಂತಿ ದಿನವಾಗಿದ್ದರೆ, ಸೋಮವಾರ ಪ್ರಿ ಕ್ವಾರ್ಟರ್​ಫೈನಲ್ ಪಂದ್ಯಗಳು ನಡೆಯಲಿವೆ. ಟೂರ್ನಿಯ ಮೊದಲ ವಾರದಲ್ಲಿ ಹಲವು ಅಚ್ಚರಿ ಫಲಿತಾಂಶಗಳು ದಾಖಲಾಗಿವೆ. ಅದರಲ್ಲೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 10 ಶ್ರೇಯಾಂಕದಲ್ಲಿ 9 ಆಟಗಾರ್ತಿಯರು ನಿರ್ಗಮಿಸಿದ್ದಾರೆ. ಪುರುಷರ ವಿಭಾಗದಲ್ಲಿ ದಿಗ್ಗಜರಾದ ಫೆಡರರ್, ನಡಾಲ್ ಹಾಗೂ ಜೋಕೋ ಕಣದಲ್ಲಿದ್ದು, ಕದನ ಕುತೂಹಲ ಕೆರಳಿಸಿದೆ.

ಆರಂಭ: ಸಂಜೆ 4, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್