ಮೈತ್ರಿಕೂಟದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪಗೆ ನೋಟಿಸ್

ಚಿತ್ರದುರ್ಗ: ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಿದ್ದಕ್ಕೆ ಸಂಬಂಧಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿಕೂಟ ಅಭ್ಯರ್ಥಿ ಬಿ.ಎನ್.ಚಂದ್ರಪ್ಪಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣ ಸೇರಿದಂತೆ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಇಲ್ಲವಾದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತಿಮವಾಗಿ 17,60,387 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇವರಲ್ಲಿ 8,89,274 ಪುರುಷರು, 8,71,009 ಮಹಿಳೆಯರು ಹಾಗೂ 104 ಇತರೆ ಮತದಾರರು ಇದ್ದಾರೆ. ಸೇವಾ ಮತದಾರರ ಸಂಖ್ಯೆ 522. ಕ್ಷೇತ್ರಾದ್ಯಂತ 12 ಸಖಿ ಬೂತ್‌ಗಳನ್ನು ಸ್ಥಾಪಿಸಲಾಗುವುದು. 1648 ಬೂತ್‌ಗಳಲ್ಲಿ ತಲಾ ಎರಡು ಬ್ಯಾಲೆಟ್ ಯೂನಿಟ್ ಬಳಸಲಾಗುವುದು.
ಸದ್ಯ 800 ಬ್ಯಾಲೆಟ್ ಯೂನಿಟ್‌ಗಳಿವೆ. ಶೇ.20 ಮೀಸಲು ಸಹಿತ ಅಗತ್ಯ ಬ್ಯಾಲೆಟ್ ಯೂನಿಟ್‌ಗಳನ್ನು ಶಿವಮೊಗ್ಗ, ದಾವಣಗೆರೆ ಹಾಗೂ ಕಲಬುರುಗಿಯಿಂದ ತರಿಸಲು ಆಯೋಗ ಸೂಚಿಸಿದೆ.

ನಾಮಪತ್ರ ತಿರಸ್ಕೃತ ಅಭ್ಯರ್ಥಿಯೊಬ್ಬರ ವಿರುದ್ಧ ಮಾಹಿತಿ ಮುಚ್ಚಿಟ್ಟದ್ದರ ಕುರಿತಂತೆ ಕಾನೂನು ಕ್ರಮಕ್ಕೆ ಪರಿಶೀಲಿಸಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ 1.21 ಲಕ್ಷ ರೂ.ಅಕ್ರಮ ಹಣ ಹಾಗೂ 1.05 ಲಕ್ಷ ರೂ.ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲೆಗೆ ಏ.12ರಂದು ಸಿಎಪಿಎಫ್ ಹಾಗೂ ಸಿಆರ್‌ಎಫ್ ತುಕಡಿಗಳು ಆಗಮಿಸಲಿವೆ ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದರು.