ಸಾಲ ವಸೂಲಿಗೆ ನೋಟಿಸ್ ಖಂಡಿಸಿ ಪ್ರತಿಭಟನೆ

ಬೆಳಗಾವಿ: ಎಲ್ ಆ್ಯಂಡ್ ಟಿ ಪೈನಾನ್ಸ್ ಕಂಪನಿಯು ಕೃಷಿ ಉಪಕರಣಗಳಿಗಾಗಿ ಪಡೆದಿರುವ ಸಾಲ ಮರುಪಾವತಿಸುವಂತೆ ಜಿಲ್ಲೆಯ ರೈತರಿಗೆ ಮುಂಬೈ ಮತ್ತು ಕೋಲ್ಕತ್ತಾ ಹೈಕೋರ್ಟ್ ಮೂಲಕ ಜಾರಿ ಮಾಡಿರುವ ನೋಟಿಸ್ ಹಿಂಪಡೆಯಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ಲಕ್ಷ್ಮಣ ಸತ್ಯಪ್ಪ ಹಂಚಿನಾಳ, ಪುತ್ರ ಸತೀಶ ಲಕ್ಷ್ಮಣ ಹಂಚಿನಾಳ ಅವರಿಗೆ ಸಾಲ ಪಾವತಿಸುವ ಕುರಿತು ಕೋಲ್ಕತ್ತಾ ಹೈಕೋರ್ಟ್ ಜೂನ್ 19ರಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ಕೃಷಿ ಭೂಮಿಯಲ್ಲಿ ಬಿತ್ತನೆ, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಣೆ ಇನ್ನಿತರ ಕೃಷಿ ಚಟುವಟಿಕೆಗಳಿಗಾಗಿ 2011ರಲ್ಲಿ ಟ್ರಾೃಕ್ಟರ್ ಖರೀದಿಸಲು ಕುನ್ನಾಳ ಗ್ರಾಮದ ಲಕ್ಷ್ಮಣ ಸತ್ಯಪ್ಪ ಹಂಚಿನಾಳ 5.50 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ. ಆದರೆ, ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಆದಾಯ ಇಲ್ಲದ ಕಾರಣ ಸಮಯಕ್ಕೆ ಸರಿಯಾಗಿ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗಿಲ್ಲ. ಕೇವಲ ಎರಡು ಕಂತುಗಳನ್ನು ಬಾಕಿ ಉಳಿಸಿಕೊಂಡಿರುವುದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ರೈತರು ದೂರಿದರು.

2018-19ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲಾಗಿದೆ. ಆದರೆ, 4 ತಿಂಗಳು ಕಳೆದರೂ ಕಬ್ಬಿನ ಬಿಲ್ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗಿಲ್ಲ. ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವರಿಕೆ ಮಾಡಿಕೊಟ್ಟರೂ ಸಾಲ ಪಾವತಿಸುವಂತೆ ಕೋರ್ಟ್ ಮೂಲಕ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕೃಷಿ ಚಟುವಟಿಕೆಗಳಿಗಾಗಿ ಸಾಲ ಪಡೆದುಕೊಂಡಿರುವ ರೈತರಿಗೆ ಯಾವುದೇ ನೋಟಿಸ್ ನೀಡದಂತೆ ಸೂಚನೆ ನೀಡಿದೆ. ಆದರೂ, ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಈ ಕೂಡಲೇ ಮುಖ್ಯಮಂತ್ರಿಗಳು ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ರೈತರು ಆಗ್ರಹಿಸಿದರು. ಸಂಘದ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನ್ನವರ, ಮಲ್ಲಿಕಾರ್ಜುನ ರಾಮದುರ್ಗ, ಸತ್ಯಪ್ಪಾ ಮಲ್ಲಾಪುರೆ, ಯಲ್ಲಪ್ಪ ದೊಡಮನಿ, ಗುರು ಸೋಮಣ್ಣ ಇನ್ನಿತರರು ಇದ್ದರು.