ಮಂಗಳೂರು: ಮಂಗಳೂರು ಗಲಭೆ ಬಳಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಬರಹ ಪ್ರಸಾರ ಮಾಡಿದ ಹಾಗೂ ಪೊಲೀಸರಿಗೆ ಬೆದರಿಕೆ ಕರೆ ಮಾಡಿದವರ ವಿರುದ್ಧ ಮಂಗಳೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಓರ್ವನನ್ನು ಬಂಧಿಸಿದ್ದು, 21 ಮಂದಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಪಾಂಡೇಶ್ವರದ ಮೊೖದೀನ್ ಹಮೀಝ್ ಬಂಧಿತ ಆರೋಪಿ. ಈತ ಕೋಮು ಪ್ರಚೋದಕ ಸಂದೇಶಗಳನ್ನು ಜಾಲತಾಣಗಳಲ್ಲಿ ಹರಡಿದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧಿಕಾರಿಗಳಿಗೆ ಅನಾಮಧೇಯ ಕರೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ನಿವಾಸಿ ಬಡೇಸಾಬ್, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡತೆಕ್ಕವಲಟ್ಟಿ ನಿವಾಸಿ ನಿಂಗಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಫೇಸ್ಬುಕ್ ಅಡ್ಮಿನ್ಗಳಿಗೂ ನೋಟಿಸ್: ಮುಸ್ಲಿಂ ಯುವಸೇನೆ, ಎಸ್ಡಿಪಿಐ, ಎಸ್ಡಿಪಿಐ ಮಂಗಳೂರು, ಅನ್ಸಾರ್ ಮಂಗಳೂರು ಫೇಸ್ಬುಕ್ ಗ್ರೂಪ್ ಅಡ್ಮಿನ್ಗಳಿಗೆ ಜ.3ರಂದು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ನ್ಯೂ ಫೇಸ್ಬುಕ್ ಖಾತೆ ಹೊಂದಿದ್ದ ನಿಝಾಮ್ ಫೇಸ್ಬುಕ್ ಖಾತೆ ಹೊಂದಿದ್ದ ಇಸ್ಮಾಯಿಲ್ ಎ.ಕೆ, ಟ್ವಿಟರ್ ಖಾತೆ ಹೊಂದಿದ್ದ ಅನಿಸ್ ಅಹಮ್ಮದ್, ಇರ್ಫಾನ್ ಬೆಳ್ತಂಗಡಿ, ಅನೀಸ್ ಬಿ.ಕೆ., ಅನೀಸ್ ಕುಂಬ್ರ, ಎಂಡಿ. ಆಸಿಫ್ ಖಾನ್, ನಿಸಾರ್ ಅಹಮ್ಮದ್, ಅಲ್ತಾಫ್, ಶಬ್ಬಿ ಅಹಮ್ಮದ್ ಅವರ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಜ.5ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡರೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಎಚ್ಚರಿಸಲಾಗಿದೆ.
ಸಿಐಡಿ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ಗಲಭೆ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾಥಮಿಕ ಹಂತದ ತನಿಖೆ ನಡೆಸಿದ್ದಾರೆ. ಪ್ರಮುಖ ಸಾಕ್ಷ್ಯಳನ್ನು ಸಂಗ್ರಹಿಸಿದ್ದಾರೆ.