ದೌರ್ಜನ್ಯ ಪ್ರಕರಣ ಶೀಘ್ರ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಸೂಚನೆ

ಹಾವೇರಿ: ಎಸ್​ಸಿ, ಎಸ್​ಟಿ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಈ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ವನಗಳು ಹಾಗೂ ನೀಡಿದ ಸೂಚನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಹಾಗೂ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯ ಕಾರ್ಯಕ್ರಮ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ಕಳೆದ ತ್ರೖೆಮಾಸಿಕ ಅವಧಿಯಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಅಧಿಕಾರೇತರ ಸದಸ್ಯರುಗಳು ಪ್ರಸ್ತಾಪ ಮಾಡಿದ ಸಮಸ್ಯೆಗಳನ್ನು ಇಲಾಖಾ ಅಧಿಕಾರಿಗಳಿಂದ ವಿವರ ಪಡೆದು ಇತ್ಯರ್ಥಪಡಿಸಬೇಕು. ಮುಂದಿನ ಸಭೆಯೊಳಗಾಗಿ ಪೂರ್ಣ ವರದಿಯೊಂದಿಗೆ ಹಾಜರಾಗಬೇಕು ಎಂದರು.

ಶಾಸಕ ಸಿ.ಎಂ. ಉದಾಸಿ ಮಾತನಾಡಿ, ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ದೌರ್ಜನ್ಯಕ್ಕೆ ಒಳಗಾದವರ ಮೇಲೆ ಒತ್ತಡ ಹಾಕಿ ರಾಜಿ ಮಾಡಿಕೊಳ್ಳುವಂತಾಗಬಾರದು. ಈ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮ ಹಾಗೂ ಎಚ್ಚರಿಕೆಯಿಂದ ವಿಲೇವಾರಿಗೊಳಿಸಬೇಕು ಎಂದರು.

ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕೃಷಿಹೊಂಡ ಹಾಗೂ ವಿವಿಧ ಯೋಜನೆಗಳು ರೈತರ ಪರವಾಗಿ ಗುತ್ತಿಗೆದಾರರೇ ಅರ್ಜಿ ಹಾಕಿ ಕಾಮಗಾರಿ ನಿರ್ವಹಿಸುತ್ತಿರುವ ಕುರಿತಂತೆ ದೂರುಗಳು ಬಂದಿವೆ. ಈ ಕುರಿತಂತೆ ಜಿಲ್ಲಾಮಟ್ಟದ ಕೃಷಿ ಅಧಿಕಾರಿಗಳು ಪರಿಶೀಲಿಸುವಂತೆ ಶಾಸಕ ಉದಾಸಿ ಸೂಚಿಸಿದರು.

ದೌರ್ಜನ್ಯ ಪ್ರಕರಣಗಳ ದಾಖಲು ವಿಲೇವಾರಿ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿರುವ ಪ್ರಕರಣಗಳ ವಿವರ, ಪರಿಹಾರ ಮೊತ್ತ ಪಾವತಿ ಕುರಿತು ಎಸ್​ಪಿ ಕೆ. ಪರಶುರಾಮ, ಸಮಾಜಕಲ್ಯಾಣಾಧಿಕಾರಿ ಚೈತ್ರಾ, ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಗೆಜ್ಜಿಹಳ್ಳಿ ಸಭೆಗೆ ವಿವರಿಸಿದರು.

ಸಭೆಯಲ್ಲಿ ದೌರ್ಜನ್ಯ ನಿಯಂತ್ರಣ ಹಾಗೂ ಜಾಗೃತಿಯ ಸಮಿತಿಯ ಸದಸ್ಯರಾದ ಎನ್.ಕೆ. ಮರೋಳ, ಮಾಲತೇಶ ಯಲ್ಲಾಪುರ, ಚಿನ್ನಪ್ಪ ದೇವಸೂರ, ಪರಮೇಶ ಗೊಡ್ಡೆಮ್ಮಿ, ಗೀತಾ ಅಂಕಸಖಾನಿ, ವಿದ್ಯಾಶೆಟ್ಟಿ, ಚಂದ್ರಪ್ಪ ಹರಿಜನ, ಹುಚ್ಚಪ್ಪ ನಾಗಪ್ಪನವರ, ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *