ಶಿವಮೊಗ್ಗ: ಮುಂಬರುವ ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾಗರ ಉಪ ವಿಭಾಗದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ ಹಾಗೂ ಭದ್ರಾವತಿ ಉಪ ವಿಭಾಗದಲ್ಲಿ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ ಗಣೇಶ ಪ್ರತಿಷ್ಟಾಪನಾ ಸಮಿತಿಯ ಸದಸ್ಯರ ಸಭೆ ನಡೆಸಲಾಯಿತು.
ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪಿಒಪಿಯಿಂದ ತಯಾರಿಸಿದ ಗಣಪತಿ ಮೂರ್ತಿಗಳ ಬದಲಾಗಿ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡಬೇಕು. ಗಣಪತಿ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವವರು ಮುಂಚಿತವಾಗಿ ಪ್ರತಿಷ್ಟಾನೆಯ ದಿನಾಂಕ, ಪೆಂಡಾಲ್ ಸ್ಥಳ, ಗಣಪತಿ ಮೂರ್ತಿಯ ಮೆರವಣಿಗೆ ಮಾರ್ಗ ಮತ್ತು ವಿಸರ್ಜನಾ ಸ್ಥಳದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಬೇಕು. ಪೆಂಡಾಲ್ಗಳಲ್ಲಿ ಸ್ವಯಂಸೇವಕರನ್ನು ನೇಮಿಸಿ ಅವರು ದಿನದ 24 ಗಂಟೆಯೂ ಅಲ್ಲಿರುವಂತೆ ನೋಡಿಕೊಳ್ಳಬೇಕು ಹಾಗೂ ಸ್ವಯಂಸೇವಕರ ಮಾಹಿತಿ ಮುಂಚಿತವಾಗಿ ನೀಡಬೇಕು ಎಂದು ಸೂಚಿಸಿದರು.
ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಕಳೆದ ಬಾರಿ ಮಾಡಿದ ಮಾರ್ಗದಲ್ಲಿಯೇ ಮಾಡಬೇಕು. ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆ ಮಾಡಬಾರದು. ಗಣೇಶ ಹಬ್ಬದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಹಾಕುವಾಗ ಇತರ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅಳವಡಿಸಬೇಕು. ಗೌರಿಗಣೇಶ ಹಬ್ಬದ ಆಚರಣೆಯ ವೇಳೆಯಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡುವಾಗ, ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ನಿಗದಿ ಪಡಿಸಿದ ಶಬ್ದಮಿತಿಯಲ್ಲಿಯೇ ಬಳಸಬೇಕು. ಗಣಪತಿ ವಿಸರ್ಜನೆ ಮಾಡುವಾಗ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಆಯಾ ಗಣೇಶ ಮೂರ್ತಿಗಳ ಪ್ರಷ್ಟಾಪನಾ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.