ಅನಧಿಕೃತ ಮನೆ ತೆರವಿಗೆ ನೋಟಿಸ್

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್
ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಪಂ ವ್ಯಾಪ್ತಿಯ ಸರ್ವೇ ನಂಬ್ರ 454ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಮನೆ ಕಟ್ಟಿ ವಾಸವಿರುವ ಮಂಜುಳಾ ಎಂಬುವರಿಗೆ ಮನೆ ತೆರವುಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ನೀಡಿದ್ದಾರೆ. ಇದು 94ಸಿ ಹಾಗೂ 94ಸಿಸಿಯಡಿ ಅರ್ಜಿ ಸಲ್ಲಿಸಿ ಅನಧಿಕೃತ ಮನೆ ನಿರ್ಮಿಸಿರುವ ಕುಟುಂಬಗಳ ಆತಂಕಕ್ಕೂ ಕಾರಣವಾಗಿದೆ.
ಸ್ಥಳೀಯರ ಆಕ್ರೋಶ: ಅಕ್ರಮ ಮನೆಗಳ ವಿರುದ್ಧ ಕ್ರಮಕ್ಕೆ ಚಾಲನೆ ನೀಡಿದ ಬೆಳ್ಮಣ್ ಗ್ರಾಪಂನ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈವರೆಗೆ ಫಲಾನುಭವಿಗಳಿಗೆ ನಿವೇಶನವನ್ನೇ ನೀಡದವರು, ಕೆಡವಲು ಮುಂದಾಗುತ್ತಿರುವುದು ಜನವಿರೋಧಿ ನಿಲುವು ಎಂದು ಬೆಳ್ಮಣ್ ಗ್ರಾಪಂನ ಧೋರಣೆ ಖಂಡಿಸಿ ಹೋರಾಟಕ್ಕೆ ಸ್ಥಳೀಯರು ಮುಂದಾಗಿದ್ದಾರೆ.

ಕಾನೂನು ಪಾಲನೆಯಲ್ಲಿ ತಾರತಮ್ಯ?: ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ಆರ್‌ಸಿಸಿ ಮನೆ ಇದ್ದವರಿಗೆ ಪಂಚಾಯಿತಿ ವತಿಯಿಂದ ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಿಕೊಳ್ಳುವಂತೆ ಪ್ರೋತ್ಸಾಹ ನೀಡಿದ ಘಟನೆಗಳು ಕೂಡ ಸಾಕಷ್ಟಿವೆ. ತಾಲೂಕಿನಲ್ಲಿ ಅದೆಷ್ಟೋ ಸರ್ಕಾರಿ ಜಾಗದಲ್ಲಿ ಹಕ್ಕುಪತ್ರ ನೀಡಿ ಕಾನೂನನ್ನು ಮೀರಿ ಕಾರ್ಯನಿರ್ವಹಿಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಆದರೆ ಬಡವರು ವಾಸ್ತವ್ಯ ಹೂಡಿದರೆ ಅದರ ವಿರುದ್ಧ ಗ್ರಾಪಂ ಆಡಳಿತ ಕ್ರಮಕ್ಕೆ ಮುಂದಾಗುತ್ತಿದೆ. ಇದು ಯಾವ ನ್ಯಾಯ? ಒಂದು ವೇಳೆ ಬೆಳ್ಮಣ್‌ನಲ್ಲಿ ಈ ಗುಡಿಸಲುಗಳು ತೆರವಾದಲ್ಲಿ, ತಾಲೂಕಿನಲ್ಲಿರುವ 10 ಸಾವಿರದಷ್ಟು ಅನಧಿಕೃತ ಮನೆಗಳು ಕೂಡಾ ತೆರವಾಗಬೇಕು. ಸ್ಥಳೀಯ ಪಿಡಿಒಗಳೇ ಅದರ ನೇತೃತ್ವ ವಹಿಸಿಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ. ಕಾನೂನು ಪಾಲನೆಯಲ್ಲಿ ಎಲ್ಲೂ ತಾರತಮ್ಯ ಸಲ್ಲದು ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2017ರ ನಂತರ ನಿರ್ಮಾಣವಾದ ಕಟ್ಟಡವಾದ್ದರಿಂದ 94 ಸಿ ಯಲ್ಲಿಯೂ ಅರ್ಜಿ ತಿರಸ್ಕೃತಗೊಂಡಿದೆ. ಅನಧಿಕೃತ ಶೆಡ್ ತೆರವಿಗೆ ಈ ಹಿಂದೆ 3 ಮನೆಗಳಿಗೆ 3 ಬಾರಿ ನೋಟಿಸ್ ನೀಡಲಾಗಿತ್ತು. ಈಗ ಅಂತಿಮ ನೋಟಿಸ್ ನೀಡಲಾಗಿದೆ.
ಪ್ರಕಾಶ್, ಬೆಳ್ಮಣ್ ಗ್ರಾಪಂ ಪಿಡಿಒ 

ಬೆಳ್ಮಣ್ ಗ್ರಾಪಂ ವ್ಯಾಪ್ತಿಯಲ್ಲಿ ಅನಧಿಕೃತ ಮನೆಗಳ ತೆರವಿಗೆ ಪಿಡಿಒ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ನೀಡಿದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
ಮೊಹಮ್ಮದ್ ಇಸಾಕ್, ಕಾರ್ಕಳ ತಹಸೀಲ್ದಾರ್