ಸಲಿಂಗಕಾಮಿ ಆಗಿರುವುದರಲ್ಲಿ ತಪ್ಪಿಲ್ಲ: ವೆಸ್ಟ್​ಇಂಡೀಸ್​ ಆಟಗಾರನಿಗೆ ಜೋ ರೂಟ್​ ತಿರುಗೇಟು

ನವದೆಹಲಿ: ಸಲಿಂಗದ ಭೀತಿಯುಳ್ಳವ ಎಂದು ಮೈದಾನದಲ್ಲೇ ವೆಸ್ಟ್​ಇಂಡೀಸ್ ವೇಗಿ ಶಾನನ್​ ಗೇಬ್ರಿಯಲ್ ಕೊಟ್ಟ ಟಾಂಗ್​ಗೆ ಇಂಗ್ಲೆಂಡ್​ ತಂಡದ ನಾಯಕ ಜೋ ರೂಟ್​ ನೀಡಿದ ಪ್ರತಿಕ್ರಿಯೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆ ಆಗುತ್ತಿದೆ.

ಮತ್ತೊಬ್ಬರ ಕಾಲೆಳೆಯಲು ಆ ಪದವನ್ನು ಬಳಸಬೇಡ. ಸಲಿಂಗಕಾಮಿ ಆಗಿರುವುದರಲ್ಲಿ ತಪ್ಪಿಲ್ಲ ಎಂದು ಗೇಬ್ರಿಯಲ್​ಗೆ ಇಂಗ್ಲೆಂಡ್​ ಆಟಗಾರ ಜೋ ರೂಟ್​ ತಿರುಗೇಟು ನೀಡಿರುವುದು ಸ್ಟಂಪ್​ ಮೈಕ್​ನಲ್ಲಿ ರೆಕಾರ್ಡ್​ ಆಗಿದೆ. ಇದಕ್ಕೂ ಮುಂಚೆ ಗೇಬ್ರಿಯಲ್​ ಮಾಡಿದ ಕಾಮೆಂಟ್ ಮೈಕ್​ನಲ್ಲಿ ರೆಕಾರ್ಡ್​ ಆಗಿರಲಿಲ್ಲ. ಆದರೆ, ತಮಗೆ ಗೇಬ್ರಿಯಲ್​ ಟಾಂಗ್​ ನೀಡಿದ್ದನ್ನು ವಿವರಿಸಲು ರೂಟ್​ ನಿರಾಕರಿಸಿ, ವೆಸ್ಟ್​ ಇಂಡೀಸ್​ ಆಟಗಾರ ಇದಕ್ಕೆ ಪಶ್ಚಾತ್ತಾಪ ಪಡಬಹುದು ಎಂದು ಹೇಳಿದ್ದರು.

ಆದರೆ, ಇಂದು ರೂಟ್​ ಕೊಟ್ಟ ಪ್ರತಿಕ್ರಿಯೆಯಿಂದ ಗೇಬ್ರಿಯಲ್​ ಮಾಡಿದ ಕಾಮೆಂಟ್​ ಬಹಿರಂಗವಾಗಿದೆ. ಇನ್ನೂ ಮೈದಾನಲ್ಲಿ ಗೇಬ್ರಿಯಲ್ ವರ್ತನೆ ಕಂಡು ಅಂಪೈರ್​ಗಳು ಎಚ್ಚರಿಕೆಯನ್ನು ನೀಡಿದ್ದಾರೆ. ವಿಂಡೀಸ್​ನ ಸೇಂಟ್ ಲೂಸಿಯಾದ ಡರೇನ್​ ಸಮಿ ಕ್ರೀಡಾಂಗಣದಲ್ಲಿ​ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದ ವೇಳೆ ಈ ಘಟನೆ ನಡೆದಿದೆ.

ರೂಟ್​ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ರೂಟ್​ ನೀವೊಬ್ಬ ಹೀರೋ, ನಿಮ್ಮನ್ನು ಕೆಣುಕಿದ ಗೇಬ್ರಿಯಲ್​ಗೆ ತಕ್ಕ ಉತ್ತರ ನೀಡಿದ್ದೀರಾ ಎಂದೆಲ್ಲಾ ಪ್ರಶಂಸೆಯ ಮಾತುಗಳು ಹರಿದುಬರುತ್ತಿವೆ.​ (ಏಜೆನ್ಸೀಸ್​)​