ಶಿಕಾರಿಪುರ: ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದುದು ಜಗತ್ತಿನಲ್ಲಿ ಬೇರೊಂದಿಲ್ಲ. ಕಾಯಿಲೆಗಳು ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಬಾರದಂತೆ ಜಾಗ್ರತೆವಹಿಸಿ ಸ್ವಸ್ಥ ಸಮಾಜ ನಿರ್ಮಿಸೋಣ ಎಂದು ಬಾಪೂಜಿ ಇನ್‌ಸ್ಟಿಟ್ಯೂಟ್ ಆ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಬಿ.ಪಾಪಯ್ಯ ಹೇಳಿದರು.
ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಶಿವಮೊಗ್ಗ, ಆರೋಗ್ಯ ಭಾರತಿ ಜಿಲ್ಲಾ ಘಟಕ, ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ, ಬಾಪೂಜಿ ಎಜುಕೇಷನಲ್ ಸೊಸೈಟಿಯಿಂದ ಆಯೋಜಿಸಿದ್ದ ಆರೋಗ್ಯ ಹಾಗೂ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಬಗ್ಗೆ ನಾವು ಗಂಭೀರವಾಗಿ ಯೋಚಿಸೋಣ. ಆರಂಭದ ಹಂತದಲ್ಲಿಯೇ ಚಿಕಿತ್ಸೆ ಪಡೆಯೋಣ. ಇಂದು ಕ್ಯಾನ್ಸರ್ ಕಾಯಿಲೆಗೆ ಔಷಧಗಳು ಮತ್ತು ಚಿಕಿತ್ಸೆಗಳು ಲಭ್ಯವಿದೆ ಎಂದರು.
ತೀರ್ಥಹಳ್ಳಿಯ ಎಂಐಒ ಕ್ಯಾನ್ಸರ್ ಆಸ್ಪತ್ರೆ, ಶಿಕಾರಿಪುರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆ್ ಪ್ಯಾರಾಮೆಡಿಕಲ್ ಸೈನ್ಸ್ ಸಹಕಾರದಿಂದ ಈ ಶಿಬಿರ ನಡೆಯುತ್ತಿದೆ. ಇಂತಹ ಅರಿವು ಮೂಡಿಸುವ ಶಿಬಿರಗಳನ್ನು ಸೇವಾ ಸಂಸ್ಥೆಗಳು, ಸಂಘಟನೆಗಳು ನಿರಂತರವಾಗಿ ಆಯೋಜಿಸಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ವಿ.ಸುರೇಶ್ ಮಾತನಾಡಿ, ತೀರ್ಥಹಳ್ಳಿಯ ಆಸ್ಪತ್ರೆಯು ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್ ತಡೆಗೆ ಜಾಗೃತಿ ಮೂಡಿಸುತ್ತಿದೆ. ಕ್ಯಾನ್ಸರ್ ಏನು ಹೊಸ ಕಾಯಿಲೆಯಲ್ಲ. ಇಂದು ಕ್ಯಾನ್ಸರ್ ಎಂದರೆ ಭಯಪಡುವ ಅವಶ್ಯಕತೆ ಇಲ್ಲ. ಸಾಕಷ್ಟು ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ. ಅಲ್ಲದೆ ರೋಗಿ ಎಲ್ಲರೊಡನೆ ಬೆರೆತು ಜೀವಿಸಬಹುದು ಎಂದು ಹೇಳಿದರು.
ಬಾಪೂಜಿ ಎಜುಕೇಶನ್ ಸೊಸೈಟಿ ಆಡಳಿತಾಧಿಕಾರಿ ಪಿ.ಆರ್.ಪವಿತ್ರಾ, ಸಂಪನ್ಮೂಲ ವ್ಯಕ್ತಿಗಳಾದ, ಡಾ. ಕೆ.ಪಿ.ಭವ್ಯಾ, ಡಾ. ಪಲ್ಲವಿ, ಸುನೀತಾ ರಾಘವೇಂದ್ರ ಇದ್ದರು.
