ಎಷ್ಟು ಕಾನೂನು ಬಂದರೂ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗುತ್ತಿಲ್ಲ, ವ್ಯವಸ್ಥೆ ಬದಲಾಗಿಲ್ಲ: ನಿರ್ಭಯಾ ತಾಯಿ ಬೇಸರ

ದೆಹಲಿ: ಸಾವಿರಾರು ಕಾನೂನುಗಳನ್ನು ಜಾರಿಗೆ ತಂದರೂ ಏನೂ ಬದಲಾವಣೆಯಾಗಿಲ್ಲ. ಅತ್ಯಾಚಾರ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುತ್ತಿಲ್ಲ ಎಂದು ದೆಹಲಿ ಗ್ಯಾಂಗ್​ ರೇಪ್​ ಪ್ರಕರಣದ ಸಂತ್ರಸ್ತೆ ನಿರ್ಭಯಾಳ ತಾಯಿ ಆಶಾ ದೇವಿ ನಿರಾಸೆ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿರುವ ಅವರು, ” ವ್ಯವಸ್ಥೆಯಲ್ಲಿ ಏನೇನೂ ಬದಲಾವಣೆಯಾಗುತ್ತಿಲ್ಲ. ಸಾವಿರಾರು ಕಾನೂನುಗಳನ್ನು ಮಾಡಿದ್ದರೂ, ಮುಂದೆ ಮಾಡಿದರೂ ನ್ಯಾಯಾಲಗಳು ಅವುಗಳದ್ದೇ ಆದ ಸೀಮಿತ ವೇಗದಲ್ಲಿ ನ್ಯಾಯದಾನ ಮಾಡುತ್ತಿವೆ. ಹೀಗಾಗಿ ನಾನು ಸರ್ಕಾರ ಮತ್ತು ನ್ಯಾಯಾಲಯಗಳನ್ನು ಕೇಳಬಯಸುತ್ತೇನೆ… ಒಂದು ಹೆಣ್ಣು ದೌರ್ಜನ್ಯಕ್ಕೊಳಗಾಗಿ 7 ವರ್ಷಗಳಾದರೂ ಅವಳಿಗೆ ನ್ಯಾಯ ಸಿಗದೆ ಹೋದರೆ ಅದಕ್ಕೆ ಯಾರು ಹೊಣೆ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.