18 C
Bangalore
Friday, December 6, 2019

ಖ್ಯಾತ ಕವಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ ಇನ್ನಿಲ್ಲ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಪ್ರಮುಖ ಕವಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ (83) ಮಂಗಳವಾರ ವಿಧಿವಶರಾದರು.

ಶ್ವಾಸಕೋಶದ ಸೋಂಕು ಸೇರಿ ವಯೋಸಹಜ ಅನಾರೋಗ್ಯದಿಂದ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ ನಾಡಿಗರು ಚಿಕಿತ್ಸೆ ಫಲಿಸದೆ ಬೆಳಗ್ಗೆ 6.30ಕ್ಕೆ ಕೊನೆಯುಸಿರೆಳೆದರು. ಅವರಿಗೆ ಪತ್ನಿ ಮಾಲತಿ, ಪುತ್ರಿಯರಾದ ಸ್ವಪ್ನ ಮತ್ತು ರಶ್ಮಿ ಹಾಗೂ ಮಗ ಅಪೂರ್ವ, ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿದ್ದಾರೆ. ಬೆಳಗ್ಗೆ 10.30ರಿಂದ ಜೆ.ಪಿ. ನಗರದ (ಸಾರಕ್ಕಿ) ಮಯಾ ಇಂದ್ರಪ್ರಸ್ಥ ಅಪಾರ್ಟ್​ವೆುಂಟ್ ಸಭಾಂಗಣದಲ್ಲಿ ನಾಡಿಗರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬ್ರಾಹ್ಮಣ ಸಂಪ್ರದಾಯದಂತೆ ಧಾರ್ವಿುಕ ವಿಧಿ-ವಿಧಾನವನ್ನು ಪೂರೈಸಿ, ಸಂಜೆ 5 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕಳಸದಿಂದ ಬಂದ ಪ್ರತಿಭೆ

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ 1935ರ ಮೇ 4ರಂದು ಜನಿಸಿದ ಸುಮತೀಂದ್ರ ನಾಡಿಗರು ಸಾಗರ ಮತ್ತು ಶಿರಾಳಕೊಪ್ಪದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಶಿವಮೊಗ್ಗದಲ್ಲಿ ಇಂಟರ್ ಮೀಡಿಯೆಟ್ ಪೂರೈಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸ್, ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ಅಮೆರಿಕದ ಫಿಲಡೆಲ್ಪಿಯಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪಡೆದರು. ನಂತರ ಯಾದಗಿರಿ, ಬೆಳಗಾವಿಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1985ರಲ್ಲಿ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ವಿಷಯದಲ್ಲಿ ಪ್ರೌಢ ಪ್ರಬಂಧ ಮಂಡಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದುಕೊಂಡರು.

ಬಹುಭಾಷಾ ಬಲ್ಲಿದ

ಡಾ. ಸುಮತೀಂದ್ರ ರಾಘವೇಂದ್ರ ನಾಡಿಗ ಅವರು ಭಾರತದ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದರಿಂದ (ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ) ಭಾರತೀಯ ಸಾಹಿತ್ಯದ ಅತ್ಯಂತ ನಿಕಟ ಪರಿಚಯ ಅವರಿಗಿತ್ತು. ಸಣ್ಣಕಥೆ, ಅನುವಾದ ಪ್ರಕಾರಗಳಲ್ಲಿ ಅವರ ಕೊಡುಗೆ ಅಮೂಲ್ಯ. ಬೇಂದ್ರೆ, ಅಡಿಗ, ನರಸಿಂಹಸ್ವಾಮಿ ಕುರಿತು ವಿಶೇಷ ಅಧ್ಯಯನ ನಡೆಸಿದವರು. ಸಾಹಿತ್ಯ ವಿಮರ್ಶೆಯಲ್ಲಿಯೂ ಪ್ರಖ್ಯಾತರು. ‘ಮೌನದಾಚೆಯ ಮಾತು’, ‘ನಾಲ್ಕನೆಯ ಸಾಹಿತ್ಯ ಚರಿತ್ರೆ’, ‘ಮತ್ತೊಂದು ಸಾಹಿತ್ಯ ಚರಿತ್ರೆ’, ‘ಅಡಿಗರು ಮತ್ತು ನವ್ಯಕಾವ್ಯ’, ‘ವಿಮರ್ಶೆಯ ದಾರಿಯಲ್ಲಿ’, ‘ಹೀಗೊಂದು ಸಾಹಿತ್ಯ ಚರಿತ್ರೆ’, ‘ಇನ್ನೊಂದು ಸಾಹಿತ್ಯ ಚರಿತ್ರೆ’, ‘ಕಾವ್ಯ ಎಂದರೇನು?’ ಸೇರಿದಂತೆ ಹಲವು ವಿಮರ್ಶಾ ಕೃತಿ ರಚಿಸಿದರು. ಅವರ ‘ಗಿಳಿ ಮತ್ತು ದುಂಬಿ’, ‘ಕಾಕೋಟಕ’, ‘ಸ್ಥಿತಪ್ರಜ್ಞ ಹಾಗೂ ಆಯ್ದ ಕಥೆಗಳು’ ಕೃತಿ ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯವಾಗಿತ್ತು. ‘ಜಡ ಮತ್ತು ಚೇತನ’, ‘ಪಂಚಭೂತಗಳು’, ‘ನಟರಾಜ ಕಂಡ ಕಾಮನಬಿಲ್ಲು’, ‘ಕುಹೂ ಗೀತ’, ‘ತಮಾಷೆ ಪದ್ಯಗಳು’, ‘ದಾಂಪತ್ಯ ಗೀತ’, ‘ಭಾವಲೋಕ’, ‘ಉದ್ಘಾಟನೆ’, ‘ಕಪ್ಪು ದೇವತೆ’, ‘ನಿಮ್ಮಪ್ರೇಮಕುಮಾರಿಯ ಜಾತಕ’ ಸೇರಿ ಹಲವಾರು ಜನಪ್ರಿಯ ಕವನ ಸಂಕಲನಗಳನ್ನು ನಾಡಿಗರು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ‘ಪಂಚಭೂತಗಳು’ ಮತ್ತು ‘ದಾಂಪತ್ಯ ಗೀತ’ ಕೃತಿಗಳು ಇಂಗ್ಲಿಷ್ ಮತ್ತು ಭಾರತದ ಹಲವಾರು ಪ್ರಾಂತೀಯ ಭಾಷೆಗಳಿಗೆ ಅನುವಾದಗೊಂಡಿವೆ.

ಪ್ರಶಸ್ತಿ ಗೌರವಗಳು

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಸೇರಿ ಹಲವಾರು ಪ್ರಶಸ್ತಿ-ಪುರಸ್ಕಾರಗಳು ನಾಡಿಗರಿಗೆ ಸಂದಿವೆ. 1996-1999ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷರಾಗಿದ್ದ ಅವರಿಗೆ ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ.

ಮಕ್ಕಳಿಗೂ ಪ್ರಿಯ

ಮಕ್ಕಳ ಸಾಹಿತ್ಯದಲ್ಲೂ ವಿಪುಲ ಕೃಷಿ ನಡೆಸಿರುವ ನಾಡಿಗರು, ಡಕ್ಕಣಕ್ಕ ಡಕ್ಕಣ, ಧ್ರುವ ಮತ್ತು ಪ್ರಹ್ಲಾದ, ದಿಡಿಲಕ್ ದಿಡಿಲಕ್, ಗೂಬೆಯ ಕಥೆ, ಇಲಿ ಮದುವೆ, ಗಾಳಿಪಟ, ಸಾಹಸ (ಸರಣಿ ಕತೆಗಳು) ಮುಂತಾದ ಕೃತಿಗಳನ್ನೂ, ಹನ್ನೊಂದು ಹಂಸಗಳು ಎಂಬ ಮಕ್ಕಳ ನಾಟಕವನ್ನೂ ಬರೆದಿದ್ದಾರೆ.

ಅನುವಾದ ಕ್ಷೇತ್ರಕ್ಕೂ ಕೊಡುಗೆ

ರಸ್ಕಿನ್ನನ – ಅನ್ ಟು ದಿಸ್ ಲಾಸ್ಟ್, ಸ್ಟ್ರಿಂಡ್ ಬರ್ಗ್​ನ -ಮಿಸ್ ಜೂಲಿ, ಅಯೋನೆಸ್ಕೊನ ಬೊಕ್ಕ ತಲೆಯ ನರ್ತಕಿ, ರಾಥಾನಾಥ್ ರಾಯ್ ಅವರ ಸಿಂಧಿ ಸಾಹಿತ್ಯ ಚರಿತ್ರೆ ಸೇರಿ ಹಲವು ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿದ್ದಾರೆ. ಬಂಗಾಳಿ ಭಾಷೆಯಿಂದ ರವೀಂದ್ರನಾಥ ಟ್ಯಾಗೋರರ ತಿನ್ ಸಂಗಿ, ನರೇಂದ್ರನಾಥ ಚಕ್ರವರ್ತಿಯವರ ಉಲಂಗ್ ರಾಜಾ, ಬಂಗಾಳದ ಕವಿತೆಗಳು ಮುಂತಾದವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಹಿರಿಯ ಸಾಹಿತಿ, ವಿದ್ವಾಂಸ ಡಾ.ಸುಮತೀಂದ್ರ ನಾಡಿಗರು ಪ್ರಖರ ರಾಷ್ಟ್ರೀಯ ಚಿಂತಕರೂ ಆಗಿದ್ದರು. ಅವರು ಸಲ್ಲಿಸಿದ ಸಾಹಿತ್ಯ ಸೇವೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

| ರಘುನಂದನ್ ಭಟ್ಟ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ

ನಮ್ಮದು 46 ವರ್ಷಗಳ ಸ್ನೇಹ. ಕನ್ನಡದ ಮುಂಚೂಣಿ ಕವಿಯಾಗಿದ್ದ ನಾಡಿಗರು ಗೋಪಾಲಕೃಷ್ಣ ಅಡಿಗರ ಕಾವ್ಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದರು. ಅವರ ಹಾಗೆ ಪದ್ಯ ಬರೆಯುವ ಹಾಗೂ ಕವನ ಓದುವವರು ಬಹಳ ಅಪರೂಪ. ಸಾಹಿತ್ಯದಲ್ಲಿ ಆಸಕ್ತಿ ಇರುವವರನ್ನು ಗುರುತಿಸಿ, ಮಾರ್ಗದರ್ಶನ ನೀಡುತ್ತಿದ್ದರು.

| ಎಸ್. ದಿವಾಕರ್ ಸಾಹಿತಿ

ಸುಮತೀಂದ್ರ ನಾಡಿಗರ ನಿಧನ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದ ಸದಸ್ಯರಿಗೆ ದುಃಖವನ್ನು ಸಹಿಸುವಂಥ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

| ಡಾ. ಜಯಮಾಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ


ಕವಿಗೋಷ್ಠಿಗೆಂದು ಹೊರಟು ಹೋದಿರಾ?

| ಡಾ. ಜಿ.ಬಿ. ಹರೀಶ

ಸುಮತೀಂದ್ರರು ಇನ್ನಿಲ್ಲ. ಮಯಾ ಇಂದ್ರಪ್ರಸ್ಥದ ತಮ್ಮ ನೆಲೆಯಿಂದ ಇಂದು(ಮಂಗಳವಾರ) ಹೊರಟುಹೋದರು. ಪ್ರಾಯಃ ಸತತ ಕಾವ್ಯೋದ್ಯೋಗದಲ್ಲಿ ತೊಡಗಿದ್ದ ಅವರು ಯಾವುದೋ ಇಂದ್ರಲೋಕಕ್ಕೆ ಸೆಮಿನಾರಿಗೆ ಹೊರಟರು, ಕವಿಗೋಷ್ಠಿಗೆ ಹೊರಟರೆಂದು ನಾನು ಭಾವಿಸಿದ್ದೇನೆ. ನಮ್ಮ ನಡುವೆ ಈಚಿನ ದಿನಗಳಲ್ಲಿ ಇದ್ದು, ಎದ್ದುಹೋದ ಶ್ರೇಷ್ಠ ಕಾವ್ಯೋಪಾಸಕರಲ್ಲಿ ಸುಮತೀಂದ್ರ ನಾಡಿಗರು, ಕಿ.ರಂ. ನಾಗರಾಜ, ಕೀರ್ತಿನಾಥ ಕುರ್ತಕೋಟಿ ಸೇರುತ್ತಾರೆ.

ನಾಡಿಗರನ್ನು 16 ವರ್ಷಗಳಿಂದ ಬಲ್ಲೆ. ನಮ್ಮ ಮನೆ (ಬೆಂಗಳೂರಿನ) ಶ್ರೀನಿವಾಸನಗರದಲ್ಲಿತ್ತು. ಆಗ ಅವರ ಪರಿಚಯವಾಯಿತು. ಅವರೇ ಹೇಳಿದಂತೆ ಆಗ ಅವರು ಕೆಲವರ ರಾಜಕೀಯಗಳಿಂದ ಬೇಸತ್ತಿದ್ದರು. ಚಿಕ್ಕವಯಸ್ಸಿನಲ್ಲಿ ಕಳಸದಲ್ಲಿ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದರು. ನಂತರ ಜೀವನ ಅವರನ್ನು ಎಂ.ಎನ್. ರಾಯ್, ಕೆ. ಟಿ. ಷಾ ಮುಂತಾದವರೆಡೆಗೆ ತೆಗೆದುಕೊಂಡು ಹೋಗಿತ್ತು. ಕಡೆಯ ಇಪ್ಪತ್ತು ವರ್ಷಗಳಲ್ಲಿ ಅವರು ಭಾರತೀಯ ವಿದ್ಯೆ, ಕಲೆ, ಕಾವ್ಯಮೀಮಾಂಸೆ, ದರ್ಶನಗಳ ಕಡೆ ಹೊಸ ಒಲವು ಬೆಳೆಸಿಕೊಂಡಿದ್ದರು.

ಈ ಸಮಯದಲ್ಲಿ ಮೊದಲಿನಿಂದ ಇದೇ ದಾರಿಯಲ್ಲಿದ್ದ ನನಗೂ ಅವರಿಗೂ ಗೆಳೆತನವಾಯಿತು. ಆಗ ತಾನೆ ಅವರು ‘ಪಂಚಭೂತಗಳು’ ಎಂಬ ಕಾವ್ಯಗುಚ್ಛ ರಚಿಸಿದ್ದರು. ಅದು ಭಾರತದ ಹಲವು ಭಾಷೆಗಳಿಗೆ ಕಾವ್ಯರೂಪದಲ್ಲಿ ಅನುವಾದ ಕೂಡ ಆಯಿತು. ಅದರ ಸುತ್ತ ನಾನು-ನಾಡಿಗರು ದಿನಗಟ್ಟಲೆ ಅವರ ಮನೆಯಲ್ಲಿ ಚರ್ಚೆ ಮಾಡಿದ್ದೆವು.

ಮೇಲ್ನೋಟಕ್ಕೆ ತುಸು ಗಡಸು ಅನಿಸುತ್ತಿದ್ದ ನಾಡಿಗರೊಳಗೆ ಸದಾ ಒಂದು ತುಂಟಮಗುವಿತ್ತು. ಅವರ ಪಾಲಿಗೆ ಮೊದಲು ಗೋಪಾಲಕೃಷ್ಣ ಅಡಿಗರು ದೊಡ್ಡ ಕವಿಯಾಗಿದ್ದರು. ಅಡಿಗರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿದವರು ನಾಡಿಗರೇ. ಆದರೆ ಬೇರೆ ಬೇರೆ ಮೂಡಿನಲ್ಲಿದ್ದಾಗ ‘ನಾನು ನ-ಅಡಿಗ (ಅಡಿಗನಲ್ಲ), ನಾಡಿಗ’ ಎಂದು ಪನ್ ಮಾಡುತ್ತಿದ್ದರು. ಎರಡು ಎಂ.ಎ., ಎರಡು ಪಿಎಚ್.ಡಿ. ಇದ್ದ ನಾಡಿಗರು ಉಪಜೀವನ ನಡೆಸಲು ಒಂದು ಹಂತದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದರು. ಗಾಂಧಿಬಜಾರಿನಲ್ಲಿ ಒಂದು ಪುಸ್ತಕದ ಅಂಗಡಿ ತೆರೆೆದು ಜೀವನ ನಡೆಸಿದ್ದರು. ಕಪು್ಪದೇವತೆ, ಜಡ ಮತ್ತು ಚೇತನ, ಪಂಚಭೂತಗಳು ಹಾಗೂ ದಾಂಪತ್ಯಗೀತ ಕವನ ಸಂಕಲನದ ಕೆಲವು ಕವಿತೆ ಗಳು ಈಗಲೂ ಮೆಲುಕುಹಾಕುವಂಥವು. ಒಂದು ಕವನದಲ್ಲಿ ಬರುವ ‘ಉಲೂಪಿ’ ಪದದಲ್ಲಿರುವ ಜಗಣ (ಖಿ ಙ ಖಿ)ವನ್ನು ಅವರು ಸವಿದು ಬೇರೆಯವರ ಎದುರು ಹೇಳುತ್ತಿದ್ದರು.

ಬಂಗಾಳಿಯ ಶಂಖೋ ಘೋಷ್, ಸುನೀಲ್ ಗಂಗೋಪಾಧ್ಯಾಯ ಮುಂತಾದವರು ನಾಡಿಗರಿಗೆ ಆಪ್ತರು. ಒಂದು ಕಾಲಕ್ಕೆ ಕನ್ನಡ-ಬಂಗಾಳಿ ಭಾಷೆ-ಸಂಸ್ಕೃತಿಗಳ ನಡುವೆ ನಾಡಿಗರು ಸೇತುವೆಯಾಗಿದ್ದರು. ಸೇತುವೆಯ ಸಮಸ್ಯೆಯೆಂದರೆ ಅದನ್ನು ತುಳಿದು ಹೋಗುವವರು ಅದನ್ನು ಮರೆತುಬಿಡುತ್ತಾರೆ. ಜೀವದ ಗೆಳೆಯರಾಗಿದ್ದ ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ ಕ್ರಮೇಣ ನಾಡಿಗರಿಂದ ದೂರವಾದರು. ಲೋಕಜೀವನದ ನಯ-ನಾಜೂಕುಗಳಿಗೆ ತಮ್ಮನ್ನು ತೀರಾ ಒಗ್ಗಿಸಿಕೊಳ್ಳದ ನಾಡಿಗರು ಅದಕ್ಕಾಗಿ, ಅದರಿಂದ ಬರುವ ಮಾನ, ಸಮ್ಮಾನಗಳಿಗೆ ಕೂಡ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಪ್ರಾಚೀನರಲ್ಲಿ ಅವರಿಗೆ ಪಂಪ, ಕುಮಾರವ್ಯಾಸ ಪ್ರಿಯರಾದ ಕವಿಗಳು. ಆಧುನಿಕರಲ್ಲಿ ಬೇಂದ್ರೆ, ಅಡಿಗ, ನರಸಿಂಹಸ್ವಾಮಿ ಇವರನ್ನು ಶ್ರೇಷ್ಠಕವಿಗಳು ಎಂದು ತಮ್ಮ ಓದಿನಿಂದ ಕಂಡುಕೊಂಡಿದ್ದರು. ಅವರು ಇಂಗ್ಲಿಷ್ ಮೇಷ್ಟ್ರಾಗಿದ್ದಿದ್ದರಿಂದ ಮಿಲ್ಟನ್, ಬ್ಲೇಕ್, ವರ್ಡ್ಸ್​ವರ್ತ್, ಎಲಿಯಟ್, ಡನ್ ಇವರನ್ನು ಚೆನ್ನಾಗಿ ಓದಿಕೊಂಡಿದ್ದರು.

ಭೈರಪ್ಪನವರು ‘ಯಾನ’ ಬರೆದ ಮೇಲೆ ಹಸ್ತಪ್ರತಿಯನ್ನು ನಾಡಿಗರು ಸಹ ಓದಿದ್ದರು. ಜಿ.ಪಿ. ರಾಜರತ್ನಂ ಶಿಷ್ಯರಾದ ನಾಡಿ ಗರು ಮಾಸ್ತಿ, ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ, ವಿ.ಸೀ. ಅವರ ಜತೆ ನಂಟು ಹೊಂದಿದ್ದರು. ಭೀಮಸೇನ ತೋರಗಲ್ಲ, ವಿಕ್ರಂ ವಿಸಾಜಿ, ಮಹಾಬಲಮೂರ್ತಿ ಕೊಡ್ಲೆಕೆರೆ, ಡಾ. ಅಣ್ಣಮ್ಮ ಹಾಗೂ ನನ್ನ ಜತೆ ಸ್ನೇಹ-ವಾತ್ಸಲ್ಯ ಹೊಂದಿದ್ದರು. ಶುಭ್ರ ಹತ್ತಿಯಂಥ ಬಿಳಿಕೂದಲಿನ, ತುಂಟತನ ಕುಣಿಸುವ ಮೀಸೆಯ, ನೆನೆದಾಗ ಛಕ್ಕನೆ ತುಟಿಯಂಚಿಗೆ ಬರುವ ಬೇಂದ್ರೆ-ಅಡಿಗರ ಸಾಲುಗಳನ್ನು ಹೇಳುತ್ತಿದ್ದ ವೃದ್ಧಮಗು ಇನ್ನಿಲ್ಲ. ಪ್ರಾಯಃ ಅವರು ಇಂದ್ರಪ್ರಸ್ಥದಿಂದ ಹೊರಟು ಅಮರಾವತಿ ಸೇರಿ, ಅಲ್ಲಿ ಈಗಾಗಲೇ ಬೀಡುಬಿಟ್ಟಿರುವ ಹಳೆಯ ಹೊಸ ಕವಿಗಳೊಂದಿಗೆ ಸರಸ, ಸಲ್ಲಾಪ, ಪದ್ಯರಚನೆ ಮಾಡಲು ಶ ುರುಮಾಡಿರಬಹುದು. ಶಬ್ದವು ಬೆಳಕಾದ್ದರಿಂದ, ಬೆಳಕು ಎಲ್ಲ ಕಡೆಗೂ ಇರುವುದರಿಂದ ಕವಿತೆ ಕೂಡ ಬೇರೆ ಬೇರೆ ಲೋಕಗಳಲ್ಲಿ ಸಂಚಾರ ಮಾಡಬಲ್ಲುದು ಅಲ್ಲವೇ?

(ಲೇಖಕರು ಸಾಹಿತ್ಯ ವಿಮರ್ಶಕರು)

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...