ನೋಟಾ ಕೊಡುತ್ತಿರುವ ಒಳ ಏಟಿಗೆ ಕಮಲ ಪಡೆ ಪೇಚಾಟ!

ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದೇ ಪಕ್ಷದ ಅಭ್ಯರ್ಥಿಗಳು ಇಷ್ಟವಿಲ್ಲದವರನ್ನೂ ಮತಗಟ್ಟೆಗೆ ಆಕರ್ಷಿಸಿ ಒಟ್ಟು ಮತದಾನದ ಪ್ರಮಾಣ ಹೆಚ್ಚಿಸುವ ಚಿಂತನೆ ಹೊಂದಿದ್ದ ‘ನೋಟಾ’ (ನನ್ ಆಫ್ ದಿ ಎಬೋವ್) ಆಯ್ಕೆ ಸದ್ಯಕ್ಕೆ ಬಿಜೆಪಿಯನ್ನಂತೂ ಚಿಂತೆಗೆ ಹಚ್ಚಿದೆ.

ನೋಟಾ ಬಳಕೆಯಿಂದ ವಿಧಾನಸಭಾ ಚುನಾವಣೆಗಳಲ್ಲಿ ಅನೇಕ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ ಎಂಬಂತಹ ಮಾತುಗಳಿಂದ ಚಿಂತಿತವಾಗಿರುವ ಪಕ್ಷ, ಲೋಕಸಭಾ ಚುನಾವಣೆಯಲ್ಲಿ ಇದಕ್ಕೆ ಪರಿಹಾರ ಹುಡುಕಲು ಮುಂದಾಗಿದೆ. ಚುನಾವಣೆಯಿಂದ ಚುನಾವಣೆಗೆ ನೋಟಾ ಸಂಖ್ಯೆ ಹೆಚ್ಚುತ್ತಿರುವುದು ಮತದಾರರ ಜಾಗೃತಿಯ ಫಲವೋ ಅಥವಾ ಇದರ ಹಿಂದೆ ಯೋಜಿತ ತಂತ್ರವೇನಾದರೂ ಇದೆಯೋ? ಎಂದೂ ಪರಿಶೀಲನೆಗೆ ಮುಂದಾಗಿದೆ.

ಪಂಚರಾಜ್ಯ ಚುನಾವಣೆ ಎಫೆಕ್ಟ್?: ಮಂಗಳವಾರ ಫಲಿತಾಂಶ ಹೊರಬಂದ ಪಂಚರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಸೋಲಿಗೆ ಪ್ರಮುಖವಾಗಿ ನೋಟಾದಿಂದಾಗಿಯೇ 10-15 ಸ್ಥಾನಗಳು ಬಿಜೆಪಿಗೆ ಕಡಿಮೆಯಾಗಿವೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿರುವ ರಾಷ್ಟ್ರೀಯ ಬಿಜೆಪಿ ವರಿಷ್ಠರು, ಈ ಹಿಂದಿನ ಚುನಾವಣೆ ಫಲಿತಾಂಶಗಳತ್ತಲೂ ಕಣ್ಣು ಹಾಯಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಸೋತ 11 ಕ್ಷೇತ್ರಗಳಲ್ಲಿ ಸೋಲಿನ ಅಂತರಕ್ಕಿಂತಲೂ ನೋಟಾ ಮತಗಳ ಸಂಖ್ಯೆ ಹೆಚ್ಚಾಗಿದೆ. ರಾಜಸ್ಥಾನದಲ್ಲಿ ಈ ಸಂಖ್ಯೆ 7 ಇದೆ. ನೋಟಾ ಬಳಕೆಯಿಂದ ಕಾಂಗ್ರೆಸ್ ಅಭ್ಯರ್ಥಿಗಳೂ ಕೆಲವೆಡೆ ಸೋತಿದ್ದಾರೆ. ಆದರೆ, ಆಡಳಿತ ಪಕ್ಷದ ವಿರುದ್ಧ ನೋಟಾ ಚಲಾವಣೆಯಾಗುತ್ತದೆ ಎಂಬ ನಂಬಿಕೆಯಲ್ಲಿ, ಬಿಜೆಪಿಗೆ ಹೆಚ್ಚು ನಷ್ಟವಾಗಿದೆ ಎಂಬುದು ಪ್ರಮುಖರ ಅನಿಸಿಕೆ. ಈ ಕುರಿತು ರಾಜ್ಯ ಘಟಕಗಳಿಂದ ಅಭಿಪ್ರಾಯ ಕೇಳಿದ್ದಾರೆ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಟಾ ವಿರೋಧಿಸಿದ್ದ ಆರೆಸ್ಸೆಸ್

ನೋಟಾಕ್ಕೆ ಮತ ಚಲಾಯಿಸುವ ಕುರಿತು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅಸಮ್ಮತಿ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್​ನಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದ ಸಂವಾದದಲ್ಲಿ ಹಾಗೂ ನಾಗಪುರದಲ್ಲಿ ವಿಜಯದಶಮಿ ಭಾಷಣದಲ್ಲೂ ನೋಟಾ ಕುರಿತು ಪ್ರಸ್ತಾಪಿಸಿದ್ದರು. ಇರುವವರಲ್ಲಿ ಉತ್ತಮರನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾರೂ ಉತ್ತಮರಿಲ್ಲ ಎನ್ನುತ್ತ ನೋಟಾಕ್ಕೆ ಮತ ಹಾಕಿದರೆ, ಅನೇಕ ಬಾರಿ ಅತ್ಯಂತ ಅನರ್ಹರೇ ಜಯಿಸುವ ಅಪಾಯವಿದೆ. ನೋಟಾಕ್ಕೆ ಮತ ಬೇಡ ಎಂಬುದಾಗಿ ತಿಳಿಸಿದ್ದರು.

ಯೋಜಿತ ತಂತ್ರದ ಭಾಗ?

ವ್ಯವಸ್ಥಿತವಾಗಿ ನೋಟಾ ಪರ ಪ್ರಚಾರ ನಡೆಯುತ್ತಿದೆಯೇ ಎಂಬ ಚಿಂತೆಯೂ ಬಿಜೆಪಿಯನ್ನು ಕಾಡುತ್ತಿದೆ. 2017ರ ಗುಜರಾತ್ ಚುನಾವಣೆಯಲ್ಲಿ ಒಟ್ಟು ಮತದ ಶೇ.1.8 ನೋಟಾ ಚಲಾವಣೆಯಾಗಿತ್ತು. ಇದೀಗ ರಾಜಸ್ಥಾನದಲ್ಲಿ ಶೇ.1.33 ಹಾಗೂ ಮಧ್ಯಪ್ರದೇಶದಲ್ಲಿ ಶೇ.1.5 ಮತಗಳು ನೋಟಾ ಖಾತೆಗೆ ಬಿದ್ದಿವೆ. ಆದರೆ, ಕರ್ನಾಟಕದಲ್ಲಿ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 3 ಲಕ್ಷ ಅಂದರೆ ಶೇ.0.9 ಮಾತ್ರ ನೋಟಾ ಮತವಿತ್ತು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ನೋಟಾ ಚಲಾವಣೆ ಆಗುತ್ತಿರುವುದಕ್ಕೆ ನಿಜ ಕಾರಣ ಹುಡುಕುವತ್ತಲೂ ಬಿಜೆಪಿ ಮುಂದಾಗಿದೆ. ಇದರ ಹಿಂದೆ ವಿರೋಧಿಗಳ ವ್ಯವಸ್ಥಿತ ಯೋಜನೆಯಿದೆ ಎಂಬ ಮಾತಿನಲ್ಲಿ ಹುರುಳಿದ್ದರೆ 2019ರ ಚುನಾವಣೆಗೆ ಮುನ್ನ ಪ್ರತಿ ಯೋಜನೆ ಮಾಡುವತ್ತ ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.