ಸಿನಿಮಾ

ಮೈಸೂರು: 8 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕಿದ ನೋಟಾ

ಸದೇಶ್ ಕಾರ್ಮಾಡ್ ಮೈಸೂರು
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೋಟಾಗೆ ಚಲಾವಣೆಯಾಗಿರುವ ಮತದಾನ ಪ್ರಮಾಣ ಕುಸಿತ ಕಂಡರೂ 8 ಕ್ಷೇತ್ರ ಗಳಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹಾಗೂ 3 ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ನೋಟಾ ಹಿಂದಿಕ್ಕಿದ್ದು, ನಂಜನಗೂಡು ಕ್ಷೇತ್ರದಲ್ಲಿ ಮೂರನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದೆ.

ಚುನಾವಣಾ ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮತದಾರರು ಆಸಕ್ತಿ ಹೊಂದಿಲ್ಲದೆ ಇದ್ದರೆ ಅಂತಹ ಮತದಾರರು ನೋಟಾ (ಮೇಲಿನ ಅಭ್ಯರ್ಥಿಗಳು ಯಾರು ಅಲ್ಲ) ಚಲಾವಣೆ ಮಾಡಬಹುದು. ಮತದಾನ ಪ್ರಮಾಣ ಹೆಚ್ಚು ಮಾಡುವ ಸಲುವಾಗಿ ಚುನಾವಣಾ ಆಯೋಗ 2013ರಲ್ಲಿ ನೋಟಾವನ್ನು ಪರಿಚಯಿಸಿತು.

2018ರ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಒಟ್ಟು 11 ಕ್ಷೇತ್ರಗಳಲ್ಲಿ 16,362 ಮತಗಳನ್ನು ಪಡೆದಿತ್ತು. 11 ಕ್ಷೇತ್ರಗಳ ಪೈಕಿ ನೋಟಾ 6 ಕ್ಷೇತ್ರಗಳಲ್ಲಿ 4ನೇ ಸ್ಥಾನ, 4 ಕ್ಷೇತ್ರಗಳಲ್ಲಿ 5ನೇ ಸ್ಥಾನ ಹಾಗೂ 1 ಕ್ಷೇತ್ರದಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಒಟ್ಟು 11,240 ಮತಗಳನ್ನು ನೋಟಾ ಪಡೆದುಕೊಂಡಿದ್ದು, 1 ಕ್ಷೇತ್ರದಲ್ಲಿ 3ನೇ ಸ್ಥಾನ, 5 ಕ್ಷೇತ್ರಗಳಲ್ಲಿ 4ನೇ ಸ್ಥಾನ, 2 ಕ್ಷೇತ್ರಗಳಲ್ಲಿ 5ನೇ ಸ್ಥಾನ, 2 ಕ್ಷೇತ್ರಗಳಲ್ಲಿ 6ನೇ ಸ್ಥಾನ, 1 ಕ್ಷೇತ್ರದಲ್ಲಿ 8ನೇ ಸ್ಥಾನ ಪಡೆದಿದೆ.

ನೋಟಾಗೆ ಎಲ್ಲೆಲ್ಲಿ ಎಷ್ಟು ಸ್ಥಾನ?

ಚಾಮರಾಜ ಕ್ಷೇತ್ರದಲ್ಲಿ ನೋಟಾ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದರು. ರಾಷ್ಟ್ರೀಯ ಪಕ್ಷವಾದ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ), ಆಪ್, ಪ್ರಾದೇಶಿಕ ಪಕ್ಷಗಳಾದ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್), ಕಂಟ್ರಿ ಸಿಟಿಜನ್ ಪಾರ್ಟಿ (ಸಿಸಿಪಿ), ಉತ್ತಮ ಪ್ರಜಾಕೀಯ ಪಾರ್ಟಿ (ಯುಪಿಜೆಪಿ), ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಷ್ಟ್ (ಎಸ್‌ಯುಸಿಐ) ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಎಸ್‌ಪಿ, ಆಪ್, ಕರ್ನಾಟಕ ಪ್ರಜಾ ಪಾರ್ಟಿ- ರೈತ ಪರ್ವ (ಕೆಪಿಪಿಆರ್), ಕೆಆರ್‌ಎಸ್, ಯುಪಿಜೆಪಿ ಪಕ್ಷಗಳು ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದಿದೆ. ಎಚ್.ಡಿ.ಕೋಟೆ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಎಸ್‌ಪಿ, ಯುಪಿಜೆಪಿ, ಸಮಾಜವಾದಿ ಜನತಾ ಪಾರ್ಟಿ-ಕರ್ನಾಟಕ (ಎಸ್‌ಎಜೆಪಿ), ಕೆಆರ್‌ಎಸ್ ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದಿದೆ.

ತಿ.ನರಸೀಪುರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಎಸ್‌ಪಿ, ಆಪ್, ಕೆಆರ್‌ಎಸ್, ಕಂಟ್ರಿ ಸಿಟಿಜನ್ ಆರ್ಟಿ (ಸಿಸಿಪಿ), ರಾಣಿ ಚೆನ್ನಮ್ಮ ಪಾರ್ಟಿ (ಆರ್‌ಸಿಎಂಪಿ), ಎಸ್‌ಎಜೆಪಿ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿ(ಐಎಂಪಿ) ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದಿದೆ. ಕೃಷ್ಣರಾಜ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆಪ್, ಬಿಎಸ್‌ಪಿ, ಐಎಂಪಿ, ಯುಪಿಜೆಪಿ, ಕೆಆರ್‌ಎಸ್, ಎಸ್‌ಯುಸಿಐ ಪಕ್ಷಗಳು ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 4ನೇ ಸ್ಥಾನ ಪಡೆದುಕೊಂಡಿದೆ.

ನರಸಿಂಹರಾಜದಲ್ಲಿ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆಪ್, ರಾಷ್ಟ್ರವಾದಿ ಸಮಾಜ ಪಾರ್ಟಿ (ಎನ್‌ಸಿಪಿ), ಯುಪಿಜೆಪಿ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ), ಕೆಆರ್‌ಎಸ್, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ ಆಫ್ ಇಂಡಿಯಾ (ಎಐಎಂಇಪಿ) ಹಾಗೂ ಪಕ್ಷೇತ್ರರನ್ನು ಹಿಂದಿಕ್ಕಿ 5ನೇ ಸ್ಥಾನ ಪಡೆದುಕೊಂಡಿದೆ. ವರುಣದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದರು. ಆಪ್, ಕನ್ನಡ ದೇಶ ಪಕ್ಷ (ಕೆಡಿಪಿ), ಕರ್ನಾಟಕ ಜನತಾ ಪಕ್ಷ (ಕೆಜೆಪಿ), ಎಸ್‌ಎಜೆಪಿ, ಯುಪಿಜೆಪಿ, ಕೆಆರ್‌ಎಸ್, ಕೆಪಿಪಿಆರ್ ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 5ನೇ ಸ್ಥಾನ ಪಡೆದಿದೆ.

ಕೆ.ಆರ್. ನಗರದಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಯುಪಿಜೆಪಿ, ಕೆಆರ್‌ಎಸ್ ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 6ನೇ ಸ್ಥಾನ ಪಡೆದುಕೊಂಡಿದೆ. ಹುಣಸೂರಿನಲ್ಲಿ ಒಟ್ಟು 13 ಅರ್ಥಿಗಳು ಸ್ಪರ್ಧಿಸಿದ್ದರು. ಕೆಆರ್‌ಎಸ್, ಯುಪಿಜೆಪಿ ಹಾಗೂ ಪಕ್ಷೇತರರನ್ನು ಹಿಂದಿಕ್ಕಿ 6ನೇ ಸ್ಥಾನ ಪಡೆದಿದೆ. ಪಿರಿಯಾಪಟ್ಟಣದಲ್ಲಿ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಯುಪಿಜೆಪಿ ಹಾಗೂ ಪಕ್ಷೇತರರನ್ನು ಹಿಂದಕ್ಕಿ 8ನೇ ಸ್ಥಾನ ಪಡೆಯಿತು.

ನಂಜನಗೂಡಿನಲ್ಲಿ 3ನೇ ಸ್ಥಾನ


ನಂಜನಗೂಡು ಕ್ಷೇತ್ರದಲ್ಲಿ ನೋಟಾ 3ನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದರ್ಶನ್ ಧ್ರುವನಾರಾಯಣ 1,09,125 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕರಾಗಿದ್ದ ಬಿ. ಹರ್ಷವರ್ಧನ್ 61,518 ಮತಗಳನ್ನು ಪಡೆದು ಸೋಲು ಕಂಡರು. 1,452 ಮತಗಳನ್ನು ಪಡೆದ ನೋಟಾ 3ನೇ ಸ್ಥಾನ ಪಡೆಯಿತು. 902 ಮತಗಳನ್ನು ಪಡೆದ ಬಿಎಸ್‌ಪಿಯ ಶ್ರೀಕಂಠ 4ನೇ ಸ್ಥಾನ ಪಡೆದರು. ಇಲ್ಲಿ ಆಪ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ), ಕೆಆರ್‌ಎಸ್ ಹಾಗೂ ಪಕ್ಷೇತರರನ್ನು ನೋಟಾ ಹಿಂದಿಕ್ಕಿದೆ. ಕಣದಲ್ಲಿ ನೋಟಾ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಇದ್ದರು.

8 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಹಿನ್ನಡೆ

ಕೃಷ್ಣರಾಜ, ನರಸಿಂಹರಾಜ, ಚಾಮರಾಜ, ಚಾಮುಂಡೇಶ್ವರಿ, ವರುಣ, ನಂಜನಗೂಡು, ಎಚ್.ಡಿ. ಕೋಟೆ, ತಿ.ನರಸೀಪುರದಲ್ಲಿ ನೋಟಾ ರಾಷ್ಟ್ರೀಯ ಪಕ್ಷಗಳನ್ನೂ ಹಿಂದಿಕ್ಕಿದೆ. ಕೆ.ಅರ್. ನಗರ, ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹಿಂದಿಕ್ಕಿದೆ. ಈ ಬಾರಿಯೂ ನೋಟಾ ಯಾವುದೇ ಕ್ಷೇತ್ರದಲ್ಲಿ ಕೊನೆಯ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ.

Latest Posts

ಲೈಫ್‌ಸ್ಟೈಲ್