More

    ‘ಇಂಡಿಯಾ’ ಬದಲಿಗೆ ‘ಭಾರತ’ ಪದ ಬಳಸುತ್ತಿಲ್ಲ: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಸ್ಪಷ್ಟನೆ

    ಮೈಸೂರು: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮದಲ್ಲಿ ‘ಇಂಡಿಯಾ’ ಪದದ ಬದಲಿಗೆ ‘ಭಾರತ’ ಪದವನ್ನು ಬಳಕೆ ಮಾಡುತ್ತಿಲ್ಲ. ಈ ಕುರಿತು ಗೊಂದಲ ಬೇಡ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದರು.

    ಸಂವಿಧಾನದಲ್ಲಿ ಇಂಡಿಯಾ ಮತ್ತು ಭಾರತ ಎರಡೂ ಪದಗಳ ಉಪಯೋಗವಾಗಿದೆ. ಇಂಡಿಯಾ ಬದಲಿಗೆ ಭಾರತ ಎಂದು ಬದಲಾವಣೆ ಮಾಡಿಲ್ಲ. ಆದರೆ ಸಾಂದರ್ಭಿಕವಾಗಿ ಎರಡೂ ಪದಗಳು ಪಠ್ಯಕ್ರಮದಲ್ಲಿ ಇವೆ. ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲಾಗಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇಂಡಿಯಾ ಬದಲಿಗೆ ಭಾರತ ಎಂಬ ಪದ ಬಳಕೆ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಯಾವುದೇ ನೀತಿಯನ್ನೂ ರೂಪಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಈ ವಿಷಯದ ಕುರಿತು ಎನ್‌ಸಿಇಆರ್‌ಟಿ ಸಭೆಯಲ್ಲಿ ಚರ್ಚೆಯಾಗಿರುವುದು ನಿಜ. ಯಾರೋ ಒಬ್ಬರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಅಷ್ಟುಮಾತ್ರಕ್ಕೆ ಅದು ಎನ್‌ಸಿಇಆರ್‌ಟಿ ನಿಲುವು ಮತ್ತು ತೀರ್ಮಾನವಾಗಲ್ಲ. ಹೀಗಾಗಿ, ಹಿಂದಿನಂತೆ ಈ ಎರಡು ಪದಗಳು ಪಠ್ಯಕ್ರಮದಲ್ಲಿ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ತಿಳಿಸಿದರು.


    ಎನ್‌ಸಿಇಆರ್‌ಟಿ ಪಠ್ಯಕ್ರಮದಿಂದ ಗುಜರಾತ್ ಗಲಭೆ, ಬಾಬ್ರಿ ಮಸೀದಿ ಧ್ವಂಸದ ವಿಷಯ ತೆಗೆದಿರುವ ಕುರಿತು ಪ್ರತಿಕ್ರಿಯೆ ನೀಡಲ್ಲ. ಈ ಬಗ್ಗೆ ವ್ಯಕ್ತವಾಗಿರುವ ರಾಜಕೀಯ ನಾಯಕರು ಪ್ರತಿಕ್ರಿಯೆಗಳು ಅವರ ದೃಷ್ಟಿಕೋನದಲ್ಲಿವೆ. ಅದಕ್ಕೆ ಉತ್ತರಿಸುವ ಅಗತ್ಯ ಇಲ್ಲ ಎಂದು ಚುಟುಕಾಗಿ ಉತ್ತರಿಸಿದರು.


    ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ನೀಟ್-2024ರ ಪರೀಕ್ಷೆಯಲ್ಲಿ ತಪ್ಪು ಪ್ರಶ್ನೆಗಳು ನುಸುಳಿರುವುದಕ್ಕೆ ಇದನ್ನು ಆಯೋಜಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಹೊಣೆಯೇ ಹೊರತು, ಎನ್‌ಸಿಇಆರ್‌ಟಿ ಅಲ್ಲ ಎಂದು ಹೇಳಿದರು.


    ಹಳೇ ಪಠ್ಯಕ್ರಮ ಆಧರಿಸಿ ನೀಟ್ ಪರೀಕ್ಷೆಗಳನ್ನು ಸಿದ್ಧಪಡಿಸಿರುವುದರಿಂದ ಈ ಅವಾಂತರವಾಗಿದೆ. ಇದಕ್ಕೆ ಎನ್‌ಸಿಇಆರ್‌ಟಿ ಜವಾಬ್ದಾರಿಯಲ್ಲ. 2020ರ ಆಚೆಗೆ ಹೊಸ ಪಠ್ಯಕ್ರಮ ಆಧಾರಿತ ಪುಸ್ತಕ ಖುದ್ದು ಪರಿಶೀಲನೆ ಮಾಡಬಹುದು. ಈಗಾಗಲೇ ಆನ್‌ಲೈನ್ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಈ ಪುಸ್ತಕಗಳನ್ನು ಗಮನಿಸಬಹುದು. ಅದರಲ್ಲಿ ಅಪೂರ್ಣ, ತಪ್ಪು ಮಾಹಿತಿ ಇಲ್ಲ ಎಂದು ತಿಳಿಸಿದರು.

    See also  ರಾಜ್ಯದಲ್ಲಿ 175ಕ್ಕೇರಿದ ಕರೊನಾ ಸೋಂಕಿತರ ಸಂಖ್ಯೆ


    ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್‌ಇಪಿ) ಅಳವಡಿಕೆ ಆಯಾ ರಾಜ್ಯಗಳಿಗೆ ಬಿಟ್ಟಿದ್ದು. ಇದಕ್ಕೆ ಕರ್ನಾಟಕ, ಕೇರಳ ವಿರೋಧಿಸಿವೆ. ಆದರೆ, ಇದಕ್ಕೂ ಎನ್‌ಸಿಇಆರ್‌ಟಿ ಸಂಬಂಧ ಇಲ್ಲ. ರಾಷ್ಟ್ರಮಟ್ಟದ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಎನ್‌ಇಪಿ ಆಧಾರದಲ್ಲೇ ಪಠ್ಯಕ್ರಮ ರಚನೆ ಮಾಡಲಾಗಿದೆ. ಈಗಾಗಲೇ 29 ರಾಜ್ಯಗಳು ಎನ್‌ಸಿಇಆರ್‌ಟಿ ಪಠ್ಯಕ್ರಮ ಆಧಾರದಲ್ಲೇ ಶಾಲಾ ಹಂತದ ಕಲಿಕೆ ನಡೆಯುತ್ತಿದೆ ಎಂದರು.


    ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಲು ಪಠ್ಯಕ್ರಮದಲ್ಲಿ ಕೆಲ ಬದಲಾವಣೆ ಮಾಡಲಾಗುತ್ತಿದೆ. ಜತೆಗೆ, ವಿದ್ಯಾರ್ಥಿಸ್ನೇಹಿ ಮತ್ತು ಅವರ ಆಕರ್ಷಿಸಲು ಕಲಿಕಾ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದರು.


    6ನೇ ತರಗತಿಗೆ ಬ್ರಿಜ್ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಅದಕ್ಕಾಗಿ ಒಂದು ತಿಂಗಳ ತರಬೇತಿಯನ್ನು ಶಿಕ್ಷಕರಿಗೆ ನೀಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts