ಭಾರತ-ಪಾಕಿಸ್ತಾನವನ್ನು ಬೆಸೆದುಬಿಡುವ ಉದ್ದೇಶದಿಂದೇನೂ ನಾವು ಮದುವೆಯಾಗಲಿಲ್ಲ…

ನವದೆಹಲಿ: ಭಾರತ ಮತ್ತು ಪಾಕಿಸ್ತಾನದಲ್ಲಿ ಹಲವರು ಹೀಗೆ ಭಾವಿಸಿಕೊಂಡಿದ್ದಾರೆ… ಏನೆಂದರೆ, ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು (ಸಾನಿಯಾ ಮಿರ್ಜಾ – ಶೋಯೆಬ್​ ಮಲೀಕ್​) ಮದುವೆಯಾದೆವು ಎಂದು. ಆದರೆ, ನಮ್ಮ ಉದ್ದೇಶವೇನೂ ಹಾಗೆ ಇರಲಿಲ್ಲ ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಭಾರತೀಯ ಟೆನಿಸ್​ ತಾರೆ. ಪಾಕಿಸ್ತಾನದ ಕ್ರಿಕೆಟರ್​ ಶೋಯೆಬ್​ ಮಲೀಕ್​ ಅವರನ್ನು ವಿವಾಹವಾಗಿದ್ದ ಅವರು, ಸದ್ಯ ಏಳು ತಿಂಗಳ ಗರ್ಭಿಣಿ. ಈ ಹಿನ್ನೆಲೆಯಲ್ಲಿ ಆಂಗ್ಲ ಪತ್ರಿಕೆಯೊಂದು ಸಾನಿಯಾ ಮಿರ್ಜಾ ಅವರ ಸಂದರ್ಶನ ಮಾಡಿದೆ. ಈ ವೇಳೆ ಅವರು ಸಾಕಷ್ಟು ವಿಚಾರಗಳ ಕುರಿತು ಮಾತನಾಡಿದ್ದಾರೆ.

ಅವರಿಬ್ಬರೂ ಭಾರತ ಮತ್ತು ಪಾಕಿಸ್ತಾನವನ್ನು ಭಾವನಾತ್ಮಕವಾಗಿ ಬೆಸೆಯಲು ಮಧುವೆಯಾಗಿದ್ದಾರೆ ಎಂಬ ಭಾವನೆ ವಿವಾಹದ ಸಂದರ್ಭದಲ್ಲಿ ಮತ್ತು ನಂತರದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಸಾನಿಯಾ ಮಿರ್ಜಾ ಅಂಥ ಉದ್ದೇಶವೇನೂ ನಮ್ಮಲ್ಲಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾತನಾಡಿರುವ ಅವರು, ” ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಲೆಲ್ಲ ಅಲ್ಲಿನ ಜನ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದರು. ಆ ಪ್ರೀತಿ ನನಗೆ ಅಪಾರವಾಗಿ ಹಿಡಿಸಿತ್ತು. ಅಲ್ಲಿನ ಜನ ನನ್ನನ್ನು ಬಾಬಿ (ಅತ್ತಿಗೆ) ಎಂದು ಕರೆಯುತ್ತಾರೆ. ಅಲ್ಲದೆ, ಬಹುವಾಗಿ ಗೌರವಿಸುತ್ತಾರೆ. ಆ ಪ್ರೀತಿ ನೇರವಾಗಿ ನನಗೆ ಸಿಗುತ್ತಿರುವುದಲ್ಲ. ಬದಲಿಗೆ ನನ್ನ ಪತಿ, ಕ್ರಿಕೆಟರ್​ ಶೋಯಬ್​ ಮಲ್ಲೀಕ್​ ಅವರ ಮೇಲಿನ ಗೌರವದಿಂದ ನನಗೆ ಆ ಮಟ್ಟಿಗಿನ ಪ್ರೀತಿ ಸಿಗುತ್ತಿತ್ತು. ಹಾಗೆಯೇ ಶೋಯಬ್​ ಭಾರತಕ್ಕೆ ಬಂದಾಗ ಅವರಿಗೂ ಇಲ್ಲಿ ಪ್ರೀತಿ , ಗೌರವ ಸಿಗುತ್ತಿತ್ತು,” ಎಂದು ಹೇಳಿಕೊಂಡಿದ್ದಾರೆ.

ಭಾರತದ ಟೆನಿಸ್​ ತಾರೆ ಸಾನಿಯಾ ಮತ್ತು ಪಾಕಿಸ್ತಾನದ ಕ್ರಿಕೆಟರ್​ ಶೋಯಬ್​ ಮಲೀಕ್​ ಅವರ ಮಗು ಭಾರತ ಮತ್ತು ಪಾಕಿಸ್ತಾನದ ಪ್ರೇಮದ ಕೂಸು ಎಂದು ಜನ ಕರೆಯುವ ಬಗ್ಗೆ ಏನೆನ್ನುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಅಂತ ಉಲ್ಲೇಖಗಳ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.