ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲು ಇದು ಸೂಕ್ತ ಸಮಯವಲ್ಲ: ಮಮತಾ ಬ್ಯಾನರ್ಜಿ

ಕೋಲ್ಕತಾ: ವಿಪಕ್ಷಗಳು ಪ್ರಧಾನಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಇದು ಸೂಕ್ತ ಸಮಯವಲ್ಲ. ಪ್ರತಿಪಕ್ಷಗಳ ಮೈತ್ರಿಯು ತೆಗೆದುಕೊಂಡ ಒಮ್ಮತದ ನಿರ್ಧಾರವನ್ನು ತನ್ನ ಪಕ್ಷ ಒಪ್ಪಿಕೊಳ್ಳುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಒಂಟಿಯಾಗಿಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಇದಕ್ಕಾಗಿ ಯಾವುದೇ ರಾಜಕೀಯ ಪಕ್ಷಗಳು ಒಟ್ಟಿಗೆ ಸೇರಿದರೂ ನಾವು ಒಪ್ಪಿಕೊಳ್ಳುತ್ತೇವೆ. ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ಇದು ಸೂಕ್ತ ಸಮಯವಾಗಿಲ್ಲ. ಹಾಗಾಗಿ ಒಳ್ಳೆಯ ಬದಲಾವಣೆಯನ್ನುಂಟು ಮಾಡುವ ದಿನಕ್ಕಾಗಿ ನಾವು ಎದುರು ನೋಡುತ್ತೇವೆ ಎಂದರು.

ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರ ನಿರ್ಧಾರವನ್ನು ಮಮತಾ ವಿರೋಧಿಸಿದ್ದರು. ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಈಗಲೇ ಈ ರೀತಿಯ ಘೋಷಣೆ ಮಾಡುವುದು ಮೈತ್ರಿಯಲ್ಲಿ ಒಡಕುಂಟು ಮಾಡಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದ್ದರು.

ಉತ್ತರಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿಯೇ ಕಾಂಗ್ರೆಸ್‌ನ್ನು ಬಿಟ್ಟು ಬಹುಜನ ಸಮಾಜ ಪಾರ್ಟಿ, ಸಮಾಜವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಲೋಕ್‌ ದಳ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿಯನ್ನು ದೂರವಿಡಲು ಸ್ಥಳೀಯವಾಗಿ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದನ್ನು ಸ್ವಾಗತಿಸಿದರು.

ಸ್ಥಳೀಯವಾಗಿ ಮೈತ್ರಿಯು ಅಗತ್ಯವಾಗಿದೆ. ಅದನ್ನು ನಾವು ಪ್ರಶಂಸಿಸುತ್ತೇವೆ. ಕಾಂಗ್ರೆಸ್‌ ಅಲ್ಲಿ ಮೈತ್ರಿಯಿಂದ ಹೊರಗಿದ್ದರೆ ಏನಾಗುತ್ತದೆ? ಅಲ್ಲಿ ಕಾಂಗ್ರೆಸ್‌ ಒಂಟಿಯಾಗಿ ಹೋರಾಡುವ ಕೆಲವು ಸ್ಥಳಗಳಿದ್ದರೆ, ಮತ್ತೆ ಕೆಲವು ಕಡೆ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿವೆ. ಆದ್ದರಿಂದ ಇದು ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಅಗತ್ಯತೆಗಳನ್ನು ಅವಲಂಬಿಸಿದೆ ಎಂದು ತಿಳಿಸಿದರು. (ಏಜೆನ್ಸೀಸ್)