ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಇನ್ನೂ ಸಿಕ್ಕಿಲ್ಲ!

ಹಾವೇರಿ: ಬಸವಾದಿ ಶಿವಶರಣರು ಅರಿವಿನ ಜ್ಯೋತಿಯ ಆರಾಧಕರು, ಅನ್ವೇಷಕರು, ಬೆಳಕಿನ ಅನ್ವೇಷಣೆಯೊಂದಿಗೆ ಜೀವನ ಸಾಗಿಸಿದವರಾಗಿದ್ದಾರೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು ಶ್ರೀ ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಮುರುಘೕಂದ್ರ ಮಹಾಶಿವಯೋಗಿಗಳ ಸ್ಮರಣೋತ್ಸವ ಅಂಗವಾಗಿ ಶನಿವಾರ ರಾತ್ರಿ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವ- 2018ರ ‘ಆರದಿರಲಿ ಅರಿವಿನ ದೀಪ ಅರುಳುತಿರಲಿ ಅನುಭವ ಪುಷ್ಪ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಅವಧಿಯಲ್ಲಿ ಬಸವಾದಿ ಶರಣರು ಹೊತ್ತಿಸಿದ ಜ್ಯೋತಿಯ ಪ್ರಕಾಶನವನ್ನು ಎಲ್ಲರೂ ಆಂತರ್ಯದಲ್ಲಿ ಅಳವಡಿಸಿಕೊಳ್ಳಬೇಕಿದೆ. ಅಂದು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರಥಮ ಬಾರಿಗೆ ಧಾರ್ವಿುಕ ಸ್ವಾತಂತ್ರ್ಯ ನೀಡಲಾಗಿತ್ತು. ಜತೆಗೆ ವಿಚಾರಗಳ ವಿನಿಮಯಕ್ಕೆ ಸ್ವಾತಂತ್ರ್ಯ ಒದಗಿಸಲಾಗಿತ್ತು. ಆದರೆ, ಇಂತಹ ದೇಶದಲ್ಲಿ ಅನೇಕ ಮಹಿಳೆಯರು ಕೆಲ ಧರ್ಮಗಳಲ್ಲಿ ಧಾರ್ವಿುಕ ಸ್ವಾತಂತ್ರ್ಯಂದ ವಂಚಿತರಾಗಿದ್ದಾರೆ. ಸಂಸತ್​ನಲ್ಲೂ ಮಹಿಳೆಯರಿಗೆ ಸಮರ್ಪಕ ಸ್ಥಾನಮಾನ ಲಭಿಸಿಲ್ಲ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಬಸವರಾಜ ಸಾದರ ಮಾತನಾಡಿ, ಶರಣರು ಅಂಧಕಾರ ತೊಲಗಿಸಲು ಜ್ಯೋತಿ ಬೆಳಗಿಸಿದರು. ಕೆಲ ಮೂರ್ಖರು ಆ ಜ್ಯೋತಿಯನ್ನು ಬೆಂಕಿಯಾಗಿ ಬಳಸುತ್ತಿದ್ದಾರೆ. ರಾಜರ ಕಾಲದ ಆಡಳಿತಾವಧಿಯಲ್ಲಿಯೇ ಸಮಾನತೆ, ಶೋಷಣೆಯ ವಿರುದ್ಧ ವಚನಗಳ ಮುಖೇನ ವಚನಕಾರರು, ಶರಣರು ಪ್ರತಿಭಟನೆ ಮಾಡಿದ್ದಾರೆ. ಇವುಗಳನ್ನು ಅರಿತು ಜೀವನ ಸಾಗಿಸಬೇಕು ಎಂದರು.

ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ನರಸಿಪುರ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬೆಂಗಳೂರಿನ ಮಾತನಾಡುವ ಬೊಂಬೆ ಖ್ಯಾತಿಯ ಇಂದುಶ್ರೀ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ, ಇಂದೂಧರ ಯರೇಶಿಮಿ, ಡಾ. ಮೃತ್ಯುಂಜಯ ತುರಕಾಣಿ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಬೆಂಗಳೂರಿನ ಪೂಜಾ ಮತ್ತು ಪ್ರತೀಕ ಆಚಾರ್ಯ ನೆರಳು ಬೆಳಕಿನ ಆಟ ಹಾಗೂ ಎಸ್​ಜೆಎಂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.