ಪಾಕ್ ಪ್ರಧಾನಿ ಇಮ್ರಾನ್ ಖಾನ್​ ಭೂಗೋಳ ಶಾಸ್ತ್ರದಲ್ಲಿ ಮಾತ್ರವಲ್ಲ ಗಣಿತದಲ್ಲೂ ಬಲು ದುರ್ಬಲ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಅಸಂಬದ್ಧ ಹೇಳಿಕೆಗಳಿಂದ ಪೇಚಿಗೆ ಸಿಲುಕುತ್ತಿರುವ ಪಾಕ್ ರಾಜಕೀಯ ನಾಯಕರ ಸಾಲಿಗೆ ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೇರ್ಪಡೆಯಾಗಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಕಾಶ್ಮೀರದ ಸ್ಥಿತಿಗತಿ ಕುರಿತ ಪಾಕಿಸ್ತಾನದ ನಿಲುವಿಗೆ 58 ರಾಷ್ಟ್ರಗಳು ಬೆಂಬಲ ನೀಡಿವೆ ಎಂದಿದ್ದಾರೆ. ಈ ಹೇಳಿಕೆಯೇ ಇದೀಗ ಇಮ್ರಾನ್ ಖಾನ್​ರನ್ನು ಪೇಚಿಗೆ ಸಿಲುಕಿಸಿರುವುದು. ಏಕೆಂದರೆ ಯುಎನ್​ಎಚ್​ಆರ್​ಸಿ ಅಧಿಕೃತ ವೆಬ್​ಸೈಟ್​​ ಪರಿಶೀಲಿಸಿದಾಗ ತಿಳಿದುಬಂದಿದ್ದೇನೆಂದರೆ ಯುಎನ್​ಎಚ್​ಆರ್​ಸಿ ಸದಸ್ಯ ರಾಷ್ಟ್ರಗಳ ಸಂಖ್ಯೆ 47 ಮಾತ್ರ.

“ಸೆಪ್ಟೆಂಬರ್ 10 ರಂದು ನಡೆದ ಯುಎನ್​ಎಸ್​ಸಿ ಸಭೆಯಲ್ಲಿ ಕಾಶ್ಮೀರ ಜನತೆ ಮೇಲೆ ಭಾರತೀಯ ಸೇನೆ ದಬ್ಬಾಳಿಕೆ ನಿಲ್ಲಿಸಲು, ನಿರ್ಬಂಧ ತೆರವುಗೊಳಿಸಲು, ಕಾಶ್ಮೀರಿಗಳ ಹಕ್ಕುಗಳು ಗೌರವಿಸಲು ಮತ್ತು ರಕ್ಷಿಸಲು ಹಾಗೂ ಯುಎನ್​ಎಸ್​ಸಿ ನಿರ್ಣಯಗಳ ಮೂಲಕ ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಮಂಡಿಸಿದ ನಿಲುವಿಗೆ ಬೆಂಬಲಿಸಿದ 58 ಯುಎನ್​ಎಸ್​​ಸಿ ರಾಷ್ಟ್ರಗಳನ್ನು ಪ್ರಶಂಸಿಸುತ್ತೇನೆ” ಎಂದು ಗುರುವಾರ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇಮ್ರಾನ್ ಖಾನ್ ಪ್ರಕಾರ ಪಾಕಿಸ್ತಾನ 47 ರಾಷ್ಟ್ರಗಳಿರುವ ಯುಎನ್​ಎಚ್​ಆರ್​ಸಿಯಲ್ಲಿ 58 ರಾಷ್ಟ್ರಗಳ ಬೆಂಬಲ ಹೇಗೆ ಗಳಿಸಿತು ಎಂಬುದೇ ಇದೀಗ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಅಲ್ಲದೇ ಇಮ್ರಾನ್ ಖಾನ್​ರ ಬುದ್ಧಿವಂತಿಕೆಯನ್ನು ಪ್ರಶ್ನಿಸುವಂತಿದೆ. ಭೂಗೋಳಶಾಸ್ತ್ರವಲ್ಲದೇ ಗಣಿತಶಾಸ್ತ್ರದಲ್ಲಿ ಇಮ್ರಾನ್ ಖಾನ್ ದುರ್ಬಲ ಎಂಬುದು ಟ್ವೀಟ್​ನಿಂದ ತಿಳಿದು ಬಂದಿದೆ.

ಕಳೆದ ತಿಂಗಳು ಇರಾನ್ ಪ್ರವಾಸ ಕೈಗೊಂಡಿದ್ದಾಗ ಇಮ್ರಾನ್ ಖಾನ್ ನೀಡಿದ್ದ ಹೇಳಿಕೆ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೇಚಿಗೆ ಸಿಲುಕಿಸಿತ್ತು. ಜಪಾನ್ ಮತ್ತು ಜರ್ಮನಿ ಪ್ರಾದೇಶಿಕ ನೆರೆಹೊರೆ ರಾಷ್ಟ್ರಗಳಾಗಿದ್ದು ಪರಸ್ಪರ ಗಡಿಯನ್ನು ಹಂಚಿಕೊಂಡಿವೆ. ಎರಡನೇ ವಿಶ್ವಯುದ್ಧದ ನಂತರ ಎರಡೂ ದೇಶಗಳು ಗಡಿ ಪ್ರದೇಶದಲ್ಲಿ ಜಂಟಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದ್ದವು ಎಂದಿದ್ದರು.

Leave a Reply

Your email address will not be published. Required fields are marked *