ಸೌರ ವಿದ್ಯುತ್ ಉತ್ಪಾದನೆಗೆ ಹಿನ್ನಡೆ

ಸಂತೋಷ ವೈದ್ಯ ಹುಬ್ಬಳ್ಳಿ

ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಸೌರ ವಿದ್ಯುತ್ ಉತ್ಪಾದನೆ ಪ್ರಾಜೆಕ್ಟ್​ಗೆ ಹಿನ್ನೆಡೆ ಆಗಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ) ನಿಗದಿಪಡಿಸಿರುವ ಸೌರ ವಿದ್ಯುತ್ ಖರೀದಿ ದರಕ್ಕೆ ಸೌರ ವಿದ್ಯುತ್ ಉತ್ಪಾದಕರು (ಖಾಸಗಿ ಕಂಪನಿಗಳು) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ 2ನೇ ಬಾರಿ ಕರೆಯಲಾದ ಟೆಂಡರ್​ಗೆ ಯಾರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಇದಾಗಿದೆ. ಆದರೆ, ಕೆಇಆರ್​ಸಿ ನಿಲುವು ಈ ಪ್ರಾಜೆಕ್ಟ್ ಅನ್ನು ಕೈ ಬಿಡುವ ಸ್ಥಿತಿಗೆ ತಂದು ನಿಲ್ಲಿಸಿದೆ. ಕೆಇಆರ್​ಸಿ ಪ್ರತಿ ಯೂನಿಟ್ ವಿದ್ಯುತ್ ಖರೀದಿ ದರವನ್ನು 3.57 ರೂ. ಗೆ ನಿಗದಿಪಡಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ ಎಂಬುದು ಸೌರ ವಿದ್ಯುತ್ ಉತ್ಪಾದಕ ಸಂಸ್ಥೆಗಳ ಅಳಲು. ಪ್ರತಿ ಯೂನಿಟ್​ಗೆ 6.52 ರೂ. ನೀಡಬೇಕೆಂದು ಇವರು ಕೇಳಿದ್ದರು.

ಮೊದಲ ಬಾರಿ ಟೆಂಡರ್ ಕರೆದಾದ ಖರೀದಿ ದರಕ್ಕೆ ಸಂಬಂಧಿಸಿದಂತೆ ಅಪಸ್ವರ ಎದ್ದಿದ್ದರೆ, 2ನೇ ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಭಾಗವಹಿಸಲಿಲ್ಲ. ಕೆಇಆರ್​ಸಿ ನಿಗದಿಪಡಿಸಿದ ದರ ಹಾಗೂ ಸೌರ ವಿದ್ಯುತ್ ಉತ್ಪಾದಕ ಸಂಸ್ಥೆಗಳು ಕೇಳುವ ದರಗಳ ನಡುವಿನ ವ್ಯತ್ಯಾಸದ ಹಣವನ್ನು ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಡಿ ತುಂಬಿಕೊಡುವ ಷರತ್ತಿನೊಂದಿಗೆ ಟೆಂಡರ್ ಕರೆಯಾಗಿತ್ತು. ಆದರೆ, ಈ ಪ್ರಸ್ತಾವನೆಗೆ ಯಾರೊಬ್ಬರೂ ಆಸಕ್ತಿ ತೋರಿಸಿಲ್ಲ.

‘2ನೇ ಬಾರಿ ಕರೆಯಲಾದ ಟೆಂಡರ್​ನ್ನು ಫೆ. 15ರಂದು ತೆರೆಯಲಾಗಿತ್ತು. ಆದರೆ, ಯಾರೊಬ್ಬರೂ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಈಗಿರುವ ಪಿಪಿಪಿ ಮಾದರಿ ಕೈ ಬಿಟ್ಟು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿಯೇ ಸೌರ ವಿದ್ಯುತ್ ಉತ್ಪಾದನೆ ಪ್ರಾಜೆಕ್ಟ್​ನ್ನು ಅನುಷ್ಠಾನಕ್ಕೆ ತರುವ ಯೋಚನೆ ಇದೆ’ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಎಲ್ಲೆಲ್ಲಿ ಘಟಕ..: ಪಾಲಿಕೆಯ ಹುಬ್ಬಳ್ಳಿ ಕೇಂದ್ರ ಕಚೇರಿ, ಧಾರವಾಡ ಕಚೇರಿ, ವಲಯ ಕಚೇರಿಗಳು, ಲ್ಯಾಮಿಂಗ್ಟನ್ ಶಾಲಾ ಕಟ್ಟಡ, ಕನ್ನಡ ಭವನ, ಸಾಂಸ್ಕೃತಿಕ ಭವನ, ಧಾರವಾಡದ ಕಲಾ ಭವನ ಇತ್ಯಾದಿ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಕರೆಯಲಾಗಿತ್ತು. ಆಯಾ ಕಚೇರಿಗಳ ದೈನಂದಿನ ಉಪಯೋಗಕ್ಕೆ ಸೌರಶಕ್ತಿಯನ್ನು ಬಳಸಲು ನಿರ್ಧರಿಸಲಾಗಿತ್ತು.

ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಸೌರ ವಿದ್ಯುತ್ ಉತ್ಪಾದನೆಗೆ 129 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದರಿಂದ ಪಾಲಿಕೆಗೆ ವಿದ್ಯುತ್ ವೆಚ್ಚದಲ್ಲಿ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗಲಿದೆ.

ಏನಿದು ಪ್ರಾಜೆಕ್ಟ್?: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ಸರ್ಕಾರಿ ಇಲಾಖೆಗಳ ಸ್ವಂತ ಕಟ್ಟಡಗಳ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿ ಇದಕ್ಕಾಗಿ ಸರ್ವೆ ಕಾರ್ಯ ನಡೆಸಲಾಗಿತ್ತು. 3 ತಿಂಗಳ ಸರ್ವೆ ಬಳಿಕ ಈ ಪ್ರಾಜೆಕ್ಟ್​ಗೆ ಅಂತಿಮ ರೂಪ ನೀಡಲಾಗಿತ್ತು. ಸರ್ವೆ ವೇಳೆ 180 ಸರ್ಕಾರಿ ಕಚೇರಿ ಕಟ್ಟಡಗಳನ್ನು ಪರಿಶೀಲಿಸಲಾಗಿತ್ತು. ಅಂತಿಮವಾಗಿ ನಿತ್ಯ 1 ಕಿಲೋ ವ್ಯಾಟ್​ಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಅನುಕೂಲಕರವಾದ ಸ್ಥಳ ಇರುವ 33 ಕಟ್ಟಡಗಳನ್ನು ಗುರುತಿಸಲಾಗಿತ್ತು. ಇದರಲ್ಲಿ ಹು-ಧಾ ಮಹಾನಗರ ಪಾಲಿಕೆ ಒಡೆತನದ 12 ಕಚೇರಿಗಳ ಕಟ್ಟಡಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ನಿತ್ಯ 4.53 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಳ್ಳಲಾಗಿತ್ತು.