ಎಎಪಿಗೆ ರಾಜೀನಾಮೆ ನೀಡಿದ್ದ ಅಶುತೋಷ್‌ಗೆ ಬಿಡುಗಡೆಯಿಲ್ಲ ಅಂದ್ರು ಕೇಜ್ರಿವಾಲ್‌

ನವದೆಹಲಿ: ವೈಯಕ್ತಿಕ ಕಾರಣಗಳಿಂದಾಗಿ ಆಮ್‌ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಪಕ್ಷದ ಹಿರಿಯ ಮುಖಂಡ ಅಶುತೋಷ್‌ ಅವರ ರಾಜೀನಾಮೆಯನ್ನು ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ತಿರಸ್ಕರಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕೇಜ್ರಿವಾಲ್‌, ಅದು ಹೇಗಾದರು ನಿಮ್ಮ ರಾಜೀನಾಮೆಯನ್ನು ನಾವು ಅಂಗೀಕರಿಸಲಾಗುತ್ತದೆ? ಅದು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ನಾವೆಲ್ಲರೂ ನಿಮ್ಮನ್ನು ತುಂಬ ಪ್ರೀತಿಸುತ್ತೇವೆ ಸರ್‌ ಎಂದು ನಯವಾಗಿ ಅಶುತೋಷ್‌ ಅವರ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ.

ಇನ್ನು 2014ರಲ್ಲಿ ಪತ್ರಿಕೋದ್ಯಮ ವೃತ್ತಿಯಿಂದ ಎಎಪಿಗೆ ಸೇರಿದ್ದ ಅಶುತೋಷ್‌ ಅವರು ಟ್ವೀಟ್‌ ಮಾಡುವ ಮೂಲಕ ಎಎಪಿಗೆ ತಮ್ಮ ರಾಜೀನಾಮೆಯನ್ನು ನೀಡುತ್ತಿರುವ ಕುರಿತು ಘೋಷಿಸಿದ್ದರು.

ಎಲ್ಲ ಪ್ರಯಾಣಕ್ಕು ಕೊನೆ ಎಂಬುದಿದೆ. ಎಎಪಿಯೊಂದಿಗಿನ ನನ್ನ ಸುಂದರ ಅಥವಾ ಕ್ರಾಂತಿಕಾರಕ ಪಯಣ ಕೊನೆಗೊಳ್ಳುತ್ತಿದೆ. ಪಕ್ಷಕ್ಕೆ ನಾನು ರಾಜೀನಾಮೆಯನ್ನು ನೀಡುತ್ತಿದ್ದು, ರಾಜೀನಾಮೆಯನ್ನು ಸ್ವೀಕರಿಸುವಂತೆ ಮನವಿ ಮಾಡುತ್ತಿರುವೆ. ಇದು ಕೇವಲ ನನ್ನ ತೀರ ವೈಯಕ್ತಿಕ ಕಾರಣಕ್ಕಾಗಿದ್ದು, ನನಗೆ ಸಹಕಾರ ನೀಡಿದ ಪಕ್ಷದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದರು.

ಎರಡನೇ ಟ್ವೈಟ್‌ನಲ್ಲಿ, ಮಾಧ್ಯಮ ಮಿತ್ರರೇ, ದಯಮಾಡಿ ನನ್ನ ಖಾಸಗಿತನವನ್ನು ಗೌರವಿಸಿ. ಈ ಕುರಿತಾಗಿ ನಾನು ಏನನ್ನು ಮಾತನಾಡಲಾರೆ. ದಯವಿಟ್ಟು ಸಹಕರಿಸಿ ಎಂದಿದ್ದರು.

ಅಶುತೋಷ್‌ ಅವರ ಆಪ್ತ ಮೂಲಗಳ ಪ್ರಕಾರ, ಇದು ಹಠಾತ್‌ನೆ ಕೈಗೊಂಡಿರುವ ನಿರ್ಧಾರವಲ್ಲ. ಇದೊಂದು ದೀರ್ಘಕಾಲದ ನಿರ್ಧಾರ. ಕಳೆದ ಮೂರು ತಿಂಗಳಿಂದ ವಿದೇಶದಲ್ಲಿದ್ದು ವಿಶ್ರಾಂತಿ ತೆಗೆದುಕೊಂಡಿದ್ದು, ಸದ್ಯಕ್ಕೆ ಅವರು ಪುಸ್ತಕವೊಂದನ್ನು ಬರೆಯಲು ಸಮಯ ಬೇಕಾಗಿದೆ ಎಂದು ಪಕ್ಷಕ್ಕೆ ತಿಳಿಸಿದ್ದಾರೆ ಎಂದು ತಿಳಿಸಿದೆ. 53 ವರ್ಷದ ಅಶುತೋಷ್‌ ಅವರು ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದಾರೆ.

ಅಶುತೋಷ್‌ ಅವರ ಟ್ವೀಟ್‌ಗೆ ಮೊದಲು ಪ್ರತಿಕ್ರಿಯಿಸಿದ ಎಎಪಿ, ಗೋಪಾಲ್‌ ರೈ, ಅಶುತೋಷ್‌ ಅವರ ನಿರ್ಧಾರ ನೋವನ್ನುಂಟು ಮಾಡಿದೆ. ಈ ಕುರಿತಾಗಿ ಚರ್ಚಿಸಲಾಗುತ್ತದೆ ಎಂದಿದ್ದರು. ಹಿರಿಯ ನಾಯಕ ಸಂಜಯ್‌ ಸಿಂಗ್‌ ಕೂಡ, ಅವರು ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವಂತೆ ಪಕ್ಷ ಪ್ರಯತ್ನಿಸುತ್ತದೆ ಎಂದಿದ್ದರು. (ಏಜೆನ್ಸೀಸ್)