ಅನುಷ್ಠಾನಗೊಳ್ಳದ ಮಾತೃಪೂರ್ಣ

ಬಂಕಾಪುರ: ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆಯು ಬಂಕಾಪುರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳ ಅಂಗವಾಡಿ ಕೇಂದ್ರಗಳಲ್ಲಿ ಜಾರಿಯೇ ಆಗಿಲ್ಲ.

ಇದಕ್ಕೆ ಪುಷ್ಠಿ ನೀಡುವಂತೆ ಬಂಕಾಪುರ ಬಿ ಕ್ಲಸ್ಟರ್ ವ್ಯಾಪ್ತಿಯ ಬಾಡ ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳಲ್ಲಿ ಈ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ. 2017ರ ಅಕ್ಟೋಬರ್ 2ರಿಂದ ರಾಜ್ಯಾದ್ಯಂತ ಆರಂಭಗೊಂಡಿರುವ ಈ ಯೋಜನೆ ಬಾಡ ಗ್ರಾಮದಲ್ಲಿ ಆರಂಭದ ಒಂದು ದಿನ ಮಾತ್ರ ಜಾರಿಗೆ ಬಂದಿದೆ. ಅಂದಿನಿಂದ ಇಂದಿನವರೆಗೂ ಈ ಯೋಜನೆ ಬಂದಾಗಿದೆ. ಹೀಗಾಗಿ ಸರ್ಕಾರಿ ಯೋಜನೆ ಸೌಲಭ್ಯ ಗರ್ಭಿಣಿಯರಿಗೆ, ಬಾಣಂತಿಯರಿಗೆ ತಲುಪಿಲ್ಲ. ಈ ಬಗೆಗೆ ಮಾಹಿತಿ ಇದ್ದರೂ ಶಿಗ್ಗಾಂವಿ ಸಿಡಿಪಿಒ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ದೂರು ಕೇಳಿಬರುತ್ತಿವೆ.

ಯೋಜನೆ ಜಾರಿಯಾಗದಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯೇ ಕಾರಣ ಎನ್ನಲಾಗಿದೆ. ಇಲಾಖೆ ದಾಖಲೆಗಾಗಿ ಗರ್ಭಿಣಿಯರ ಮತ್ತು ಬಾಣಂತಿಯರ ಹೆಸರು ನೋಂದಾಯಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳಿಗೆ ಯೋಜನೆ ಬಗೆಗೆ ಅರಿವು ಮೂಡಿಸಿ ಪೌಷ್ಟಿಕ ಆಹಾರ ಪೂರೈಕೆ ಮಾಡಲು ಮುಂದಾಗದೆ ಇರುವುದು ಯೋಜನೆ ವಿಫಲಗೊಳ್ಳಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಬಗೆಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಆಯಾ ಅವರನ್ನು ವಿಚಾರಿಸಿದಾಗ, ‘ನಾವೇನು ಮಾಡೋಣ ಸರ್, ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಊಟಕ್ಕೆ ಬರುತ್ತಿಲ್ಲ. ಆದ್ದರಿಂದ ನಾವು ಅವರಿಂದ ಒಪ್ಪಿಗೆ ಪತ್ರ ಬರೆಯಿಸಿಕೊಂಡು ಆರಂಭದಿಂದ ಇಂದಿನವರೆಗೂ ಯೋಜನೆ ಸ್ಥಗಿತಗೋಳಿಸಿದ್ದೇವೆ. ಯೋಜನೆಯ ಪೌಷ್ಟಿಕ ಆಹಾರ ಸೇರಿ ಇತರೆ ಯಾವುದೇ ಆಹಾರ ಪದಾರ್ಥಗಳನ್ನು ಇಲಾಖೆಯಿಂದ ಪಡೆದುಕೊಂಡಿರುವುದಿಲ್ಲ. ಈ ಬಗೆಗೆ ನಮ್ಮ ಅಂಗನವಾಡಿ ಮೇಲ್ವಿಚಾರಕಿಯರಿಗೆ, ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

ಬಾಡ ಗ್ರಾಮ ಮಾತ್ರವಲ್ಲದೆ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ಯೋಜನೆ ಜಾರಿಯಲ್ಲಿಲ್ಲ. ಹಾಗಾದರೆ ಒಂದು ವರ್ಷಕ್ಕೂ ಅಧಿಕ ದಿನಗಳ ಕಾಲ ಸ್ಥಗಿತಗೊಂಡಿರುವ ಯೋಜನೆಯ ಪೌಷ್ಟಿಕ ಆಹಾರ, ಹಾಲು, ಮೊಟ್ಟೆ ಗುತ್ತಿಗೆದಾರರ ಪಾಲಾಗಿದೆಯೋ ಅಥವಾ ಇಲಾಖೆ ಅಧಿಕಾರಿಗಳ ಜೇಬು ಸೇರಿದೆಯೋ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.

ಇಲಾಖೆ ಅಧಿಕಾರಿಗಳು, ಸಿಬ್ಬಂದಿ ನಿರಾಸಕ್ತಿಯಿಂದ ಯೋಜನೆ ಮೊಟಕುಗೊಂಡಿದೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಸ್ಥಗಿತಗೊಂಡಿರುವ ಯೋಜನೆ ಬಗೆಗೆ ಸಮಗ್ರ ತನಿಖೆ ನಡೆಸಿ, ವ್ಯವಸ್ಥಿತವಾಗಿ ಜಾರಿಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಬಾಡ ಹಾಗೂ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಮಾತೃಪೂರ್ಣ ಯೋಜನೆ ಸ್ಥಗಿತಗೊಂಡ ಬಗೆಗೆ ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.

 |ಪರಶುರಾಮ ಘಾಜಿಯವರ, ಸಿಡಿಪಿಒ ಶಿಗ್ಗಾಂವಿ