ಮೀನುಗಾರರ ಪತ್ತೆಗೆ ಕೇಂದ್ರ ಸಹಕರಿಸುತ್ತಿಲ್ಲವೆಂದು ಆರೋಪ

ಗಂಗೊಳ್ಳಿ: ರಾಜ್ಯ ಸರ್ಕಾರ ನಾಪತ್ತೆಯಾದ ಮೀನುಗಾರರ ಪತ್ತೆಗೆ ಏನೆಲ್ಲ ಕ್ರಮಗಳನ್ನು ಕೈಗೊಂಡಿದೆ, ಕೇಂದ್ರದ ನೆರವು ಕೋರಿ ಸಿಎಂ ಬರೆದ ಪತ್ರ, ಕೇಂದ್ರ ಸಚಿವರ ಭೇಟಿಗೆ ಗೃಹ ಸಚಿವರು ಸಮಯ ಕೇಳಿರುವುದರ ಬಗ್ಗೆ ನಮ್ಮಲ್ಲಿ ದಾಖಲೆಯಿದೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಂಡಿದೆ. ಈ ಬಗ್ಗೆ ಶೋಭಾ ಕರಂದ್ಲಾಜೆಯವರ ಜತೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮೀನುಗಾರಿಕಾ ಸಚಿವ ವೆಂಕಟ ರಾವ್ ನಾಡಗೌಡ ಸವಾಲು ಹಾಕಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಮೀನುಗಾರರಲ್ಲಿ ಮತ ಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ತಪ್ಪಾಗಿ ಅರ್ಥೈಸಲಾಗಿದೆ: ನಾಪತ್ತೆಯಾದ ಮೀನುಗಾರರು ಉಡುಪಿಯವರಲ್ಲ, ಕಾರವಾರದವರು ಎನ್ನುವ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಹೇಳಿದ್ದು, ನಾಪತ್ತೆಯಾದ ಮೀನುಗಾರರಲ್ಲಿ ಕಾರವಾರದವರಿದ್ದರೂ ಸಹ ಅಲ್ಲಿ 3 ಬಾರಿ ಗೆದ್ದು ಸಂಸದರಾಗಿ, ಈಗ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗಡೆ ಈ ಮೀನುಗಾರರ ಮನೆಗೆ ಭೇಟಿ ನೀಡಿಲ್ಲ. ಅವರನ್ನು ಪತ್ತೆ ಹಚ್ಚುವ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿರುವುದಾಗಿ ಸಚಿವ ನಾಡಗೌಡ ಸ್ಪಷ್ಟನೆ ನೀಡಿದರು.

ಮೀನುಗಾರಿಕೆ ಬಗ್ಗೆ ಜ್ಞಾನವಿಲ್ಲ ಎನ್ನುವ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಹೌದು ಒಪ್ಪಿಕೊಳ್ಳುತ್ತೇನೆ. ನನಗೆ ಮೀನುಗಾರಿಕೆ ಕುರಿತು ಹೆಚ್ಚಿನ ಜ್ಞಾನವಿಲ್ಲ. ಜ್ಞಾನವಿಲ್ಲದವನಾದರೂ ಕೇವಲ 7-8 ತಿಂಗಳಲ್ಲಿಯೇ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಶಾಶ್ವತವಾಗಿ ಸೀಮೆಎಣ್ಣೆ ಸಿಗುವಂತೆ ಮಾಡಿದ್ದೇನೆ. ಆದರೆ ಮೀನುಗಾರಿಕೆ ಬಗ್ಗೆ ಜ್ಞಾನವಿರುವ ಶೋಭಾ ಅವರು ಮೀನುಗಾರರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.