ತಿ.ನರಸೀಪುರ: ತಾಲೂಕಿನಲ್ಲಿ ಪತ್ರಕರ್ತರ ಭವನ ಇಲ್ಲದಿರುವುದು ನೋವಿನ ಸಂಗತಿಯಾಗಿದೆ ಎಂದು ವಾಟಾಳ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕು ಪತ್ರಕರ್ತರ ಸಂಘವು ಹೊರತಂದಿರುವ ಕ್ಯಾಲೆಂಡರ್ ಅನ್ನು ತಮ್ಮ ಮಠದಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು.
ಪತ್ರಕರ್ತರು ಮಾಡುವ ವರದಿಗಳಿಂದ ಸಮಾಜದ ಎಷ್ಟೋ ಸಮಸ್ಯೆಗಳು ಬಗೆಹರಿದಿವೆ. ಅಲ್ಲದೆ ಎಷ್ಟೋ ಕುಟುಂಬಕ್ಕೆ ಒಳಿತಾಗಿದೆ.ಪತ್ರಕರ್ತರು ಶ್ರಮ ವಹಿಸಿ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ತಾಲೂಕಿನಲ್ಲಿ ಅವರಿಗೆ ಸ್ವಂತ ನೆಲೆ ಇಲ್ಲದಂತಾಗಿದೆ ಎಂದು ಹೇಳಿದರು.
ತಾಲೂಕಿಗೆ ಪತ್ರಕರ್ತರ ಭವನದ ಅವಶ್ಯಕತೆ ಇದ್ದು, ಈಗಿರುವ ಪ್ರಭಾವಿ ಇಬ್ಬರು ಶಾಸಕರ ಬೆನ್ನುಹತ್ತಿ ಭವನಕ್ಕೆ ಜಾಗ ಗುರುತಿಸಿ ಅನುದಾನ ತರಬೇಕು. ಈ ಕಾರ್ಯಕ್ಕೆ ನಾನು ನಿಮ್ಮೊಂದಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ಮಠದ ಕಿರಿಯ ಶ್ರೀ ಶಿವಕುಮಾರಸ್ವಾಮೀಜಿ, ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಬಿ.ಪ್ರಕಾಶ್, ಮಹದೇವ(ಮಾಧು), ಎಸ್.ಉದಯಶಂಕರ್, ಸದಸ್ಯರಾದ ಚನ್ನಬಸವಣ್ಣ, ತಲಕಾಡು ಅಕ್ರಂಪಾಷ, ಎಸ್.ಕುಮಾರ್, ಎಂ.ನಾರಾಯಣ್, ಆನಂದ್‌ಕುಮಾರ್, ಮೂಗೂರು ಸಿದ್ದರಾಜು, ಸಿಂಚನ ನವೀನ್, ಉಪನ್ಯಾಸಕ ಕುಮಾರಸ್ವಾಮಿ, ಶ್ರೀ ಮಠದ ರಾಜು, ಕುಮಾರ ಮತ್ತಿತರರಿದ್ದರು.