ರೈತರಲ್ಲ, ರಾಮ ಮಂದಿರವೇ ಕೇಂದ್ರದ ಆದ್ಯತೆ : ಶರದ್​ ಪವಾರ್​

ಮುಂಬೈ: ರೈತರ ಅಭ್ಯುದಯಕ್ಕಾಗಿ ಸೂಕ್ತ ನೀತಿಗಳನ್ನು ರೂಪಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಫಲವಾಗಿದೆ. ಈ ಸರ್ಕಾರಕ್ಕೆ ರೈತರಲ್ಲ, ರಾಮ ಮಂದಿರ ನಿರ್ಮಾಣವೇ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್​ ಪಕ್ಷದ (ಎನ್​ಸಿಪಿ) ವರಿಷ್ಠ ಶರದ್​ ಪವಾರ್​ ಆರೋಪಿಸಿದ್ದಾರೆ.

ಮುಂಬೈನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿರುವ ಅವರು, ” ದೇಶದ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗಿಂತಲೂ, ರಾಮ ಮಂದಿರ ನಿರ್ಮಾಣವೇ ಸರ್ಕಾರದ ಪ್ರಧಾನ ಆದ್ಯತೆಯಾಗಿದೆ. ಸರ್ಕಾರ ಮಂದಿರದ ವಿಚಾರವನ್ನು ಮುಂದಿಟ್ಟುಕೊಂಡು ದೇಶದ ಜನರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ.

” ದೇಶದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಸೂಕ್ತ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿಲ್ಲ. ಆದರೆ, ರಾಮ ಮಂದಿರ ನಿರ್ಮಾಣದ ವಿಚಾರ ಮಾತ್ರ ಬಹುವಾಗಿ ಚರ್ಚೆಯಾಗುತ್ತಿದೆ. ದಿಕ್ಕು ತಪ್ಪಿಸುವ ಇಂಥ ತಂತ್ರಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು,” ಎಂದು ಶರದ್​ ಪವಾರ್​ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಹಿಂದೆ ರಫೇಲ್​ ಹಗರಣದ ವಿಚಾರದಲ್ಲಿ ಶರದ್​ ಪವಾರ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು.